ಜಿಲ್ಲಾಸ್ಪತ್ರೆಯಲ್ಲಿ ರಕ್ತವಿದಳನ ಘಟಕ| ಬಹುದಿನಗಳ ಬೇಡಿಕೆ ಸಾಕಾರ| ಬೇಕಿದೆ ಜೀವ ಉಳಿಸಲು ರಕ್ತದಾನಿಗಳ ಸಹಕಾರ| ಜಿಲ್ಲೆಯ ರೋಗಿಗಳಿಗೆ ಹೆಚ್ಚು ಅನುಕೂಲ| ಜಿಲ್ಲೆಯ ಜನರ ಆಗ್ರಹದಂತೆ ರಕ್ತ ವಿದಳನ ಘಟಕ ಉನ್ನತೀಕರಿಸಲಾಗಿದೆ|
ಹಾವೇರಿ(ಅ.19): ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಕ್ತ ವಿದಳನ ಘಟಕ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯಾರಂಭಗೊಂಡಿದ್ದು, ಜಿಲ್ಲೆಯ ರೋಗಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ.
ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯಲ್ಲಿ ರಕ್ತ ವಿದಳನ ಘಟಕವನ್ನು ಅಂದಾಜು 56 ಲಕ್ಷ, ವೆಚ್ಚದ ಯಂತ್ರೋಪಕರಣಗಳನ್ನು ಅಳವಡಿಸಿ ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ ರಕ್ತ ನಿಧಿ ಕೇಂದ್ರ 2016ರಲ್ಲಿ ಪ್ರಾರಂಭವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು ಇದೀಗ ಜಿಲ್ಲೆಯ ಜನರ ಆಗ್ರಹದಂತೆ ರಕ್ತ ವಿದಳನ ಘಟಕ ಉನ್ನತೀಕರಿಸಲಾಗಿದೆ.
undefined
ರಕ್ತ ವಿದಳನ ಘಟಕ ಮಂಜೂರು ಮಾಡುವಂತೆ ಸರ್ಕಾರಕ್ಕೆ 2017 ರಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು. 2019ಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ರಕ್ತ ವಿದಳನ ಘಟಕ ಆಗಸ್ಟ್ ತಿಂಗಳಿನಿಂದ ಜನರ ಸೇವೆಗೆ ಮುಕ್ತಗೊಳಿಸಲಾಗಿದೆ. ರಕ್ತ ವಿದಳನಾ ಘಟಕದಲ್ಲಿ ವೈದ್ಯರು, ಮೆಡಿಕಲ್ ಆಫೀಸರ್, ನರ್ಸ್, ವಾಹನ ಚಾಲಕ, ಸೇವಕ ಹೀಗೆ ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 11 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಕ್ತ ವಿದಳನ ಘಟಕದಿಂದ ಬಿಪಿಎಲ್, ಥೆಲಾಸೆಮಿಯಾ, ಹಿಮೋಫೀಲಿಯಾ, ಎಚ್‌ಐವಿ, ಜೆಎಸ್‌ಎಸ್‌ಕೆ ರೋಗಿಗಳಿಗೆ ಉಚಿತ ರಕ್ತ ವಿತರಣೆ ಮಾಡಲಾಗುತ್ತದೆ. ಉಳಿದ ರೋಗಿಗಳಿಗೆ ಸರ್ಕಾರದ ಆದೇಶದನ್ವಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ 350 ರು.ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ (ನ್ಯಾಟ್ ಟೆಸ್ಟ್ ಶುಲ್ಕದೊಂದಿಗೆ) 2050 ರು. ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದರೂ ಏಲಿಜಾ ಟೆಸ್ಟ್ ಶುಲ್ಕ 995 ಇದೆ.
ಏನಿದು ರಕ್ತ ವಿದಳನ?:
ರಕ್ತದಲ್ಲಿ ನಾಲ್ಕು ಘಟಕಗಳಿರುತ್ತವೆ. ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲಾಸ್ಮಾ ಮತ್ತು ಪ್ಲೇಟ್‌ಲೆಟ್. ದಾನಿಗಳಿಂದ ಸಂಗ್ರಹಿಸುವ ರಕ್ತದಲ್ಲಿರುವ ಈ ನಾಲ್ಕು ಅಂಶಗಳನ್ನು ಪ್ರತ್ಯೇಕಿಸುವ ಘಟಕವೇ ರಕ್ತ ವಿದಳನ ಘಟಕವಾಗಿದೆ. ರಕ್ತದ ಕಣಗಳನ್ನು ಬೇರ್ಪಡಿಸಿ ರೋಗಿಗಳಿಗೆ ಬೇಕಾದಂತಹ ಅಗತ್ಯ ಕಣಗಳನ್ನು ಒದಗಿಸುವ ಕಾರ್ಯವನ್ನು ಈ ರಕ್ತ ವಿದಳನ ಘಟಕ ಮಾಡುತ್ತದೆ. ಒಂದು ಯುನಿಟ್ ರಕ್ತದಿಂದ ನಾಲ್ಕು ರೋಗಿಗಳಿಗೆ ಅನುಕೂಲವಾಗುತ್ತದೆ. ರಕ್ತದಿಂದ ಗರಿಷ್ಠ ಪ್ರಯೋಜನ ಪಡೆಯಬಹುದು. ಪ್ಲೇಟ್‌ಲೆಟ್ 5 ದಿನ ಉಳಿಯುತ್ತದೆ. ಕೆಂಪು ರಕ್ತಕಣ ಮತ್ತು ಬಿಳಿ ರಕ್ತಕಣಗಳನ್ನು 35 ದಿನಗಳವರೆಗೆ ಹಾಗೂ ಪ್ಲಾಸ್ಮಾವನ್ನು ಒಂದು ವರ್ಷದವರೆಗೂ ಕೆಡದಂತೆ ಇಡಬಹುದಾಗಿದೆ.
ರಕ್ತ ವಿದಳನ ಘಟಕಕ್ಕೆ ಎಸ್‌ಡಿಪಿ ಯಂತ್ರ, ಡೇ ಕೇರ್ ಸೆಂಟರ್, ಜಲ್ ಯಂತ್ರ ಸೇರಿದಂತೆ ರಕ್ತ ವಿದಳನ ಘಟಕಕ್ಕೆ ಪ್ರತ್ಯೇಕ ರಕ್ತ ವಾಹನದ ಅವಶ್ಯಕತೆಯೂ ಇದೆ. ಇವುಗಳಿಗೆ ದೊಡ್ಡ ಮಟ್ಟದ ಅನುದಾನ ಬೇಕಾಗಿರುವುದರಿಂದ ಇದಕ್ಕೆ ಸಹಾಯ ಮಾಡುವ ದಾನಿಗಳು ಮುಂದೆ ಬರಬೇಕು ಎನ್ನುತ್ತಾರೆ ರಕ್ತ ವಿದಳನ ಘಟಕದ ಪ್ರಯೋಗಾಲಯದ ತಂತ್ರಜ್ಞ ಬಸವರಾಜ ಕಮತದ.
ಈ ಬಗ್ಗೆ ಮಾತನಾಡಿದ ರಕ್ತ ವಿದಳನ ಘಟಕದ ವ್ಯವಸ್ಥಾಪಕ ಬಸವರಾಜ ತಳವಾರ ಅವರು, ಜಿಲ್ಲೆಯ ಜನರ ಬೇಡಿಕೆಯಂತೆ ಜಿಲ್ಲಾಸ್ಪತ್ರೆಯಲ್ಲಿ ರಕ್ತ ವಿದಳನ ಘಟಕ ಪ್ರಾರಂಭಿಸಲಾಗಿದೆ. ರಕ್ತ ಹೀನತೆಯಿಂದ ಬಳಲುವ ರೋಗಿಗಳಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ರಕ್ತ ದಾನಿಗಳು ಮುಂದೆ ಬಂದರೆ ಉತ್ತಮ ಸೇವೆ ನೀಡಲು ಅನುಕೂಲವಾಗಲಿದೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಜನರು ಮುಂದೆ ಬಂದರೆ ನೂರಾರು ಜೀವಗಳನ್ನು ಉಳಿಸಬಹುದು ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ರಕ್ತವಿದಳನ ಘಟಕ ಆರಂಭಗೊಂಡಿರುವುದು ಜಿಲ್ಲೆಯ ಬಡರೋಗಿಗಳಿಗೆ ಅನಕೂಲವಾಗಿದೆ. ಘಟಕವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಹಾವೇರಿ ನಗರದ ನಿವಾಸಿ ಪ್ರಭು ಹಿಟ್ನಳ್ಳಿ ಅವರು ತಿಳಿಸಿದ್ದಾರೆ.