ಬರೋಬ್ಬರಿ ಎರಡು ತಿಂಗಳ ಹಿಂದೆ ಪ್ರವಾಹದಲ್ಲಿ ನಲುಗಿದ್ದ ಹಾವೇರಿ ಜಿಲ್ಲೆಯ ರೈತರು ಬೆಳೆ ಹಾನಿ, ಕೊಚ್ಚಿ ಹೋಗಿರುವ ಜಮೀನು, ಸಾಲದ ಶೂಲಕ್ಕೆ ಅಂಜಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲೇ ಜಿಲ್ಲೆಯಲ್ಲಿ 32 ರೈತರು
ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ಬೆಳವಾಣಿಗೆಯಾಗಿದೆ.
ಬೆಂಗಳೂರು (ಅ. 10): ಬರೋಬ್ಬರಿ ಎರಡು ತಿಂಗಳ ಹಿಂದೆ ಪ್ರವಾಹದಲ್ಲಿ ನಲುಗಿದ್ದ ಹಾವೇರಿ ಜಿಲ್ಲೆಯ ರೈತರು ಬೆಳೆ ಹಾನಿ, ಕೊಚ್ಚಿ ಹೋಗಿರುವ ಜಮೀನು, ಸಾಲದ ಶೂಲಕ್ಕೆ ಅಂಜಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲೇ ಜಿಲ್ಲೆಯಲ್ಲಿ 32 ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ಬೆಳವಾಣಿಗೆಯಾಗಿದೆ.
ಸತತ ಬರಗಾಲದಿಂದ ನಾಲ್ಕು ವರ್ಷಗಳ ಕಾಲ ನೊಂದು ಬೆಂದಿದ್ದ ರೈತರು ಈ ಸಲ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. 2015- 16 ನೇ ಸಾಲಿನಲ್ಲಿ ಭೀಕರ ಬರದಿಂದ ಮಂಡ್ಯ ಹೊರತುಪಡಿಸಿದರೆ ಹಾವೇರಿ ಜಿಲ್ಲೆಯಲ್ಲೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಷ್ಟು ವರ್ಷ ಮಳೆ ಅಭಾವದಿಂದ ಬೆಳೆ ಹಾನಿಯಾಗಿದ್ದರೆ, ಈ ಸಲ ಅತಿಯಾದ ಮಳೆಯೇ ರೈತರನ್ನು ಹೈರಾಣಾಗಿಸಿದೆ.
ಸಿಕ್ಕಿಲ್ಲ ಪರಿಹಾರ: ಆಗಸ್ಟ್ ಮೊದಲ ವಾರದಲ್ಲಿ ಆರಂಭವಾದ ಮಳೆ ನಿರಂತರವಾಗಿ ಹೊಯ್ದು ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಉಕ್ಕೇರಿ ಪ್ರವಾಹ ಸೃಷ್ಟಿಸಿದ್ದವು. 10 ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದು ಹಾನಿಗೀಡಾದವು. ಜಿಲ್ಲೆಯಲ್ಲಿ 1.23 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 13 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಸಂಪೂರ್ಣ ಹಾನಿಯಾದವು. ಆದರೆ ಬೆಳೆ ಹಾನಿಯಾದ ರೈತರಿಗೆ ಇದುವರೆಗೆ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ.
ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ಬರದಿಂದ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು. 65,154 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಇದಕ್ಕೆ ರೈತರಿಗೆ ನೀಡಬೇಕಿದ್ದ ಒಟ್ಟು 33.35 ಕೋಟಿ ರು. ಬೆಳೆ ನಷ್ಟ ಪರಿಹಾರ ಇನ್ನೂ ಬಂದಿಲ್ಲ. ಇದರಿಂದ ಸಾಲದ ಬಾಧೆ ರೈತರಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದಕ್ಕೆ ಹೆದರಿರುವ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.