ರಾಮನಗರ ಚಿತ್ರನಗರಿಗೆ ಸಿದ್ದರಾಮಯ್ಯ ಕೊಕ್ಕೆ

By Web DeskFirst Published Aug 7, 2018, 8:20 AM IST
Highlights

- ಚಿತ್ರ ನಗರಿಯನ್ನು ರಾಮನಗರಕ್ಕೆ ಸ್ಥಳಾಂತರಕ್ಕೆ ಸಿದ್ದರಾಮಯ್ಯ  ಆಕ್ಷೇಪ
- ತಮ್ಮ ಬಜೆಟ್‌ನಲ್ಲಿ ಮೈಸೂರಲ್ಲಿ ಚಿತ್ರ ನಗರಿ ಸ್ಥಾಪನೆ ಎಂದು ಸಿದ್ದರಾಮಯ್ಯ ಘೋಷಿಸಿದ್ದರು

-ಮೈಸೂರಿನಲ್ಲೇ ಸ್ಥಾಪಿಸಲು ಎಚ್ ಡಿಕೆಗೆ ಆಗ್ರಹ 

ಬೆಂಗಳೂರು (ಆ. 08): ಇತ್ತೀಚೆಗೆ ತಮ್ಮ ಅವಧಿಯ ಕೆಲವು ಅನ್ನಭಾಗ್ಯ ಮತ್ತಿತರ ಯೋಜನೆಗಳಿಗೆ ಅಡ್ಡಿ ಮಾಡಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ರಾಮನಗರದಲ್ಲಿ ಚಿತ್ರನಗರಿ ಸ್ಥಾಪನೆ ಮಾಡುವುದಕ್ಕೆ ಕೊಕ್ಕೆ ಹಾಕಿದ್ದಾರೆ.

ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು (ಫಿಲ್ಮ್‌ಸಿಟಿ) ರಾಮನಗರದಲ್ಲಿ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವ ಕುಮಾರಸ್ವಾಮಿ ಕ್ರಮಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ವರನಟ ಡಾ. ರಾಜ್‌ಕುಮಾರ್ ಕನಸಿನಂತೆ ಚಿತ್ರನಗರಿಯನ್ನು ಮೈಸೂರಿನಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ಮೈಸೂರು ನಗರ ಮೊದಲಿನಿಂದಲೂ ಚಲನಚಿತ್ರಗಳ ಚಿತ್ರೀಕರಣಕ್ಕೆ ಖ್ಯಾತಿ ಪಡೆದಿದೆ. ಇಲ್ಲಿ ಚಿತ್ರೀಕರಣ ಮಾಡಬಲ್ಲ 250 ಕ್ಕೂ ಹೆಚ್ಚು ಸ್ಥಳಗಳಿವೆ. ಇದರಿಂದ ರಾಮನಗರದಲ್ಲಿ ನಿರ್ಮಿಸುವ ಪ್ರಸ್ತಾಪವನ್ನು ಮರುಪರಿಶೀಲಿಸಿ ಮೈಸೂರಿನಲ್ಲಿ ಸ್ಥಾಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ನಗರದ ಹೊರವಲಯದಲ್ಲಿರುವ ತಾಂಡವಪುರದ ಬಳಿ 100 ಎಕರೆ ವಿಸ್ತೀರ್ಣದಲ್ಲಿ ಫಿಲ್ಮ್‌ಸಿಟಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದನ್ನು ರಾಮನಗರದಲ್ಲಿ ನಿರ್ಮಿಸುವುದಾಗಿ ಪ್ರಸ್ತಾಪಿಸಿ ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇತ್ತೀಚೆಗೆ ಪತ್ರಬರೆದಿದ್ದಾರೆ.

ಪತ್ರದಲ್ಲಿ ಏನಿದೆ?: -

ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪನೆಯಾಗಬೇಕು ಎಂಬುದು ಕನ್ನಡ ಚಿತ್ರರಂಗದ ಬಹುವರ್ಷಗಳ ಕನಸು. ವಿಶ್ವವಿಖ್ಯಾತ ಮೈಸೂರಿನಲ್ಲಿ ಹಲವು ಭಾಷಿಕರು ಚಿತ್ರೀಕರಣಕ್ಕಾಗಿ ಬರುತ್ತಾರೆ. ಮೈಸೂರು, ಸುತ್ತಮುತ್ತಲಿನ ಪ್ರಕೃತಿಯ ಸೊಬಗು, ಪಾರಂಪರಿಕ ಕಟ್ಟಡಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಹೀಗಾಗಿಯೇ ನಿತ್ಯ ಒಂದಿಲ್ಲೊಂದು ಚಿತ್ರೀಕರಣ ಇಲ್ಲಿ ನಡೆಯುತ್ತಿರುತ್ತದೆ.

-1945 ರಿಂದಲೂ ಮೈಸೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗಳು ನಡೆಯುತ್ತಲೇ ಇವೆ. 16 ಅರಮನೆಗಳು, 250 ಕ್ಕೂ ಲೋಕೇಷನ್ಸ್, ನದಿ, ನಾಲೆ, ಕಾಲುವೆ, ಬೆಟ್ಟ- ಗುಡ್ಡಗಳು ಚಿತ್ರೀಕರಣಕ್ಕೆ ಪ್ರಶಸ್ತವಾಗಿದೆ. ಇದೀಗ ವಿಮಾನ ನಿಲ್ದಾಣ ಸೌಲಭ್ಯವೂ ಇರುವುದರಿಂದ ಚಿತ್ರೀಕರಣಕ್ಕಾಗಿ ದೇಶ, ವಿದೇಶದಿಂದ ಬರುವವರಿಗೆ ಅನುಕೂಲವಾಗುತ್ತದೆ.

ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾಗಿದ್ದು ನವಜ್ಯೋತಿ ಸ್ಟುಡಿಯೋ, ನೂರಾರು ಸಿನಿಮಾಗಳಿಗಾಗಿ ಅಲ್ಲಿ ಚಿತ್ರೀಕರಣ ನಡೆದಿದೆ. ಪ್ರೀಮಿಯರ್ ಸ್ಟುಡಿಯೋ ಸಹ ಹಲವಾರು ಪ್ರತಿಭಾವಂತ ನಟ-ನಟಿಯರು ಹಾಗೂ ತಾಂತ್ರಿಕ ಬಳಗವನ್ನೂ ಚಿತ್ರರಂಗಕ್ಕೆ ಪರಿಚಯಿಸಿದೆ.

ಭಾರತೀಯ ಚಲನಚಿತ್ರ ರಂಗದ ದಿಗ್ಗಜರಿಗೂ ಮೈಸೂರು ಅಚ್ಚು ಮೆಚ್ಚಿನ ನಗರವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರು ನಗರದಲ್ಲಿ ಚಿತ್ರಗಳು ನಿರ್ಮಾಣವಾಗಬೇಕು ಎಂದು ಕನ್ನಡದ ಮೇರು ನಟ ದಿವಂಗತ ಡಾ.ರಾಜ್‌ಕುಮಾರ್ ಅವರೂ ಕನಸು ಕಂಡಿದ್ದರು. ಇದನ್ನು ಮನಗಂಡು ಹಿಂದಿನ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರಿಸಿರುವುದಾಗಿ ತಾವು ಬಜೆಟ್ನಲ್ಲಿ ಘೋಷಣೆ ಮಾಡಿದ್ದೀರಿ. ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಹಾಗೂ ಮೈಸೂರಿ ನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

click me!