ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್ (Ranjani Raghavan). ಸದ್ಯ ಇವರು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಹ, ಮತ್ತೆ ಆಕೆಯನ್ನು ಕಿರುತೆರೆಯಲ್ಲಿ ನೋಡಲು ಬಯಸುವ ಅಭಿಮಾನಿಗಳೇ ಹೆಚ್ಚಿದ್ದಾರೆ. ಆದ್ರೆ ರಂಜನಿ ರಾಘವನ್ ಮತ್ತೆ ಸೀರಿಯಲ್ ಗೆ ಬರ್ತಾರಾ?
ಪುಟ್ಟಗೌರಿ ಮದುವೆ (Putta Gowri Maduve) ಸೀರಿಯಲ್ ನಲ್ಲಿ ಗೌರಿಯಾಗಿ ಮೊದಲ ಬಾರಿಗೆ ನಟನೆಗೆ ಎಂಟ್ರಿ ಕೊಟ್ಟ ರಂಜನಿ ರಾಘವನ್ ಒಂದಷ್ಟು ಹೆಸರು ಮಾಡಿದ್ದರು. ತದ ನಂತರ ಒಂದೆರಡು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು, ಆದರೆ ಅದ್ಯಾವುದೂ ಅವರಿ ಅಷ್ಟು ಹೆಸರು ತಂದು ಕೊಟ್ಟಿಲ್ಲ.
ಆದರೆ ರಂಜನಿ ರಾಘವನ್ ಅವರಿಗೆ ಕರ್ನಾಟಕದಾದ್ಯಂತ ಹೆಸರು ತಂದು ಕೊಟ್ಟಂತಹ ಸೀರಿಯಲ್ ಅಂದ್ರೆ ಅದು ಕನ್ನಡತಿ (Kannadati). ಕನ್ನಡತಿಯಲ್ಲಿ ಭುವಿಯಾಗಿ,ಕನ್ನಡ ಟೀಚರ್ ಆಗಿ ರಂಜನಿ ಅಭಿನಯ ಅದ್ಭುತವಾಗಿತ್ತು. ಅವರ ಭಾಷೆ, ನಟನೆಯನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಅದರಲ್ಲೂ ಭುವಿ ಮತ್ತು ಹರ್ಷ ಜೋಡಿ ಜನಮೆಚ್ಚಿದ ಜೋಡಿಯಾಗಿತ್ತು.
ಕನ್ನಡತಿಯಲ್ಲಿ ರಂಜನಿಯವರ ಪ್ರಬುದ್ಧ ಅಭಿನಯ, ಅವರ ಮಾತಿನ ದಾಟಿ, ಕನ್ನಡ ಕಲಿಸುವ ವಿಧಾನ ಎಲ್ಲವೂ ಕನ್ನಡಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತ್ತು. ಈ ಸೀರಿಯಲ್ ಮುಗಿಯಿತು ಎಂದಾಗ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರಪಟ್ಟಿದ್ದರು. ಮತ್ತೆ ರಂಜನಿಯವರನ್ನು ಕಿರುತೆರೆ ಮೇಲೆ ಕಾಣಬೇಕೆಂದು ಹಂಬಲಿಸಿದ್ದು ಕೂಡ ಇದೆ.
ಇತ್ತೀಚೆಗೆ ರಂಜನಿ ರಾಘವನ್ ಮತ್ತೆ ಸೀರಿಯಲ್ ನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದು, ನಾವು ಟಿವಿ ಸೀರಿಯಲ್ ಗಳಲ್ಲಿ ಇದುವರೆಗೂ ಮಾಡದೇ ಇರುವಂತಹ ಪಾತ್ರಗಳು, ಬಂದ್ರೆ ಮಾತ್ರ ಮಾಡ್ತೇನೆ, ಹೊರತು ಮತ್ತೆ ಒಂದೇ ರೀತಿಯ ಪಾತ್ರಗಳನ್ನು ನಾನು ಮಾಡೋದಿಲ್ಲ ಎಂದು ಹೇಳಿದ್ದಾರೆ ರಂಜನಿ.
ಅಷ್ಟೇ ಅಲ್ಲ, ಅದೇ ರೀತಿಯ ಪಾತ್ರಗಳನ್ನು ಮತ್ತೆ ನಾನೇ ಯಾಕೆ ಮಾಡಬೇಕು? ಬೇರೆಯವರಿಗೂ ಅವಕಾಶ ಸಿಗಲಿ ಎಂದಿದ್ದಾರೆ. ಜೊತೆಗೆ ಹೊಸತನದ ಹುಡುಕಾಟ ನನಗೆ ದಿನಾಲೂ ಇರುತ್ತೆ. ಹೊಸ ಪಾತ್ರ ನನಗೆ ಥ್ರಿಲ್ ಕೊಡುತ್ತೆ, ಖುಷಿ ಕೊಡುತ್ತೆ ಎಂದಿದ್ದಾರೆ ರಂಜನಿ ರಾಘವನ್.
ರಂಜನಿಯವರ ಮಾತಿಗೆ ಅಭಿಮಾನಿಯೊಬ್ಬರು ಉತ್ತರಿಸಿದ್ದು ರಂಜನಿಯವರೇ ನಿಮ್ಮದು ಬಹುಮುಖ ಪ್ರತಿಭೆ ! ನಿಮಗೆ ಸೀರಿಯಲ್ ಗಳಿಂದಲೇ ಹೆಚ್ವು ಜನಪ್ರಿಯತೆ ಸಿಕ್ಕಿದೆ. ಹೊಸತನದ ಪಾತ್ರಗಳು ಸಿಕ್ಕಿದರೆ ನಟಿಸುವ ನಿಮ್ಮ ನಿರ್ಧಾರ ಸ್ವಾಗತಾರ್ಹ ! ಆದರೆ ಅಂತಹ ಪಾತ್ರಗಳು ಸಿಗದೇ ಗ್ಯಾಪ್ ಜಾಸ್ತಿಯಾದರೆ ಒಳ್ಳೆಯದಲ್ಲ...ಯಾಕೆಂದರೆ ಜನ ಸೆಲೆಬ್ರಿಟಿಗಳು ನಿರಂತರವಾಗಿ ನಟಿಸೋದನ್ನು ಇಷ್ಟ ಪಡುತ್ತಾರೆ. ಜನರಿಂದ ನಿಮಗೆ ಸಿಕ್ಕಿರುವ ಮೆಚ್ಚುಗೆ ಅಭಿಮಾನವನ್ನು ಹಾಗೆಯೇ ಉಳಿಸಿ ಕೊಂಡು ಹೋಗಲು ನೀವು ತೆರೆಯ ಮೇಲೆ ಬರುತ್ತಿರಬೇಕು ಅನಿಸುತ್ತೆ. ನಿಮ್ಮನ್ನು ಮೆಚ್ಚುವ ವೀಕ್ಷಕರಿಗಾದರೂ ಆಗಾಗ ಧಾರಾವಾಹಿಗಳಲ್ಲಿ ಪಾತ್ರ ಮಾಡಿ , ಇದು ನನ್ನ ಅಭಿಪ್ರಾಯ ಅಷ್ಟೇ ! ಶುಭವಾಗಲಿ ಎಂದಿದ್ದಾರೆ.