ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ

By Web DeskFirst Published Aug 7, 2018, 9:46 AM IST
Highlights

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ರಾಜ್ಯಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡಿದೆ. ಇದರಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಧೇಯಕಕ್ಕೆ ಸಮ್ಮತಿ ಸಿಕ್ಕಂತಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ಕಾಯ್ದೆ  ಜಾರಿಯಾಗಲಿದೆ.  

ನವದೆಹಲಿ (ಆ. 07): ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ರಾಜ್ಯಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡಿದೆ. ಇದರಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಧೇಯಕಕ್ಕೆ ಸಮ್ಮತಿ ಸಿಕ್ಕಂತಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ಕಾಯ್ದೆ ಜಾರಿಯಾಗಲಿದೆ. ಅದಾದ ತಕ್ಷಣವೇ ಆಯೋಗ ರಚಿಸುವುದಾಗಿ ಸರ್ಕಾರ ಹೇಳಿದೆ.

ಜು.31 ರಂದು ರಾಜ್ಯಸಭೆಯಲ್ಲಿ ಈ ಮಸೂದೆ ಕೆಲವೊಂದು ತಿದ್ದುಪಡಿಗಳೊಂದಿಗೆ ಅಂಗೀಕಾರವಾಗಿತ್ತು. ಆ ತಿದ್ದುಪಡಿಗಳನ್ನು ರದ್ದುಗೊಳಿಸಿ ಆ.2 ರಂದು ಲೋಕಸಭೆ ತನ್ನ ಸಮ್ಮತಿಯ ಮುದ್ರೆಯೊತ್ತಿತ್ತು. ಆ ವಿಧೇಯಕವನ್ನು ಸೋಮವಾರ ಮತ್ತೆ ರಾಜ್ಯಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಮಸೂದೆಯನ್ನು ಸದನದ ಅವಗಾಹನೆಗಾಗಿ  ಮಂಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು  ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್, ದೌರ್ಜನ್ಯದ ವಿರುದ್ಧ ಹೋರಾಡಲು ಹಿಂದುಳಿದ ವರ್ಗಗಳಿಗೆ ಈ ಮಸೂದೆ ನೆರವಾಗಲಿದೆ. ಅವರಿಗೆ ತ್ವರಿತ ನ್ಯಾಯ ಕೊಡಿಸಲಿದೆ ಎಂದು ಹೇಳಿದರು.

ರಾಜ್ಯಗಳು ತಮ್ಮದೇ ಆದ ಹಿಂದುಳಿದ ವರ್ಗಗಳ ಆಯೋಗಗಳನ್ನು ಹೊಂದಿರುತ್ತವೆ. ಹೀಗಾಗಿ ರಾಜ್ಯಗಳ ಹಕ್ಕಿನಲ್ಲಿ ಈ ವಿಧೇಯಕ ಮೂಗು ತೂರಿಸುವುದಿಲ್ಲ. ಉದ್ದೇಶಿತ ಆಯೋಗ ಕೇಂದ್ರಕ್ಕೆ ಮಾತ್ರ ಸಂಬಂಧಿಸಿದ್ದು. ರಾಜ್ಯಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯಗಳು ತಮ್ಮದೇ ಆದ ಒಬಿಸಿ ಜನರ ಜಾತಿ ಪಟ್ಟಿಗಳನ್ನು ಹೊಂದಿವೆ. ಕೇಂದ್ರದ ಬಳಿಯೂ ಪ್ರತ್ಯೇಕ ಪಟ್ಟಿ ಇದೆ. ಆಯೋಗ ಜಾತಿಗಳ ಸೇರ್ಪಡೆ ಹಾಗೂ ಅಳಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ವಿವರಿಸಿದರು.

ಇದೇ ವೇಳೆ, ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಿ, ಅದರ ಆಧಾರದಲ್ಲಿ ಮೀಸಲಾತಿ ನೀಡುವಂತೆ ಕೆಲವು ಸದಸ್ಯರು ಆಗ್ರಹಪಡಿಸಿದರು. 

click me!