-ಉತ್ತರಪ್ರದೇಶ ದೇವ್ರಿಯಾ ಜಿಲ್ಲೆಯಲ್ಲಿ ಬಾಲಿಕಾ ಗೃಹವೊಂದರ ಲೈಂಗಿಕ ಶೋಷಣೆ ಪ್ರಕರಣ ಬೆಳಕಿಗೆ
-24 ಬಾಲಕಿಯರ ರಕ್ಷಣೆ, 18 ಬಾಲಕಿಯರು ನಾಪತ್ತೆ
ದೇವ್ರಿಯಾ/ಲಖನೌ (ಆ. 08): ಬಿಹಾರ ಬಾಲಿಕಾ ಗೃಹದ ರೀತಿಯಲ್ಲೇ ಉತ್ತರಪ್ರದೇಶದ ಬಾಲಿಕಾ ಗೃಹವೊಂದರಲ್ಲೂ ಲೈಂಗಿಕ ಶೋಷಣೆ ಪ್ರಕರಣ ಬೆಳಕಿಗೆ ಬಂದಿದೆ.
ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎನ್ನಲಾದ 24 ಬಾಲಕಿಯರನ್ನು ರಕ್ಷಿಸಲಾಗಿದ್ದು, ಈ ಸಂಬಂಧ ಬಾಲಿಕಾ ಗೃಹ ನಡೆಸುತ್ತಿದ್ದ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮುಜುಗರಕ್ಕೀಡಾದ ಆದಿತ್ಯನಾಥ್ ಸರ್ಕಾರ ‘ಡ್ಯಾಮೇಜ್ ಕಂಟ್ರೋಲ್’ಗೆ ಇಳಿದಿದ್ದು, ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿದೆ.
ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ದೇವ್ರಿಯಾದಲ್ಲಿ ವಿದ್ಯಾವಾಸಿನಿ ಮಹಿಳಾ ಸಮಾಜ ಸೇವಾ ಸಂಸ್ಥಾನ ಎಂಬ ಸ್ವಯಂಸೇವಾ ಸಂಸ್ಥೆಯಿದ್ದು, ಇದು ಸರ್ಕಾರದ ಅನುದಾನದಲ್ಲಿ ಬಾಲಿಕಾ ಗೃಹ ನಡೆಸುತ್ತದೆ. ಇದರಲ್ಲಿ 42 ಜನ ಬಾಲಕಿಯರಿದ್ದಾರೆ. ಇವರಲ್ಲಿ 24 ಜನರನ್ನು ರಕ್ಷಿಸಲಾಗಿದ್ದು, ಇನ್ನುಳಿದ 18 ಬಾಲಕಿಯರು ನಾಪತ್ತೆಯಾಗಿದ್ದಾರೆ. ಲೈಂಗಿಕ ಶೋಷಣೆ ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಲಿಕಾ ಗೃಹಕ್ಕೆ ಬೀಗ ಜಡಿಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೀತಾ ಬಹುಗುಣ ಜೋಶಿ ತಿಳಿಸಿದರು.
ಕಳೆದ ವರ್ಷವೇ ಹಿಂದೆಯೇ ಈ ಬಾಲಿಕಾ ಗೃಹದ ಪರವಾನಗಿ ರದ್ದುಗೊಳಿಸಲಾಗಿತ್ತು. ಆದಾಗ್ಯೂ ಬಾಲಿಕಾ ಗೃಹ ಇನ್ನೂ ನಡೆಯುತ್ತಿತ್ತು. ಇದರ ಹಿಂದೆ ಅಧಿಕಾರಿಗಳ ನಿರ್ಲಕ್ಷ್ಯ ಗೋಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಜೋಶಿ ವಿವರಿಸಿದರು.
ಶೋಷಣೆಗೆ ಒಳಗಾಗಿದ್ದರೆ ಎನ್ನಲಾದ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ದಾಖಲಿಸಲಾಗುವುದು ಎಂದು ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿ ಆನಂದ ಕುಮಾರ್ ತಿಳಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?:
10 ವರ್ಷದ ಬಾಲಕಿಯೊಬ್ಬಳು ಬಾಲಿಕಾ ಗೃಹದಿಂದ ಓಡಿ ಹೋಗಿ ಸಮೀಪದ ಮಹಿಳಾ ಪೊಲೀಸ್ ಠಾಣೆಯೊಂದರಲ್ಲಿ ದೂರು ನೀಡಿದಳು. ಆಕೆ ತಮ್ಮ ಮೇಲೆ ಆಗುತ್ತಿರುವ ಲೈಂಗಿಕ ಶೋಷಣೆಯ ಭಯಾನಕ ಕಥೆ ವಿವರಿಸಿದಳು. ಆಗ ಬಾಲಿಕಾ ಗೃಹದಲ್ಲಿನ ದಂಧೆ ವಿಚಾರ ಬೆಳಕಿಗೆ ಬಂತು. ‘ಹಲವಾರು ಸಲ ಬಿಳಿ, ಕೆಂಪು ಹಾಗೂ ಕಪ್ಪು ಕಾರುಗಳು ಬಾಲಿಕಾ ಗೃಹಕ್ಕೆ ಬರುತ್ತಿದ್ದವು. ಬಾಲಕಿಯರನ್ನು ಅದರಲ್ಲಿ ಕರೆದೊಯ್ಯಲಾಗುತ್ತಿತ್ತು. ಬೆಳಗ್ಗೆ ಆಗುವುದರೊಳಗೆ ಬಾಲಕಿಯರನ್ನು ಮರಳಿ ಕರೆತರಲಾಗುತ್ತಿತ್ತು. ಆಗ ಈ ರೀತಿ ಹೋಗಿ ಬಂದ ಬಾಲಕಿಯರು ಅಳುತ್ತಿದ್ದರು’ ಎಂದು ವೃತ್ತಾಂತವನ್ನು ಪಾರಾಗಿ ಬಂದ ಬಾಲಿಕೆ
ವಿವರಿಸಿದ್ದಾಳೆ.