Gazastrip
ಆಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ನಂತರ ಈ ಯುದ್ಧ ಆರಂಭವಾಗಿದ್ದು, 22 ದಿನಗಳ ನಂತರವೂ ಇನ್ನೂ ಯುದ್ಧ ಮುಂದುವರೆದಿದೆ.
Gazastrip
ಹೊಸದಾಗಿ ಬಿಡುಗಡೆಯಾದ ಉಪಗ್ರಹ ಚಿತ್ರಗಳು ಇಸ್ರೇಲ್ ಬಾಂಬ್ ದಾಳಿಯ ಮೂವರು ವಾರಗಳ ಬಳಿಕ ಗಾಜಾ ಪಟ್ಟಿಯ ನಗರಗಳು ಹೇಗೆ ಸರ್ವನಾಶವಾಗಿದೆ ಎಂಬುದನ್ನು ತೋರಿಸುತ್ತಿದೆ.
Gazastrip
ಗಾಜಾದಲ್ಲಿದ್ದ ಅಪಾರ್ಟ್‌ಮೆಂಟ್ ಕಟ್ಟಡಗಳು ಸಂಪೂರ್ಣ ಸರ್ವನಾಶವಾಗಿದ್ದು, ಪಾಳುಬಿದ್ದ ಅವಶೇಷಗಳೇ ಕಾಣಿಸುತ್ತಿವೆ. ಯುದ್ಧದ ಮೊದಲು ಹಾಗೂ ನಂತರದ ಫೋಟೋಗಳನ್ನು ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್ ಲ್ಯಾಬ್‌ಗಳು ಒದಗಿಸಿದ್ದು ವೈರಲ್ ಆಗಿವೆ.
Gazastrip
ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಶಪಥ ಮಾಡಿರುವ ಇಸ್ರೇಲ್ ಗಾಜಾಪಟ್ಟಿಯಲ್ಲಿ ದಾಳಿ ಮುಂದುವರೆಸಿದೆ. ಆಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 1,400ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಜೊತೆಗೆ ಇಸ್ರೇಲ್‌ನ 200 ಜನರನ್ನು ಹಮಾಸ್ ಉಗ್ರರು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದರು.
ಇದಾದ ನಂತರ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿ ನಡೆಸಿದ್ದು, ಭೂ ದಾಳಿ ನಡೆಸಲು ಸನ್ನದ್ಧ ಸ್ಥಿತಿಯಲ್ಲಿದೆ. ಇಸ್ರೇಲ್‌ನ ಈ ದಾಳಿಯಿಂದ 7 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತೀನ್ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹಿಡಿತದಲ್ಲಿರುವ ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್‌ನ ಉತ್ತರದ ಗಡಿಗೆ ಸಮೀಪವಿರುವ ಬೈತ್ ಹನೂನ್ ನಗರದಲ್ಲಿ, ನಾಲ್ಕು ಮತ್ತು ಐದು ಅಂತಸ್ತಿನ ಹಲವು ಕಟ್ಟಡಗಳು ಬಾಂಬ್ ದಾಳಿಯಿಂದ ನಾಮಾವಶೇಷವಾಗಿವೆ. ಕೆಲವು ಕಟ್ಟಡಗಳು ಬಹುತೇಕ ಧ್ವಂಸವಾಗಿದ್ದು, ಅರ್ಧ ಮುರಿದ ಕಟ್ಟಡಗಳ ಜೊತೆ ರಾಶಿ ಬಿದ್ದಿರುವ ಕಟ್ಟಡದ ಅವಶೇಷಗಳೇ ಎದ್ದು ಕಾಣುತ್ತಿದೆ.
ಬೈಟ್ ಹನೂನ್ ಮೇಲೆ 120 ಬಾರಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ವಾಯುಪಡೆ ಯುದ್ಧ ಆರಂಭವಾದ ಕೆಲ ದಿನಗಳಲ್ಲೇ ಘೋಷಣೆ ಮಾಡಿತ್ತು. ಯುದ್ಧಕ್ಕೆ ಮೊದಲು ಕಟ್ಟಡದ ಜೊತೆ ಹಸಿರಿನ ಮಿಶ್ರಣದೊಂದಿಗೆ ಸುಂದರವಾಗಿದ್ದ ಗಾಜಾ ಬಾಂಬ್ ದಾಳಿಯ ನಂತರ ಬೂದು ಬಣ್ಣದ ಬಂಜರು ಭೂಮಿಯಂತೆ ಗೋಚರಿಸುತ್ತಿದೆ.
ಈ ಮಧ್ಯೆ ಉತ್ತರ ಗಾಜಾ ಮೇಲೆ ಭೂದಾಳಿ ನಡೆಸುವುದಾಗಿ ಎರಡು ವಾರಗಳಿಂದ ಎಚ್ಚರಿಕೆ ನೀಡುತ್ತಾ ಬಂದಿದ್ದ ಇಸ್ರೇಲ್ ಸೇನೆ ಬುಧವಾರ ರಾತ್ರೋರಾತ್ರಿ ಭೂದಾಳಿಗೆ ತನ್ನ ಸನ್ನದ್ಧತೆಯನ್ನು ಪರೀಕ್ಷಿಸಲು ಕೆಲ ಗಂಟೆಗಳ ಕಾಲ ಪ್ರಾಯೋಗಿಕ ಭೂದಾಳಿ ನಡೆಸಿದೆ.
