ಜಪಾನ್‌ ಕಂಡ ಅತ್ಯಂತ ಪ್ರಭಾವಿ ಪ್ರಧಾನಿ, ಭಾರತದ ಅತ್ಯಾಪ್ತ ಮಿತ್ರ, ಶಿಂಜೋ ಅಬೆ ಬಗ್ಗೆ ಮಾಹಿತಿ..!

First Published Jul 8, 2022, 11:41 AM IST

ಟೋಕಿಯೋ (ಜುಲೈ 8): ಜಪಾನ್‌ ದೇಶ ಕಂಡ ಅತ್ಯಂತ ಪ್ರಭಾವಿ ಪ್ರಧಾನಿ (Japan Ex PM), 67 ವರ್ಷದ ಶಿಂಜೋ ಅಬೆ (Shinzo Abe) ಅವರ ಮೇಲೆ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಲಾಗಿದೆ. ಶುಕ್ರವಾರ ಬೆಳಗ್ಗೆ ಜಪಾನ್‌ ಕಾಲಮಾನ 11.30ರ ಸುಮಾರಿಗೆ ನಾರಾ (Nara) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾನುವಾರ ನಡೆಯಲಿರುವ ಮೇಲ್ಮನೆ ಚುನಾವಣೆಗಾಗಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ವೇಲೆ 41 ವರ್ಷದ ದಾಳಿಕೋರನೊಬ್ಬ ಅವರ ಹಿಂಬದಿಯಿಂದ ಬಂದು ಶೂಟ್‌ ಮಾಡಿದ್ದಾರೆ.

ಅಬೆಗೆ ಶೂಟ್‌ ಮಾಡಿದ ವ್ಯಕ್ತಿಯನ್ನು ಯಾಮಾಗೆಮಿ ತೆತ್ಸುಯಾ (Tetsuya Yamagami) ಎಂದು ಹೇಳಲಾಗಿದ್ದು, ಜಪಾನ್‌ ನೌಕಾಸೇನೆಯ ಮಾಜಿ ಅಧಿಕಾರಿ ಎಂದು ಗುರುತಿಸಲಾಗಿದೆ. ಮಾಜಿ ಪ್ರಧಾನಿ ಮೇಲೆ ಆತ ಎರಡು ಸುತ್ತಿನ ದಾಳಿ ನಡೆಸಿದ್ದಾರೆ. ಗುಂಡುಗಳು ಎದೆಯ ಎಡಭಾಗಕ್ಕೆ ಬಿದ್ದಿದ್ದು, ರಕ್ತ ಚಿಮ್ಮಿದೆ. ಶೂಟ್‌ ಆದ ಬಳಿಕ ಅಬೆಗೆ ಹೃದಯಾಘಾತವೇ ಆಗಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಅವರ ನಿಶ್ಚಲ ಸ್ಥಿತಿಯಲ್ಲಿದ್ದ ಅವರನ್ನು, ವೈದ್ಯಕೀಯ ಹೆಲಿಕಾಪ್ಟರ್‌ ಮೂಲಕ ಏರ್‌ಲಿಫ್ಟ್‌ ಮಾಡಲಾಗಿದೆ. ಅವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಜಪಾನ್‌ನ ರಾಷ್ಟ್ರೀಯ ಮಾಧ್ಯನ ಎನ್‌ಎಚ್‌ಕೆ ವರದಿ ಮಾಡಿದೆ. ಶಿಂಜೊ ಅಬೆ ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿ ದಾಖಲೆಗಳನ್ನು ಮಾಡಿದವರು. ಮಹತ್ವಾಕಾಂಕ್ಷೆಯ ಆರ್ಥಿಕ ಸುಧಾರಣೆ ಮತ್ತು ಹಗರಣಗಳನ್ನು ಎದುರಿಸುವಾಗ ಪ್ರಮುಖ ರಾಜತಾಂತ್ರಿಕ ಸಂಬಂಧಗಳನ್ನು ರೂಪಿಸಿದ ವ್ಯಕ್ತಿಯಾಗಿದ್ದಾರೆ.
 

* 67 ವರ್ಷದ ಅಬೆ ಅವರು 2006ರಲ್ಲಿ ಮೊದಲ ಬಾರಿಗೆ ಜಪಾನ್‌ನ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡುವ ಮುನ್ನ ಒಂದು ವರ್ಷ ಸೇವೆ ಸಲ್ಲಿಸಿದರು.

ಡಿಸೆಂಬರ್ 2012 ರಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಅವರು ಮರಳಿದರು. ಎಂಟು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿ ಇರುವ ಮೂಲಕ ಜಪಾನ್‌ ದೇಶದ ಇತಿಹಾಸದಲ್ಲಿಯೇ ದೀರ್ಘಾವಧಿಯ ಪ್ರಧಾನಿ ಎನ್ನುವ ದಾಖಲೆ ಮಾಡಿದರು.

 ಅಬೆ ಅವರು ಆಗಸ್ಟ್ 2020 ರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಎರಡನೇ ಬಾರಿಗೆ ರಾಜೀನಾಮೆ ನೀಡಿದರು. 2021ರ ಅಕ್ಟೋಬರ್‌ನಲ್ಲಿ ಸಸಾರ್ವತ್ರಿಕ ಚುನಾವಣೆ ನಡೆಯುವವರೆಗೂ ಫ್ಯೂಮಿಯೊ ಕಿಶಿದಾ ಜಪಾನ್‌ನ ಪ್ರಧಾನಮಂತ್ರಿಯಾಗಿದ್ದರು. ಚುನಾವಣೆಯ ಬಳಿಕ ಯೋಶಿಹಿಡೆ ಸುಗಾ ಪ್ರಧಾನಿಯಾದರು.

