ಕಳ್ಳನ ಮನಸ್ಸು ಹುಳ್ಳಹುಳ್ಳಗೆ: ಬೆನ್ನಟ್ಟಿದ ಪೊಲೀಸರಿಗೆ ಸಿಕ್ತು 85 ಲಕ್ಷ ಅಕ್ರಮ ನಗದು

By Anusha Kb  |  First Published Aug 31, 2022, 3:17 PM IST

ಪೊಲೀಸರಿಗೆ ಆ ಕಾರಿನ ಮೇಲೆ ಯಾಕೋ ಸಂಶಯ ಬಂದಿತ್ತು. ನಿಲ್ಲಿಸಿದರೂ ನಿಲ್ಲದೆ ಓಡಿದ ಕಾರನ್ನು ಅವರು ಚೇಸ್ ಮಾಡಿದ್ರು. ಜೀವದ ಹಂಗು ತೊರೆದು ಕಾರ್  ಚೇಸ್ ಮಾಡಿದ ಪೊಲೀಸರಿಗೆ,  ಅಲ್ಲಿ ಕಂಡದ್ದು ನಾಲ್ಕು ಜನ ಮತ್ತು ಕಂತೆ ಕಂತೆ ನೋಟು. ನಿನ್ನೆ ಸಂಜೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ಘಟನೆ ಇದು.


ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ 
ಹಾವೇರಿ: ಪೊಲೀಸರಿಗೆ ಆ ಕಾರಿನ ಮೇಲೆ ಯಾಕೋ ಸಂಶಯ ಬಂದಿತ್ತು. ನಿಲ್ಲಿಸಿದರೂ ನಿಲ್ಲದೆ ಓಡಿದ ಕಾರನ್ನು ಅವರು ಚೇಸ್ ಮಾಡಿದ್ರು. ಜೀವದ ಹಂಗು ತೊರೆದು ಕಾರ್  ಚೇಸ್ ಮಾಡಿದ ಪೊಲೀಸರಿಗೆ,  ಅಲ್ಲಿ ಕಂಡದ್ದು ನಾಲ್ಕು ಜನ ಮತ್ತು ಕಂತೆ ಕಂತೆ ನೋಟು. ನಿನ್ನೆ ಸಂಜೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ಘಟನೆ ಇದು.

ಎಸ್ ಹುಬ್ಬಳ್ಳಿಯಿಂದ (S Hubli) ಸಾಗರಕ್ಕೆ ಹೋಗುತ್ತಿದ್ದ ಕಾರೊಂದು  ಸಂಶಯಾಸ್ಪದ ನಡೆಯಿಂದ ಹಾನಗಲ್ ಪೊಲೀಸರಿಗೆ (Hanagal Police) ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ತಕ್ಷಣವೆ ಎಚ್ಚೆತ್ತ ಪೊಲೀಸರು ಕಾರನ್ನು ನಿಲ್ಲಿಸಲು ನೋಡಿದ್ದಾರೆ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ ಕಾರು ಮತ್ತಷ್ಟು ವೇಗ ಪಡೆದುಕೊಂಡು ಎಲ್ಲೂ ನಿಲ್ಲಿಸದೇ ಮುಂದೆ ಸಾಗಿದೆ. ಹೀಗಾಗಿ ಪೊಲೀಸರ ಅನುಮಾನಕ್ಕೆ (suspected) ಮತ್ತಷ್ಟು ಪುಷ್ಠಿ ಸಿಕ್ಕಿದ್ದು, ಈ ಟೋಯೋಟಾ ಕಾರನ್ನು ಪೊಲೀಸರು ಬೆನ್ನಟ್ಟಲು ಶುರು ಮಾಡಿದ್ದಾರೆ.

Tap to resize

Latest Videos

undefined

 ಡ್ರಗ್‌ ಪೆಡ್ಲರ್‌ಗಳನ್ನು ಚೇಸ್ ಮಾಡಿ ಹಿಡಿದ ಪೊಲೀಸರು... ವಿಡಿಯೋ ವೈರಲ್

ಬೆನ್ನಟ್ಟಿದ ಪೊಲೀಸರಿಗೆ ಕೆಲ ಕಾಲ ಆಟ ಆಡಿಸಿದ ಖದೀಮರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಛಲ ಬಿಡದೇ ಬೆನ್ನಟ್ಟಿದ ಪೊಲೀಸರಿಗೆ ಕಾರಿನಲ್ಲಿ ಬರೋಬರಿ 85 ಲಕ್ಷ ಅಕ್ರಮ ಹಣ ಇರುವುದು ಪತ್ತೆಯಾಗಿದೆ. ಹಣದ ಜೊತೆ ಕಾರಿನಲ್ಲಿದ್ದ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬೆಂಗಳೂರು ಪೊಲೀಸರ ಫಿಲ್ಮೀ ಸ್ಟೈಲ್‌ ಚೇಸಿಂಗ್, ಕಾರು ಡಿಕ್ಕಿ, ಫೈರಿಂಗ್

ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಫಯಾಜ್ ಖಾನ್ (31), ಇಮ್ರಾನ್ ಖಾನ್ (27), ಸದ್ದಾಂ ಖಾನ್ (23), ಸಯ್ಯದ್ ಅಮೀನ್ (29) ಅವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯವರು ಮತ್ತು ಇನ್ನಿಬ್ಬರು ಶಿವಮೊಗ್ಗ ಜಿಲ್ಲೆಯ ಸಾಗರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಅಡಕೆ ವ್ಯಾಪಾರಿಗಳಾಗಿದ್ದು, ಹುಬ್ಬಳ್ಳಿಯಿಂದ ಈ ಹಣವನ್ನು ಸಾಗರಕ್ಕೆ ಕೊಂಡೊಯ್ಯುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಹಾನಗಲ್ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಅಕ್ರಮ ಹಣ (Illigal money) ಸಾಗಿಸುತ್ತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಪ್ರಕರಣದ ಜಾಡು ಹಿಡಿದು ಅಕ್ರಮ ಹಣದ ಮೂಲವೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ.


ಡ್ರಗ್‌ ಪೆಡ್ಲರ್‌ಗಳನ್ನು ಚೇಸ್ ಮಾಡಿದ ಪೊಲೀಸರು

ಪೊಲೀಸರು ಕಳ್ಳರನ್ನು ದರೋಡೆಕೋರರನ್ನು ಬೆನ್ನಟ್ಟಿ ಹಿಡಿಯುವುದನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ ವಾಸ್ತವಾಗಿ ಅಂತಹ ದೃಶ್ಯಗಳು ನೋಡಲು ಸಿಗುವುದು ಬಲು ಅಪರೂಪ. ಆದಾಗ್ಯೂ ಕೆಲ ದಿನಗಳ ಹಿಂದೆ ಪೊಲೀಸರು ಡ್ರಗ್‌ ಪೆಡ್ಲರ್‌ಗಳನ್ನು ಚೇಸ್ ಮಾಡಿ ಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಸಿಂಗಂ ಸ್ಟೈಲ್‌ನಲ್ಲಿ ಡ್ರಗ್‌ ಪೆಡ್ಲರ್‌ಗಳನ್ನು ಬೇಟೆ ಆಡಿದ್ದಾರೆ. ಈ ದೃಶ್ಯ ನೋಡಿದರೆ ಸಿನಿಮಾ ಸೀನ್ ತರ ಕಾಣಿಸುತ್ತಿದೆ. ಆದರೆ ಇದು ನಿಜವಾಗಿಯೂ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ ರೀತಿ. ಪಂಜಾಬ್‌ನ ಫಿರೋಜ್‌ಪುರ ಪೊಲೀಸರು ಈ ಸಾಹಸ ಕಾರ್ಯ ಮಾಡಿದ್ದಾರೆ. ಪೊಲೀಸರು ಚೇಸ್ ಮಾಡುತ್ತಿರುವುದನ್ನು ಗಮನಿಸಿದ ದಂಧೆಕೋರರು ತಪ್ಪಿಸಿಕೊಳ್ಳಲು ನಾನಾ ತಂತ್ರಗಳನ್ನು ಮಾಡಿದ್ದಾರೆ. ಆದರೂ ಛಲ ಬಿಡದ ಪೊಲೀಸರು ಜೀವ ಪಣಕ್ಕಿಟ್ಟು ಈ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚೇಸಿಂಗ್ ವೇಳೆ ಪೆಡ್ಲರ್‌ಗಳ ಕಾರು ತಾಗಿ ಮಹಿಳೆಯೊಬ್ಬಳು ಸ್ಕೂಟಿಯಿಂದ ಬೀಳುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊನೆಗೂ ಡ್ರಗ್‌ ಪೆಡ್ಲರ್‌ಗಳ ಕಾರಿನ ಟಯರ್‌ಗೆ ಗುಂಡಿಕ್ಕುವ ಮೂಲಕ ಡ್ರಗ್‌ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

click me!