ಪಾಕಿಸ್ತಾನ ಚುನಾವಣೆ ಫಲಿತಾಂಶ ಹೊರಬಿದ್ದರೂ ಪ್ರಧಾನಿ ಯಾರು ಅನ್ನೋ ಗೊಂದಲ ಹಾಗೇ ಮುಂದುವರಿದಿದೆ. ಇದರ ನಡುವೆ ಪಾಕಿಸ್ತಾನದ ಪಂಜಾಪ್ ಪ್ರಾಂತ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಮರ್ಯಾಮ್ ನವಾಝ್ ಷರೀಫ್ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ ಮುಸ್ಲಿಮ್ ಲೀಗ್(ನವಾಜ್) ಪಕ್ಷದ ಉಪಾಧ್ಯಕ್ಷೆಯಾಗಿರುವ ಮರ್ಯಾಮ್ ನವಾಜ್ ಷರೀಫ್ 220 ಮತಗಳಿಂದ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಮರ್ಯಾಮ್ ನವಾಜ್ ಪಾತ್ರರಾಗಿದ್ದಾರೆ. ಯುವತಿಯಂತೆ ಕಾಣುವ ಮರ್ಯಾಮ್ ನವಾಜ್ ವಯಸ್ಸು 50.
ಪಾಕಿಸ್ತಾನದ ಮಾಜಿ ಪ್ರಧಾನಿ, ಈ ಬಾರಿಯ ಚುನಾವಣೆಯಲ್ಲಿ ಪಾಕ್ ಸೇನಾ ಬೆಂಬಲದಿಂದ ಗೆಲುವು ಸಾಧಿಸಿರುವ ನವಾಜ್ ಷರೀಫ್ ಪುತ್ರಿ ಈ ಮರ್ಯಾಮ್ ನವಾಜ್ ಷರೀಪ್.
2017ರಲ್ಲಿ ಮರ್ಯಾಮ್ ನವಾಜ್ ಬಿಬಿಸಿಯ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ನ್ಯೂಯಾರ್ಕ್ ಟೈಮ್ಸ್‌ನ ವಿಶ್ವದ 11 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.
2012ರಲ್ಲಿ ರಾಜಕೀಯಕ್ಕೆ ಧುಮುಕಿದ ಮರ್ಯಾಮ್ ನವಾಜ್, 2013ರ ಪಾಕಿಸ್ತಾನ ಚುನಾವಣೆಯಲ್ಲಿ PML-N ಪಕ್ಷದ ಅಭೂತಪೂರ್ವ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಇದೇ ವರ್ಷ PML-N ಪಕ್ಷದ ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿತ್ತು.
ತಂದೆ ಷರೀಫ್ ಸರ್ಕಾರದಲ್ಲಿ ಪ್ರಧಾನಿ ಕಾರ್ಯಾಲಯದ ಯುವಜನ ಕಾರ್ಯಕ್ರಮದ ಮುಖ್ಯಸ್ಥರನ್ನಾಗಿ ಮರ್ಯಾಮರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಲಾಹೋರ್ ಕೋರ್ಟ್‌ನಲ್ಲಿ ಈ ಆಯ್ಕೆ ವಿರುದ್ಧ ವಿಚಾರಣೆ ನಡೆಯುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪನಾಮಾ ಪೇಪರ್ ಹಗರಣದಿದಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮರ್ಯಾಮ್ ನವಾಜ್ ಅನರ್ಹಗೊಳಿಸಿ ಆದೇಶ ನೀಡಿತ್ತು. ಇದೇ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪ ಕೂಡ ಕೇಳಿಬಂದಿತ್ತು.