ಸಂಘರ್ಷದ ನಡುವೆಯೂ, ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ 60 ಸರಕು ಹಡಗುಗಳನ್ನು ಮತ್ತು 3,972 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಯಶಸ್ವಿ ಕಾರ್ಯಾಚರಣೆಯು ಭಾರತದ ಇಂಧನ ಪೂರೈಕೆ ಸರಪಳಿಯನ್ನು ಅಬಾಧಿತವಾಗಿರಿಸಿದ್ದು, ಸರ್ಕಾರದ ಸಮನ್ವಯ ಮತ್ತು ನೌಕಾಪಡೆ ಶಕ್ತಿ ಪ್ರದರ್ಶಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷದಿಂದಾಗಿ ಗಲ್ಫ್ ಪ್ರದೇಶದಲ್ಲಿ ತೀವ್ರ ಯುದ್ಧದ ವಾತಾವರಣ ನಿರ್ಮಾಣವಾಗಿದ್ದರೂ, ಭಾರತವು ತನ್ನ ಅತ್ಯಂತ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳನ್ನು ಅತ್ಯಂತ ಸುರಕ್ಷಿತವಾಗಿ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಾದೇಶಿಕ ಭದ್ರತಾ ಸವಾಲುಗಳ ಹೊರತಾಗಿಯೂ, ಭಾರತಕ್ಕೆ ಅಗತ್ಯ ಸರಕುಗಳನ್ನು ಹೊತ್ತು ತರುತ್ತಿದ್ದ 60 ಸರಕು ಹಡಗುಗಳು ಅತ್ಯಂತ ಅಪಾಯಕಾರಿ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ತಲುಪಿವೆ. ಅಷ್ಟೇ ಅಲ್ಲದೆ, ಗಲ್ಫ್ ಪ್ರದೇಶದಲ್ಲಿದ್ದ 3,972 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಭಾರತ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
27
ಮಾಹಿತಿ ಹಂಚಿಕೊಂಡ ಸರ್ಕಾರ!
ಈ ಸಂಪೂರ್ಣ ರೋಚಕ ಕಾರ್ಯಾಚರಣೆಯ ಅಧಿಕೃತ ಅಂಕಿಅಂಶಗಳನ್ನು ಸರ್ಕಾರ ಮೊದಲ ಬಾರಿಗೆ ಸಂಸತ್ತಿನಲ್ಲಿ ಹಂಚಿಕೊಂಡಿದೆ. ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಭಾರತದ ಇಂಧನ ಪೂರೈಕೆ ಮತ್ತು ಸಮುದ್ರ ವ್ಯಾಪಾರದ ಮೇಲೆ ಯಾವುದೇ ಬಿಸಿಯೂ ತಟವಾಯಿಸದಂತೆ ತಡೆದಿರುವುದು ಭಾರತದ ರಾಜತಾಂತ್ರಿಕ ಹಾಗೂ ಮಿಲಿಟರಿ ಶಕ್ತಿಗೆ ಸಾಕ್ಷಿಯಾಗಿದೆ.
37
ಹಾರ್ಮುಜ್ ಜಲಸಂಧಿ ಏಕೆ ಅಷ್ಟೊಂದು ನಿರ್ಣಾಯಕ?
ವಿಶ್ವದ ಅತ್ಯಂತ ಪ್ರಮುಖ ಮತ್ತು ಕಿರಿದಾದ ಸಮುದ್ರ ಮಾರ್ಗಗಳಲ್ಲಿ ಹಾರ್ಮುಜ್ ಜಲಸಂಧಿಯೂ ಒಂದು. ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಈ ಮಾರ್ಗದ ಮೂಲಕವೇ ವಿಶ್ವದ ಒಟ್ಟು ಕಚ್ಚಾ ತೈಲ ವ್ಯಾಪಾರದ ಶೇಕಡಾ 20 ರಷ್ಟು ಭಾಗ ಸಾಗುತ್ತದೆ. ಆದ್ದರಿಂದ ಇದು ನಿರ್ಣಾಯಕವಾಗಿದೆ.
47
ಶೇ.90 ರಷ್ಟು ಕಚ್ಚಾ ತೈಲ ಆಮದು!
ಭಾರತವು ತನ್ನ ದೇಶೀಯ ಅಗತ್ಯಕ್ಕಾಗಿ ಶೇಕಡಾ 90 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುಪಾಲು ತೈಲವು ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಂತಹ ಗಲ್ಫ್ ರಾಷ್ಟ್ರಗಳಿಂದ ಇದೇ ಮಾರ್ಗದ ಮೂಲಕ ಬರಬೇಕಾಗಿದೆ. ಒಂದು ವೇಳೆ ಈ ಮಾರ್ಗದಲ್ಲಿ ಸರಕು ಸಾಗಣೆ ಸ್ಥಗಿತಗೊಂಡಿದ್ದರೆ, ಹಡಗುಗಳ ವಿಮೆ ವೆಚ್ಚ ಗಗನಕ್ಕೇರಿ, ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ತೀವ್ರವಾಗಿ ಏರಿಕೆಯಾಗುವ ಭೀತಿಯಿತ್ತು. ಆದರೆ ಭಾರತದ ಮುನ್ನೆಚ್ಚರಿಕೆಯಿಂದಾಗಿ ಪೂರೈಕೆ ಸರಪಳಿಗೆ ಯಾವುದೇ ಧಕ್ಕೆಯಾಗಲಿಲ್ಲ.