 ಶಿಂಜೊ ಅಬೆ 2ನೇ ವಿಶ್ವ ಸಮರದ ಬಳಿಕ ಜನಿಸಿದ ಮೊದಲ ಜಪಾನಿನ ಪ್ರಧಾನಿ. ಅವರು ಸೆಪ್ಟೆಂಬರ್ 21, 1954 ರಂದು ಟೋಕಿಯೊದಲ್ಲಿ ಜನಿಸಿದರು. ಅಬೆ ರಾಜಕೀಯ ಕುಟುಂಬದಿಂದ ಬಂದವರು. ಅವರ ಅಜ್ಜ ಕೂಡ ಪ್ರಧಾನಿಯಾಗಿದ್ದರು ಮತ್ತು ಅವರ ತಂದೆ ಮಾಜಿ ವಿದೇಶಾಂಗ ಸಚಿವರಾಗಿದ್ದರು. ಅಕಿ ಅಬೆಯನ್ನು ವಿವಾಹವಾಗಿರುವ ಶಿಂಜೋ ಅಬೆಗೆ ಮಕ್ಕಳಿಲ್ಲ.

ಪ್ರಧಾನ ಮಂತ್ರಿಯಾಗಿ ಅವರ ನೀತಿಗಳಲ್ಲಿ 'ಅಬೆನೊಮಿಕ್ಸ್' - 2013 ರ ಪ್ರಯೋಗವು ಜಪಾನ್‌ನ ಆರ್ಥಿಕತೆಯನ್ನು ದಶಕಗಳ ನಿಶ್ಚಲತೆಯಿಂದ ಹೊರಹಾಕುವ ಗುರಿ ಇರಿಸಿಕೊಂಡಿತ್ತು. ಈ ಯೋಜನೆ ಮೂರು ಪ್ರಮುಖ ಗುರಿಯನ್ನು ಹೊಂದಿತ್ತು.ಬೃಹತ್ ವಿತ್ತೀಯ ಪ್ರಚೋದನೆ, ಹೆಚ್ಚಿದ ಸರ್ಕಾರಿ ಖರ್ಚು ಮತ್ತು ಗಮನಾರ್ಹ ಆರ್ಥಿಕ ಸುಧಾರಣೆಗಳು ಇವಾಗಿದ್ದವು.

ಅವರ ಪ್ರಧಾನಮಂತ್ರಿ ಆದ ಅವಧಿಯ ಗಮನಾರ್ಹ ಕ್ಷಣಗಳಲ್ಲಿ ಜಪಾನಿನ ಸಂವಿಧಾನದ 9 ನೇ ವಿಧಿಯ ಪರಿಷ್ಕರಣೆ ಕೂಡ ಸೇರಿದೆ. "ಜಪಾನ್‌ನ ಜನರು ಯುದ್ಧ ಎನ್ನುವುದು ರಾಷ್ಟ್ರದ ಸಾರ್ವಭೌಮ ಹಕ್ಕು ಎನ್ನುವುದನ್ನು ಶಾಶಸ್ವತವಾಗಿ ತ್ಯಜಿಸುತ್ತಾರೆ' ಎನ್ನುವ ಅಂಶವನ್ನು ತೆಗೆದುಹಾಕಲಾಯಿತು. 2ನೇ ವಿಶ್ವಯುದ್ಧದ ಕೊನೆಯಲ್ಲಿ ಅಮೆರಿಕದ ಸೂಚನೆಯ ಮೇಲೆ ಜಪಾನ್‌ನ ಸಂವಿಧಾನದಲ್ಲಿ ಇದನ್ನು ಸೇರಿಸಲಾಗಿತ್ತು.ಅಬೆಯ ಉಸ್ತುವಾರಿಯಲ್ಲಿ ಜಪಾನ್ ಸಶಸ್ತ್ರ ಪಡೆಗಳನ್ನು ಮೊದಲ ಬಾರಿಗೆ  ವಿದೇಶಕ್ಕೆ ಕಳುಹಿಸಲಾಗಿತ್ತು.

ಭಾರತ (India) ಹಾಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅತ್ಯಾಪ್ತ ಮಿತ್ರ ಶಿಂಜೋ ಅಬೆ. ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಶಿಂಜೋ ಅಬೆ ನೇತೃತ್ವದ ಸರ್ಕಾರ ಭಾರತದಲ್ಲಿ ಹಲವಾರು ಹೂಡಿಕೆಗಳನ್ನು ಮಾಡಿತು. ಮುಂಬೈ, ಅಹಮದಾಬಾದ್ ಬುಲೆಟ್‌ ಟ್ರೇನ್‌ (Bullet Train), ದೇಶದ ವಿವಿಧ ನಗರಗಳ ಮೆಟ್ರೋ ರೈಲುಗಳ (Metro Train) ನಿರ್ಮಾಣದಲ್ಲಿ ಜಪಾನ್‌ ಭಾಗಿಯಾಗಲು ಅಬೆ ಹಾಗೂ ಮೋದಿ ಅವರ ಒಪ್ಪಂದವೇ ಕಾರಣವಾಗಿತ್ತು.
 

2018ರಲ್ಲಿ ಭಾರತ ಪ್ರವಾಸದ ವೇಳೆ ನರೇಂದ್ರ ಮೋದಿ ಹಾಗೂ ಶಿಂಜೋ ಅಬೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದ ಫೋಟೋ ಸಖತ್‌ ವೈರಲ್‌ ಆಗಿತ್ತು. ಈ ವೇಳೆ ಭಾರತದಲ್ಲಿ ಅಬೆ ಅವರ ರೋಡ್‌ ಶೋ ಕೂಡ ನಡೆದಿತ್ತು.

click me!