
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ 27 ವರ್ಷಗಳ ಕಾಲ ಅಪೂರ್ವ ಹಾಗೂ ಪ್ರೇರಣಾದಾಯಕ ವೃತ್ತಿಜೀವನವನ್ನು ನಡೆಸಿದ ಖ್ಯಾತ ಗಗನಯಾತ್ರಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರು ನಿವೃತ್ತಿಯಾಗಿರುವ ಬಗ್ಗೆ ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರ ನಿವೃತ್ತಿ 2025ರ ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ ನಾಸಾ ಬುಧವಾರ (ಅಮೆರಿಕದಲ್ಲಿ ಮಂಗಳವಾರ) ಪ್ರಕಟಣೆ ಹೊರಡಿಸಿದೆ.
ಪ್ರಸ್ತುತ 60 ವರ್ಷ ವಯಸ್ಸಿನ ಸುನೀತಾ ವಿಲಿಯಮ್ಸ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮಾನವ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅನೇಕ ಮಹತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ನಿವೃತ್ತಿಯನ್ನು ಘೋಷಿಸಿದ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ವಿಲಿಯಮ್ಸ್ ಅವರನ್ನು “ಮಾನವ ಬಾಹ್ಯಾಕಾಶ ಹಾರಾಟಕ್ಕೆ ದಿಕ್ಕು ತೋರಿಸಿದ ಮಹಾನ್ ನಾಯಕಿ” ಎಂದು ಶ್ಲಾಘಿಸಿದರು. ಬಾಹ್ಯಾಕಾಶ ನಿಲ್ದಾಣದಲ್ಲಿನ ಅವರ ನಾಯಕತ್ವವು ಭೂಮಿಯ ಕೆಳ ಕಕ್ಷೆಯಲ್ಲಿನ ಪರಿಶೋಧನೆ ಹಾಗೂ ವಾಣಿಜ್ಯ ಬಾಹ್ಯಾಕಾಶ ಕಾರ್ಯಾಚರಣೆಗಳ ಭವಿಷ್ಯವನ್ನು ರೂಪಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ನಿಮ್ಮ ಅರ್ಹ ನಿವೃತ್ತಿಗೆ ಹಾರ್ದಿಕ ಅಭಿನಂದನೆಗಳು. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ನೀಡಿದ ನಿಮ್ಮ ಅಮೂಲ್ಯ ಸೇವೆಗೆ ಧನ್ಯವಾದಗಳು ಎಂದು ಐಸಾಕ್‌ಮನ್ ಗೌರವ ಸಲ್ಲಿಸಿದರು.
1998ರಲ್ಲಿ ನಾಸಾದಿಂದ ಗಗನಯಾತ್ರಿಯಾಗಿ ಆಯ್ಕೆಯಾದ ಸುನೀತಾ ವಿಲಿಯಮ್ಸ್, ತಮ್ಮ ಮೂರು ಬಾಹ್ಯಾಕಾಶ ಯಾತ್ರೆಗಳ ಮೂಲಕ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದು ನಾಸಾ ಗಗನಯಾತ್ರಿಗಳ ಪೈಕಿ ಎರಡನೇ ಅತಿ ಹೆಚ್ಚು ಸಂಚಿತ ಬಾಹ್ಯಾಕಾಶ ಸಮಯವಾಗಿದೆ ಇದೇ ವೇಳೆ, ಬೋಯಿಂಗ್ ಸ್ಟಾರ್‌ಲೈನರ್ ಹಾಗೂ ಸ್ಪೇಸ್‌ಎಕ್ಸ್ ಕ್ರೂ–9 ಕಾರ್ಯಾಚರಣೆಗಳ ವೇಳೆ 286 ದಿನಗಳ ಏಕ ಬಾಹ್ಯಾಕಾಶ ಹಾರಾಟ ನಡೆಸಿರುವ ಅವರು ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಸಮಾನವಾಗಿ 286 ದಿನಗಳ ಏಕ ಬಾಹ್ಯಾಕಾಶ ಹಾರಾಟವನ್ನು ಪೂರ್ಣಗೊಳಿಸಿದ ಅಮೆರಿಕನ್ನರಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಬಾಹ್ಯಾಕಾಶ ನಡಿಗೆಗಳಲ್ಲಿಯೂ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಒಟ್ಟು ಒಂಬತ್ತು ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆ 6 ನಿಮಿಷಗಳನ್ನು ಅವರು ಬಾಹ್ಯಾಕಾಶದ ಹೊರಗಡೆ ಕಳೆಯುವ ಮೂಲಕ, ಅತಿ ಹೆಚ್ಚು ಬಾಹ್ಯಾಕಾಶ ನಡಿಗೆಯ ಸಮಯ ಹೊಂದಿದ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ . ಇದು ಯಾವುದೇ ಮಹಿಳಾ ಗಗನಯಾತ್ರಿಗಿಂತಲೂ ಹೆಚ್ಚು ಸಮಯವಾಗಿದ್ದು, ನಾಸಾದ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ. ಅಲ್ಲದೆ, ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ಎಂಬ ವಿಶಿಷ್ಟ ಗೌರವವೂ ಅವರದ್ದಾಗಿದೆ.
ಸುನೀತಾ ವಿಲಿಯಮ್ಸ್ ಅವರು ಡಿಸೆಂಬರ್ 9, 2006ರಂದು STS-116 ಸಿಬ್ಬಂದಿಯೊಂದಿಗೆ ಡಿಸ್ಕವರಿ ಬಾಹ್ಯಾಕಾಶ ನೌಕೆಯಲ್ಲಿ ತಮ್ಮ ಮೊದಲ ಬಾಹ್ಯಾಕಾಶ ಹಾರಾಟ ನಡೆಸಿದರು.
ಎಕ್ಸ್‌ಪೆಡಿಶನ್ 14/15ರ ಸದಸ್ಯರಾಗಿ ಫ್ಲೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅವರು, 29 ಗಂಟೆ 17 ನಿಮಿಷಗಳ ಕಾಲ ನಾಲ್ಕು ಬಾಹ್ಯಾಕಾಶ ನಡಿಗೆಗಳನ್ನು ನಡೆಸಿ ಆಗಿನ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಜುಲೈ 14, 2012ರಂದು, ಕಝಾಕಿಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್‌ನಿಂದ ಎಕ್ಸ್‌ಪೆಡಿಶನ್ 32/33ರ ಸದಸ್ಯರಾಗಿ ಉಡಾವಣೆಯಾದ ವಿಲಿಯಮ್ಸ್, 127 ದಿನಗಳ ಕಾರ್ಯಾಚರಣೆ ನಡೆಸಿದರು.
ಈ ಅವಧಿಯಲ್ಲಿ ನಿಲ್ದಾಣದ ರೇಡಿಯೇಟರ್‌ನಲ್ಲಿ ಉಂಟಾದ ಅಮೋನಿಯಾ ಸೋರಿಕೆಯನ್ನು ಸರಿಪಡಿಸುವುದು ಹಾಗೂ ಸೌರ ವಿದ್ಯುತ್ ಘಟಕ ಬದಲಾಯಿಸುವಂತಹ ಅತ್ಯಂತ ಸಂಕೀರ್ಣ ಕಾರ್ಯಗಳನ್ನು ಅವರು ಮೂರು ಬಾಹ್ಯಾಕಾಶ ನಡಿಗೆಗಳ ಮೂಲಕ ನೆರವೇರಿಸಿದರು.
ಅವರ ಮೂರನೇ ಮತ್ತು ಅತ್ಯಂತ ದೀರ್ಘ ಕಾರ್ಯಾಚರಣೆ ಜೂನ್ 2024ರಲ್ಲಿ ಆರಂಭವಾಯಿತು. ನಾಸಾದ ಬೋಯಿಂಗ್ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಭಾಗವಾಗಿ, ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಉಡಾವಣೆಯಾದರು.
ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಮಿಷನ್ ಉದ್ದಗಲಗೊಂಡು, ಇಬ್ಬರೂ ಎಕ್ಸ್‌ಪೆಡಿಶನ್ 71/72ರ ಭಾಗವಾಗಿ ಕಾರ್ಯನಿರ್ವಹಿಸಿದರು. ಅಂತಿಮವಾಗಿ ಅವರು ಮಾರ್ಚ್ 2025ರಲ್ಲಿ ಭೂಮಿಗೆ ಮರಳಿದರು.
ಅವರ ಇತ್ತೀಚಿನ ಮತ್ತು ಗಮನಾರ್ಹ ಕಾರ್ಯಾಚರಣೆ ಜೂನ್ 2024ರಲ್ಲಿ ನಡೆಯಿತು. ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ಪರೀಕ್ಷಾ ಹಾರಾಟದಲ್ಲಿ ಉಡಾವಣೆಯಾದರು. ಆದರೆ ನೌಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ, ಕೆಲ ದಿನಗಳ ಕಾರ್ಯಾಚರಣೆಯಾಗಿ ಯೋಜಿಸಲಾಗಿದ್ದ ಈ ಮಿಷನ್ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿಯಬೇಕಾಯಿತು. ಅಂತಿಮವಾಗಿ, ಈ ಜೋಡಿ ಮಾರ್ಚ್ 2025ರಲ್ಲಿ ಸ್ಪೇಸ್‌ಎಕ್ಸ್‌ನ ಕ್ರೂ-9 ಮಿಷನ್ ಮೂಲಕ ಸುರಕ್ಷಿತವಾಗಿ ಭೂಮಿಗೆ ಮರಳಿದರು.
ಸುನೀತಾ ವಿಲಿಯಮ್ಸ್ ಅವರ ತಂದೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್‌ನಲ್ಲಿ ಜನಿಸಿದ ನರಶಸ್ತ್ರಚಿಕಿತ್ಸಕ ದೀಪಕ್ ಪಾಂಡ್ಯ, ನಂತರ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅವರ ತಾಯಿ ಸ್ಲೊವೇನಿಯನ್ ಮೂಲದವರು ಅವರ ಹೆಸರು ಉರ್ಸುಲಿನ್ ಬೋನಿ ಪಾಂಡ್ಯ. ಮೂವರು ಮಕ್ಕಳಲ್ಲಿ ಸುನೀತಾ ಕಿರಿಯವರು. ಓಹಿಯೋದ ಯೂಕ್ಲಿಡ್‌ನಲ್ಲಿ ಜನಿಸಿದ ಸುನೀತಾ, ಮ್ಯಾಸಚೂಸೆಟ್ಸ್‌ನ ನೀಧಮ್ ಅನ್ನು ತಮ್ಮ ತವರು ಎಂದು ಪರಿಗಣಿಸುತ್ತಾರೆ. ಸುನೀತಾ ವಿಲಿಯಮ್ಸ್ ಮತ್ತು ಅವರ ಪತಿ ಮೈಕೆಲ್ ಅವರು ಕೂಡ ನಾಸಾದ ವಿಜ್ಞಾನಿ. ತಮ್ಮ ನಾಯಿಗಳೊಂದಿಗೆ ಸಮಯ ಕಳೆಯುವುದು, ವ್ಯಾಯಾಮ, ಪಾದಯಾತ್ರೆ, ಕ್ಯಾಂಪಿಂಗ್ ಹಾಗೂ ಯಂತ್ರೋಪಕರಣಗಳ ಮೇಲೆ ಕೆಲಸ ಮಾಡುವುದನ್ನು ಇಷ್ಟಪಡುತ್ತಾರೆ.
