ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿ, ಬಿಗ್ ಬಾಸ್ ಕನ್ನಡದ (Bigg Boss Kannada) ಮೂಲಕ ಕನ್ನಡಿಗರ ಮನಗೆದ್ದು, ಇದೀಗ ನಿನಗಾಗಿ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿರುವ ನಟ ಕಿಶನ್ ಬಿಳಗಲಿ. ಇವರು ಅದ್ಭುತ ಡ್ಯಾನ್ಸರ್ ಅನ್ನೋದು ನಿಮಗೆ ಗೊತ್ತೇ ಇದೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಿಶನ್ ಬಿಳಗಲಿ (Kishen Bilagali) ಹೆಚ್ಚಾಗಿ ತಮ್ಮ ಡ್ಯಾನ್ಸ್ ವಿಡೀಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅದರಲ್ಲೂ ನಮೃತಾ ಗೌಡ, ಚೈತ್ರಾ ಆಚಾರ್ ಸೇರಿ ಹಲವಾರು ನಟಿಯರ ಜೊತೆಗೆ ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ರೋಮ್ಯಾಂಟಿಕ್ ಬಾಯ್ ಆಗಿಯೂ ಜನಪ್ರಿಯತೆ ಪಡೆದಿದ್ದಾರೆ.
ಇದೀಗ ಕಿಶನ್ ಬಿಳಗಲಿ ತಮ್ಮ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ತಾವೇ ಮಾಡೆಲ್ ನಂತೆ ಬರಿ ಮೈಯಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಫೋಟೊ ತುಂಬಾನೆ ಹಾಟ್ ಆಗಿದೆ ಅಂತಾನೆ ಹೇಳಬಹುದು. ಈ ಫೋಟೊಗೆ ಕಿಶನ್ Life is about creating yourself ಎಂದು ಕ್ಯಾಪ್ಶನ್ ಕೊಟ್ಟಿದ್ದು, ಈ ಫೋಟೊಗಾಗಿ ಹೊಟ್ಟೆಯನ್ನು ಹಿಡಿದಿಟ್ಟುಕೊಂಡಿದ್ದೇನೆ ಅಂತಾನೂ ಹೇಳಿದ್ದಾರೆ.
ಕಿಶನ್ ಫೋಟೊಗಳಿಗೆ ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ಸ್ ಗಳು ಬಂದಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಫೈರ್ ಇಮೋಜಿ ತುಂಬಿವೆ, ಹಾಗಾಗಿ ಈ ಫೋಟೊ ಇಂಟರ್ನೆಟ್ ನಲ್ಲಿ ಕಿಚ್ಚು ಹಚ್ಚುತ್ತಿರೋದಂತೂ ನಿಜಾ. ಜೊತೆಗೆ ಡ್ಯಾಶಿಂಗ್, ಅಮೇಜಿಂಗ್ ಎಂದಿದ್ದಾರೆ, ಅಷ್ಟೇ ಅಲ್ಲ ನಿಮ್ಮನ್ನು ಈ ರೀತಿ ನೋಡುತ್ತಿದ್ದರೆ, ಹೊಟ್ಟೆಯಲ್ಲಿ ಚಿಟ್ಟೆ ಹರಿದಾಡಿದಂತೆ ಆಗುತ್ತೆ ಎಂದಿದ್ದಾರೆ.
ಬಾಲ್ಯದಿಂದ ನೃತ್ಯದಲ್ಲಿ ಅಸಕ್ತಿ ಹೊಂದಿದ್ದ ಕಿಶನ್, 2018 ರ ಹಿಂದಿ ಕಿರುತೆರೆಯ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ (Dance Diwani)ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಹಾಗೇ ತಕಧಿಮಿತಾ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ ಡ್ಯಾನ್ಸ್ ಕ್ಲಾಸ್ ಕೂಡ ನಡೆಸುತ್ತಿರುವ ಕಿಶನ್, ತಮ್ಮ ನೃತ್ಯ ತಂಡದೊಂದಿಗೆ ಭಾರತದ ಹಲವು ನಗರಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 12 ರಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಕಿಶನ್ ಏನಾದರೂ ಒಂದು ಸಾಧನೆ ಮಾಡಬೇಕೆಂದು ಕನ್ನಡ ಬಿಗ್ ಬಾಸ್ 7 ಸೀಸನ್ ನಲ್ಲಿ 10 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸದ್ಯ ನಿನಗಾಗಿ ಸೀರಿಯಲ್ ಹಾಗೂ ಒಂದಷ್ಟು ಸಿನಿಮಾಗಳಲ್ಲೂ ಸಹ ಕಿಶನ್ ಬಣ್ಣ ಹಚ್ಚಿದ್ದಾರೆ. ಇನ್ನು ಕಿಶನ್ ಚಿಕ್ಕಮಗಳೂರಿನಲ್ಲಿ ತಮ್ಮದೇ ಆದ ಹೋ ಸ್ಟೇ ಕೂಡ ಹೊಂದಿದ್ದಾರೆ.