
ಹಾಸನ (ಸೆ.13) ಹಾಸನದಲ್ಲಿ ನಡೆದ ಘೋರ ದುರಂತದಲ್ಲಿ 9 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಸಂಭ್ರಮದಿಂದ ಗಣೇಶ ವಿಸರ್ಜನೆ ನಡೆಯುತ್ತಿದ್ದ ವೇಳೆ ವೇಗವಾಗಿ ಬಂದ ಕ್ಯಾಂಟರ್ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಘಟನೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಂಟರ್ ಚಾಲಕ ಭುವನೇಶ್ವರ್ ಮದ್ಯಪಾನ ವಾಹನ ಚಲಾಯಿಸುತ್ತಿದ್ದ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಮೊಸಳೆ ಹೊಸಳ್ಳಿಯಲ್ಲಿ ಕಳೆದ 50 ವರ್ಷಗಳಿಂದ ಗಣೇಶ ಕೂರಿಸಿ ಅತ್ಯಂತ ಸಂಭ್ರಮದಿಂದ ವಿಸರ್ಜನೆ ಮಾಡಿದ್ದೇವೆ. ಯಾವುದೇ ಸಂದರ್ಭದಲ್ಲೂ ಈ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಪ್ರತಿ ಭಾರಿ ತೀವ್ರ ಮುತುವರ್ಜಿ ವಹಿಸಿ, ಸರ್ಕಾರದ ನಿರ್ದೇಶನದ ಪ್ರಕಾರ ಗಣೇಶ ಹಬ್ಬ ಆಚರಿಸಿದ್ದೇವೆ. ಆದರೆ ಈ ಬಾರಿ ಕ್ಯಾಂಟರ್ ಚಾಲಕನ ಅಜಾಗರೂಕತೆ, ಆತನ ಮದ್ಯಪಾನ 9 ಮಂದಿ ಬಲಿಪಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದಾರೆ.
ಗಣೇಶ ವಿಸರ್ಜನೆ, ಜನರು ಸೇರಿದ್ದರೂ ಕ್ಯಾಂಟರ್ ಚಾಲಕ ಅತೀವೇಗದಿಂದ ವಾಹನ ಚಲಾಯಿಸಿದ್ದಾನೆ. ಮದ್ಯಪಾನ ಮಾಡಿದ್ದ ಕಾರಣ ಅತೀ ವೇಗದಿಂದ ವಾಹನ ಚಲಾಯಿಸಿದ್ದಾನೆ. ನಿಯಂತ್ರಣ ಕೈತಪ್ಪುತ್ತಿದ್ದಂತೆ ಕೈಚೆಲ್ಲಿ ಕುಳಿತಿದ್ದಾನೆ. ಇದರಿಂದ ಅಮಾಯಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಾಗಿದ್ದರು, ಅತ್ಯಂತ ಕಿರಿದಾಗಿದೆ. ಹೀಗಾಗಿ ಸಾವು ನೋವಿನ ಪ್ರಮಾಣ ಹೆಚ್ಚಾಗಿದೆ ಎಂದಿದ್ದಾರೆ.
ಹಾಸನ ದುರಂತಕ್ಕೆ ಕಾರಣನಾದ ಚಾಲಕ ಭುವನೇಶ್ ವಶಕ್ಕೆ, ಮೃತರಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ!
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಎಂಜಿನೀಯರ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೊತೆಯಾಗಿದ್ದ ವಿದ್ಯಾರ್ಥಿಗಳ ಮೇಲೆ ಕ್ಯಾಂಟರ್ ಹರಿದಿದೆ. ಸ್ಥಳದಲ್ಲೇ 9 ಮಂದಿ ಮೃತಪಟ್ಟಿದ್ದರೆ, 29ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಈ ಪಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಳುಗಳ ಪೈಕಿ ಮೂವರು ಪರಿಸ್ಥಿತಿ ಚಿಂತಾಜನಕವಾಗಿದೆ.
ಗಣೇಶ ಮೆರವಣಿಗೆಯಲ್ಲಿ ಕ್ಯಾಂಟರ್ ಹರಿದು ಮೃತಪಟ್ಟವರ ಮೃತದೇಹಗಳನ್ನು ಹಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಎಂಜಿನೀಯರಿಂಗ್ ವ್ಯಾಸಾಂಗಕ್ಕಾಗಿ ಹಾಸನಕ್ಕೆ ಆಗಮಿಸಿದ್ದರು. ತಡರಾತ್ರಿ 3.30ರ ವರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ 9 ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗಿದೆ.
PHOTOS: ಗಣೇಶ ಭಕ್ತರ ಮೇಲೆ ಸಾವಿನಂತೆ ಎರಗಿದ ಕ್ಯಾಂಟರ್, ರಸ್ತೆಯಲ್ಲೇ ಹೆಣವಾದ 8 ಮಂದಿ!
ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭೀಕರ ಅಪಘಾತ ಸಂಭವಿಸಿ ಹಲವರು ಜೀವ ಕಳೆದುಕೊಂಡು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಗಣಪತಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದು ಭಕ್ತರ ಸಾವುಂಟಾಗಿರುವುದು ನನಗೆ ಅತ್ಯಂತ ದುಃಖ ಉಂಟು ಮಾಡಿದೆ. ಇದು ಅತೀ ದುರ್ದೈವದ ಘಟನೆಯಾಗಿದ್ದು, ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಎಲ್ಲಾ ಗಾಯಾಳುಗಳು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರಕಾರ ಗಾಯಾಳುಗಳಿಗೆ ಉತ್ತಮ, ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಘಟನೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.