ಭಾರತೀಯ ಮೂಲದ ಸುನೀತಾ ವಿಲಿಯಮ್ಸ್, ತಮ್ಮ ಭಾರತೀಯ ಸಂಪರ್ಕದ ಬಗ್ಗೆ ಸದಾ ಹೆಮ್ಮೆಯಿಂದ ಮಾತನಾಡುತ್ತಾ ಬಂದಿದ್ದಾರೆ. ಭಾರತಕ್ಕೆ ಭೇಟಿ ನೀಡುವ ಸಂದರ್ಭಗಳನ್ನು ಅವರು “ಸ್ವದೇಶಕ್ಕೆ ಮರಳಿದ ಅನುಭವ” ಎಂದು ವರ್ಣಿಸಿದ್ದಾರೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ವೇಳೆ, ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವ ಅನುಭವವು ಮಾನವರ ನಡುವಿನ ಭೇದಗಳನ್ನು ಅಳಿಸಿ ಹಾಕುತ್ತದೆ ಎಂದು ಅವರು ಹೇಳಿದರು. “ಬಾಹ್ಯಾಕಾಶದಿಂದ ನೋಡಿದಾಗ ನಾವು ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ,” ಎಂದು ಅವರು ಮನಮುಟ್ಟುವಂತೆ ಹೇಳಿದರು.
ನನ್ನನ್ನು ಪರಿಚಯ ಹೊಂದಿರುವವರಿಗೆ ಗೊತ್ತಿದೆ. ಬಾಹ್ಯಾಕಾಶವೇ ನನ್ನ ಅತ್ಯಂತ ನೆಚ್ಚಿನ ಸ್ಥಳ. ಗಗನಯಾತ್ರಿ ಕಚೇರಿಯಲ್ಲಿ ಸೇವೆ ಸಲ್ಲಿಸಿ, ಮೂರು ಬಾರಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶ ಸಿಕ್ಕಿರುವುದು ನನಗೆ ಅಪಾರ ಗೌರವ ಎಂದು ಹೇಳಿದರು. “ನಾಸಾದಲ್ಲಿ ನನ್ನ 27 ವರ್ಷಗಳ ವೃತ್ತಿಜೀವನ ಅದ್ಭುತವಾಗಿದೆ. ಅದು ಸಾಧ್ಯವಾದದ್ದು ನನ್ನ ಸಹೋದ್ಯೋಗಿಗಳ ಪ್ರೀತಿ ಮತ್ತು ಬೆಂಬಲದಿಂದ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಜನರು, ಎಂಜಿನಿಯರಿಂಗ್ ಮತ್ತು ವಿಜ್ಞಾನವು ನಿಜಕ್ಕೂ ವಿಸ್ಮಯಕಾರಿಯಾಗಿದೆ. ನಾವು ಹಾಕಿದ ಅಡಿಪಾಯವೇ ಚಂದ್ರ ಮತ್ತು ಮಂಗಳನತ್ತ ಮಾನವ ಅನ್ವೇಷಣೆಯ ಮುಂದಿನ ಹಂತಗಳನ್ನು ಸಾಧ್ಯವಾಗಿಸಿದೆ,” ಎಂದು ಅವರು ಹೇಳಿದರು. “ನಾಸಾ ಮತ್ತು ಅದರ ಪಾಲುದಾರ ಸಂಸ್ಥೆಗಳು ಮುಂದಿನ ಇತಿಹಾಸ ನಿರ್ಮಾಣದತ್ತ ಸಾಗುತ್ತಿರುವುದನ್ನು ನೋಡಲು ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ವಿಲಿಯಮ್ಸ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. “ನಾವು ಹಾಕಿದ ಅಡಿಪಾಯವು ಮುಂದಿನ ದೊಡ್ಡ ಹೆಜ್ಜೆಗಳನ್ನು ಸ್ವಲ್ಪ ಸುಲಭಗೊಳಿಸಿದೆ ಎಂದು ನಾನು ನಂಬುತ್ತೇನೆ. ನಾಸಾ ಮತ್ತು ಅದರ ಪಾಲುದಾರ ಸಂಸ್ಥೆಗಳು ಮುಂದಿನ ಹಂತದ ಇತಿಹಾಸ ನಿರ್ಮಾಣದತ್ತ ಸಾಗುತ್ತಿರುವುದನ್ನು ನೋಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ,” ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