Commonwealth Games 2022 :ಸೆಮಿಫೈನಲ್‌ಗೆ ಭಾರತ ಪುರುಷರ ಹಾಕಿ ತಂಡ ಲಗ್ಗೆ

By Naveen KodaseFirst Published Aug 5, 2022, 9:56 AM IST
Highlights

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸೆಮೀಸ್‌ಗೆ ಭಾರತ ತಂಡ ಲಗ್ಗೆ
ವೇಲ್ಸ್‌ ತಂಡದ ಎದುರು ಭರ್ಜರಿ ಗೆಲುವು ಸಾಧಿಸಿದ ಮನ್‌ಪ್ರೀತ್ ಸಿಂಗ್ ಪಡೆ
ಹರ್ಮನ್‌ಪ್ರೀತ್‌ ಸಿಂಗ್‌ ಬಾರಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತಕ್ಕೆ ಸುಲಭ ಜಯ

ಬರ್ಮಿಂಗ್‌ಹ್ಯಾಮ್‌(ಆ.05) ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಬಳಿಕ ಪುರುಷರ ತಂಡವೂ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ‘ಬಿ’ ಗುಂಪಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಬಾರಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಭಾರತ, ವೇಲ್ಸ್‌ ವಿರುದ್ಧ 4-1 ಗೆಲುವು ಸಾಧಿಸಿತು. ಇದರೊಂದಿಗೆ 4 ಪಂದ್ಯಗಳಲ್ಲಿ 10 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಭಾರತ ಸೆಮೀಸ್‌ ಪ್ರವೇಶಿಸಿತು. 

ಪಂದ್ಯದುದ್ದಕ್ಕೂ ವೇಲ್ಸ್‌ ಮೇಲೆ ಹಿಡಿತ ಸಾಧಿಸಿದ್ದ ಭಾರತದ ಪರ 18, 19 ಹಾಗೂ 41ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ 3 ಗೋಲು ಬಾರಿಸಿದರು. ಇದು ಟೂರ್ನಿಯಲ್ಲಿ ಅವರ 2ನೇ ಹ್ಯಾಟ್ರಿಕ್‌. ಮತ್ತೊಂದು ಗೋಲನ್ನು ಗುರ್ಜಂತ್‌ ಸಿಂಗ್‌(49ನೇ ನಿಮಿಷ) ಹೊಡೆದರು. ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 4-4ರ ಡ್ರಾಗೆ ತೃಪ್ತಿಪಟ್ಟಿತ್ತು. 3ನೇ ಪಂದ್ಯದಲ್ಲಿ ಕೆನಡಾವನ್ನು 8-0 ಗೋಲುಗಳಿಂದ ಬಗ್ಗುಬಡಿದಿತ್ತು.

ಬಾಕ್ಸಿಂಗ್‌: ಲವ್ಲೀನಾಗೆ ಸೋಲು, ಅಮಿತ್‌, ನಿಖಾತ್‌ ಸೆಮೀಸ್‌ಗೆ

ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. ಇದೇ ವೇಳೆ ಹಾಲಿ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌, ಅಮಿತ್‌ ಪಂಘಾಲ್‌, ಜ್ಯಾಸ್ಮಿನ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ.

Commonwealth Games: ಹೈಜಂಪ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ತೇಜಸ್ವಿನ್ ಶಂಕರ್

ಬುಧವಾರ ಮಹಿಳೆಯರ 48 ಕೆ.ಜಿ. ವಿಭಾಗದ ಕ್ವಾರ್ಟರ್‌ನಲ್ಲಿ ಲವ್ಲೀನಾ, ವೇಲ್ಸ್‌ನ ರೋಸಿ ಎಕ್ಸೆಸ್‌ ವಿರುದ್ಧ 2-3 ಅಂತರದಲ್ಲಿ ಸೋತು ಹೊರಬಿದ್ದರು. 50 ಕೆ.ಜಿ. ವಿಭಾಗದಲ್ಲಿ ನಿಖಾತ್‌, ವೇಲ್ಸ್‌ನ ಹೆಲೆನ್‌ ಜಾನ್ಸ್‌ ವಿರುದ್ಧ 5-0 ಅಂತರದಲ್ಲಿ ಗೆದ್ದರೆ, ಕಳೆದ ಆವೃತ್ತಿಯಲ್ಲಿ ಬೆಳ್ಳಿ ಗೆದ್ದಿದ್ದ ಅಮಿತ್‌ 48-51 ಕೆ.ಜಿ. ವಿಭಾಗದಲ್ಲಿ ಸ್ಕಾಟ್ಲೆಂಡ್‌ನ ಲೆನನ್‌ ಮುಲ್ಲಿಗನ್‌ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ಇನ್ನು ಮಹಿಳೆಯರ 60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಜ್ಯಾಸ್ಮಿನ್‌ ಲಂಬೊರಿಯಾ ನ್ಯೂಜಿಲೆಂಡ್‌ನ ಟ್ರಾಯ್‌ ಗಾರ್ಟನ್‌ ವಿರುದ್ಧ ಗೆದ್ದು ಸೆಮೀಸ್‌ಗೇರಿದರು. ಇದರೊಂದಿಗೆ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ 5 ಪದಕ ಖಚಿತವಾಗಿದೆ.

ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ ಪ್ರಿಕ್ವಾರ್ಟರ್‌ಗೆ

ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕಳೆದ ಬಾರಿಯ ಬೆಳ್ಳಿ ವಿಜೇತ ಸಿಂಧು ಗುರುವಾರ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮಾಲ್ಡೀವ್‌್ಸನ ಫಾತಿಮತ್‌ ನಬಾಹ ವಿರುದ್ಧ 21-14, 21-11 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರೆ, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಉಗಾಂಡದ ಡ್ಯಾನಿಲ್‌ ವನಗಲಿಯಾರನ್ನು 21-9, 21-9 ಗೇಮ್‌ಗಳಿಂದ ಸೋಲಿಸಿದರು.

ಸ್ಕ್ವಾಶ್‌: ಕ್ವಾರ್ಟರ್‌ಗೆ ಸೌರವ್‌, ದೀಪಿಕಾ ಪಲ್ಲಿಕಲ್‌ ಜೋಡಿ

ಸ್ಕ್ವಾಶ್ ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ಗೆ ಭಾರತದ ಸೌರವ್‌ ಘೋಷಾಲ್‌ ಮತ್ತು ದೀಪಿಕಾ ಪಲ್ಲಿಕಲ್‌ ಪ್ರವೇಶಿಸಿದ್ದಾರೆ. ಈ ಜೋಡಿಯು ಪ್ರಿ ಕ್ವಾರ್ಟರ್‌ನಲ್ಲಿ ಎಮಿಲಿ ವಿಟ್‌ಲಾಕ್‌ ಮತ್ತು ಪೀಟರ್‌ ಕ್ರೀಡ್‌ ವಿರುದ್ಧ 11-8, 11-4 ಸೆಟ್‌ಗಳಲ್ಲಿ ಜಯಗಳಿಸಿತು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಯುವ ಆಟಗಾರ್ತಿಯರಾದ ಅನಾಹತ್‌ ಸಿಂಗ್‌ ಮತ್ತು ಸುನಯನ ಕುರುವಿಲ್ಲಾ ಪ್ರಿ ಕ್ವಾರ್ಟರ್‌ಗೇರಿದರೆ, ಮಿಶ್ರ ಡಬಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಜೋಶ್ನಾ ಚಿನ್ನಪ್ಪ-ಹರೀಂದರ್‌ ಸಂಧು ಸೋತು ಹೊರಿಬಿದ್ದರು.

click me!