57
3,972 ನಾವಿಕರ ಕಂಪ್ಲೀಟ್ 'ರೆಸ್ಕ್ಯೂ ಮಿಷನ್'!
ಆಪತ್ತಿನ ಸಮಯದಲ್ಲಿ ಅಂತರರಾಷ್ಟ್ರೀಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 3,972 ಭಾರತೀಯ ವ್ಯಾಪಾರಿ ನೌಕಾಪಡೆಯ (Merchant Navy) ಸಿಬ್ಬಂದಿಯನ್ನು ಭದ್ರವಾಗಿ ಸ್ಥಳಾಂತರಿಸಲಾಗಿದೆ. ಯುದ್ಧದ ಸಮಯದಲ್ಲಿ ಈ ನಾವಿಕರು ಮಿಲಿಟರಿ ಕಾರ್ಯಾಚರಣೆಯಲ್ಲಿ ಇಲ್ಲದಿದ್ದರೂ, ಅಪಾಯಕಾರಿ ಜಲಪ್ರದೇಶದಲ್ಲಿ ನೇರ ಬೆದರಿಕೆಯನ್ನು ಎದುರಿಸುತ್ತಿದ್ದರು. ಇವರ ರಕ್ಷಣೆ ಭಾರತದ ಮೊದಲ ಆದ್ಯತೆಯಾಗಿತ್ತು.
67
24 ಗಂಟೆಯೂ ಕಾರ್ಯಾಚರಿಸಿದ 'ಕಂಟ್ರೋಲ್ ರೂಮ್'
ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಭಾರತ ಸರ್ಕಾರ ತಕ್ಷಣವೇ ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಅಡಿಯಲ್ಲಿ 24 ಗಂಟೆಗಳ ಕಾಲ ಸಕ್ರಿಯವಾಗಿರುವ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಮ್ ತೆರೆಯಿತು.
ಸಂಪರ್ಕ ವ್ಯವಸ್ಥೆ: ತುರ್ತು ಸಂದರ್ಭಗಳಲ್ಲಿ ಹಡಗುಗಳಿಗೆ ಚಾನೆಲ್ 16 ಮೂಲಕ ಹತ್ತಿರದ ಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ಅಥವಾ ಪಾಲುದಾರ ರಾಷ್ಟ್ರಗಳ ನೌಕೆಗಳನ್ನು ತಕ್ಷಣ ಸಂಪರ್ಕಿಸಲು ಸೂಚಿಸಲಾಗಿತ್ತು.
ಮಾಹಿತಿ ವಿನಿಮಯ: ಭಾರತೀಯ ಸಾಗರ ಪ್ರದೇಶದ ಮಾಹಿತಿ ಸಮ್ಮಿಳನ ಕೇಂದ್ರ (IFC-IOR) ಮತ್ತು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಜೊತೆ ಕ್ಷಣಕ್ಷಣದ ಮಾಹಿತಿ ಹಂಚಿಕೊಳ್ಳಲಾಯಿತು.
77
36,000 ಇಮೇಲ್‌ಗಳ ನಿರ್ವಹಣೆ!
ಕಂಟ್ರೋಲ್ ರೂಮ್ ಆರಂಭವಾದ ದಿನದಿಂದ ಭಾರತೀಯ ನಾವಿಕರು, ಅವರ ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಕಡಲ ವಲಯದ ಆಡಳಿತ ಮಂಡಳಿಯಿಂದ ಒಟ್ಟು 15,771 ದೂರವಾಣಿ ಕರೆಗಳು ಮತ್ತು 36,499 ಇಮೇಲ್‌ಗಳನ್ನು ಸ್ವೀಕರಿಸಿ, ಪರಿಹಾರ ಒದಗಿಸಲಾಗಿದೆ. ಭಾರತೀಯ ನೌಕಾಪಡೆಯ ಭದ್ರತಾ ಕಾವಲು ಹಾಗೂ ಇಲಾಖೆಗಳ ನಿರಂತರ ಸಮನ್ವಯದ ಪರಿಣಾಮವಾಗಿ, ಯುದ್ಧದ ದಾಳಿಗಳ ನಡುವೆಯೂ ಭಾರತದ ಇಂಧನ ಭದ್ರತೆ ಮತ್ತು ಪ್ರಜೆಗಳ ಜೀವ ರಕ್ಷಣೆ ಯಶಸ್ವಿಯಾಗಿ ನೆರವೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