ಯುದ್ಧ ಸಂತ್ರಸ್ತರ ಸಂಕಟ
ಈ ವೇಳೆ ಹಲವು ಉಗ್ರರನ್ನು ಹತ್ಯೆಗೈದಿರುವುದಾಗಿ ಹಾಗೂ ಹಮಾಸ್‌ನ ಯುದ್ಧ ಸಂಬಂಧಿ ಮೂಲಸೌಕರ್ಯಗಳನ್ನು ನಾಶಗೊಳಿಸಿ, ಕ್ಷಿಪಣಿಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ.
ಬಾಂಬ್ ದಾಳಿಯಲ್ಲಿ ಮೃತಪಟ್ಟ ಮಗುವಿನ ಕಳೇಬರದೊಂದಿಗೆ ತಂದೆ
ದೊಡ್ಡ ಭೂದಾಳಿಗೂ ಮುನ್ನ ನಡೆಸಿದ ಸೀಮಿತ ದಾಳಿಯಿದು. ಯುದ್ಧದ ಮುಂದಿನ ಹಂತಕ್ಕೆ ನಮ್ಮ ಸೇನೆಯ ಸನ್ನದ್ಧತೆ ಪರೀಕ್ಷಿಸಲು ಈ ದಾಳಿ ನಡೆಸಿದ್ದೇವೆ. ದಾಳಿಯ ವೇಳೆ ನಮ್ಮ ಸೈನಿಕರಾರೂ ಗಾಯಗೊಂಡಿಲ್ಲ ಎಂದು ಇಸ್ರೇಲ್ ಸೇನೆ ಅಧಿಕೃತವಾಗಿ ತಿಳಿಸಿದೆ.
ಭೂದಾಳಿಯ ಸನ್ನದ್ಧತೆ ಪರೀಕ್ಷಿಸಲು ನಡೆಸಿದ ದಾಳಿಯ ಹೊರತಾಗಿ ಬುಧವಾರ ರಾತ್ರಿಯಿಡೀ ಇಸ್ರೇಲ್ ಸೇನೆ ಗಾಜಾ ಮೇಲೆ ನಿರಂತರ ವಾಯುದಾಳಿಯನ್ನು ಕೂಡ ನಡೆಸಿದೆ. ಈ ವೇಳೆ 750 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ಹೇಳಿದ್ದಾರೆ
ಕಟ್ಟಡಗಳ ಅವಶೇಷಗಳಲ್ಲಿ ತಮ್ಮವರಿಗಾಗಿ ಶೋಧ
ಬುಧವಾರ ನಡೆದ ದಾಳಿಯಲ್ಲಿ ಅಲ್‌ಜಝೀರಾದ ಗಾಜಾ ಪ್ರತಿನಿಧಿ ಹಾಗೂ ಹಿರಿಯ ಪತ್ರಕರ್ತ ವೇಲ್ ಡೋಡಫ್ ಅವರ ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಗ ಕೂಡ ಮೃತಪಟ್ಟಿದ್ದಾರೆ.
ಸುರಕ್ಷಿತ ಪ್ರದೇಶಕ್ಕೆ ವಲಸೆ ಹೊರಟಿರುವ ಬಾಲಕ
ನಾವು ಗಾಜಾದಲ್ಲಿರುವ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದೇವೆ. ಆದರೆ ಉಗ್ರರು ಜನನಿಬಿಡ ಸ್ಥಳಗಳಿಂದಲೇ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ.
ಬಾಂಬ್ ದಾಳಿಗೆ ಕುಸಿದ ಕಟ್ಟಡಗಳ ಅವಶೇಷ
ಇಸ್ರೇಲ್ ಮೇಲೆ ಮತ್ತೆ ದಾಳಿ ನಡೆಸಲು ಸಾಧ್ಯವಿಲ್ಲದಷ್ಟು ಹಮಾಸ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಷ್ಟೇ ನಮ್ಮ ಉದ್ದೇಶ. ಮತ್ತೆ ಗಾಜಾವನ್ನು ನಾವು ವಶಪಡಿಸಿಕೊಳ್ಳುವುದಿಲ್ಲ. 2005ರಲ್ಲೇ ಅಲ್ಲಿಂದ ನಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದ್ದೇವೆ’ ಎಂದು ಇಸ್ರೇಲ್ ಹೇಳಿದೆ.
ಅವಶೇಷಗಳಡಿ ತನ್ನವರಿಗಾಗಿ ಹುಡುಕಾಟ
ಈವರೆಗೆ ಇಸ್ರೇಲ್‌ನ ದಾಳಿಯಲ್ಲಿ 6500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಅದೇ ವೇಳೆ, ಕನಿಷ್ಠ 1400 ಇಸ್ರೇಲಿಗರೂ ಸಾವನ್ನಪ್ಪಿದ್ದಾರೆ. ಹೀಗಾಗಿ ಯುದ್ಧದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 8000ಕ್ಕೆ ಏರಿಕೆಯಾಗಿದೆ.
ಗಾಜಾದಲ್ಲಿರುವ 23 ಲಕ್ಷ ಜನರ ಪೈಕಿ 14 ಲಕ್ಷ ಜನರು ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ವಿಶ್ವಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಲಕ್ಷಾಂತರ ನಾಗರಿಕರು ಉತ್ತರ ಗಾಜಾದಲ್ಲಿದ್ದಾರೆ. ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಎಚ್ಚರಿಕೆ ನೀಡುತ್ತಾ ಬಂದಿದ್ದು, ಉತ್ತರ ಗಾಜಾ ಮೇಲೆ ಭೂದಾಳಿ ನಡೆಸಿ ಭಯೋತ್ಪಾದಕರ ಎಲ್ಲಾ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಹೇಳಿದೆ.