ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ನ್ಯಾಟೋ ರಾಷ್ಟ್ರಗಳು ಬೆಂಬಲ ನೀಡದ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನಗೊಂಡಿದ್ದಾರೆ. ನ್ಯಾಟೋವನ್ನು 'ಕಾಗದದ ಹುಲಿ' ಎಂದು ಕರೆದಿರುವ ಅವರು, ಮೈತ್ರಿಕೂಟದಿಂದ ಅಮೆರಿಕವನ್ನು ಹೊರತರುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದಾಗಿ ಹೇಳಿದ್ದಾರೆ.
ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಬೆಂಬಲ ನೀಡಲು ನ್ಯಾಟೋ ರಾಷ್ಟ್ರಗಳು ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ಹೊರಹಾಕಿದ್ದಾರೆ. "ನ್ಯಾಟೋ ಮೈತ್ರಿಕೂಟದಿಂದ ಅಮೆರಿಕವನ್ನು ಹೊರತರುವ ಬಗ್ಗೆ ನಾನು ಬಲವಾಗಿ ಯೋಚಿಸುತ್ತಿದ್ದೇನೆ," ಎಂದು ಅವರು ಹೇಳಿದ್ದಾರೆ.
25
'ಕಾಗದದ ಹುಲಿ' ಎಂದು ಲೇವಡಿ
ನ್ಯಾಟೋ ಮೈತ್ರಿಕೂಟಕ್ಕೆ ಯಾವುದೇ ನೈಜ ಶಕ್ತಿಯಿಲ್ಲ, ಅದೊಂದು ಕೇವಲ 'ಕಾಗದದ ಹುಲಿ' ಎಂದು ಟ್ರಂಪ್ ಬಣ್ಣಿಸಿದ್ದಾರೆ. "ನ್ಯಾಟೋದ ವಿಶ್ವಾಸಾರ್ಹತೆಯ ಬಗ್ಗೆ ನನಗೆ ಮೊದಲಿನಿಂದಲೂ ಅನುಮಾನವಿತ್ತು. ಅದು ಬರೀ ಕಾಗದದ ಹುಲಿ ಎಂಬುದು ನನಗೆ ಮೊದಲೇ ಗೊತ್ತಿತ್ತು, ಅಂದಹಾಗೆ ರಷ್ಯಾ ಅಧ್ಯಕ್ಷ ಪುಟಿನ್‌ಗೂ ಈ ಸತ್ಯ ಗೊತ್ತು," ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
35
ಮರುಚಿಂತನೆಯ ಪ್ರಶ್ನೆಯೇ ಇಲ್ಲ
"ಇರಾನ್ ಸಂಘರ್ಷದ ನಂತರವೂ ನೀವು ನ್ಯಾಟೋ ಸದಸ್ಯತ್ವದ ಬಗ್ಗೆ ಮರುಚಿಂತನೆ ನಡೆಸುತ್ತೀರಾ?" ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಖಂಡಿತವಾಗಿಯೂ ಸದಸ್ಯತ್ವವನ್ನು ರದ್ದುಗೊಳಿಸುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ. ಇದು ಮರುಚಿಂತನೆಗೂ ಮೀರಿದ ನಿರ್ಧಾರ (Beyond reconsideration)," ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಗೆ ನ್ಯಾಟೋ ರಾಷ್ಟ್ರಗಳು ಸಾಥ್ ನೀಡದಿರುವುದು ಟ್ರಂಪ್ ಅಸಮಾಧಾನಕ್ಕೆ ಮುಖ್ಯ ಕಾರಣ. ಅಲ್ಲದೆ, ಇರಾನ್ ಮುಚ್ಚಿರುವ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಮರುಪ್ರಾರಂಭಿಸಲು ನೆರವಾಗದ ಮಿತ್ರರಾಷ್ಟ್ರಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.
55
ಉಕ್ರೇನ್ ವಿಚಾರದಲ್ಲಿ ಅಸಮಾಧಾನ
"ಉಕ್ರೇನ್ ಬಿಕ್ಕಟ್ಟು ನಮಗೆ ಸಂಬಂಧಿಸಿದ್ದಲ್ಲದಿದ್ದರೂ ನಾವು ಅಲ್ಲಿ ಆಟೋಮ್ಯಾಟಿಕ್ ಆಗಿ ಭಾಗಿಯಾದೆವು. ಆದರೆ ನಮಗೆ ಅಗತ್ಯವಿದ್ದಾಗ ಈ ರಾಷ್ಟ್ರಗಳು ನಮ್ಮ ಜೊತೆ ನಿಲ್ಲಲಿಲ್ಲ," ಎಂದು ಟ್ರಂಪ್ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