ಯುಗಾದಿ ವಿಶೇಷ ಸಂಚಿಕೆಯ ಸಲುವಾಗಿ ಕಳೆದ ಒಂದು ವಾರದಿಂದ ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಒಬ್ಬೊಬ್ಬರೇ ವಿಶೇಷ ಅತಿಥಿಗಳ ಆಗಮನವಾಗಿದೆ. ಇದೀಗ ಅಂತರಪಟ ಸೀರಿಯಲ್ ಗೂ ವಿಶೇಷ ಅತಿಥಿ ಇಂದು ಆಗಮಿಸಲಿದ್ದಾರೆ ಅನ್ನೋದು ಸೀರಿಯಲ್ ಪ್ರೊಮೋ ಮೂಲಕ ತಿಳಿದು ಬಂದಿದೆ.
ರಾಮನವಮಿ ಹಬ್ಬದ ಸಂಭ್ರಮದಲ್ಲಿರುವ ಆರಾಧನಾ ಮತ್ತು ಸುಶಾಂತ್ ಮನೆಗೆ ಇದೀಗ ಗಿಣಿರಾಮ ಸೀರಿಯಲ್ ನಲ್ಲಿ ಮಹತಿ ಪಾತ್ರದಲ್ಲಿ ಮಿಂಚಿದ ನಟಿ ನಯನ ನಾಗರಾಜ್ ಎಂಟ್ರಿ ಕೊಟ್ಟಿದ್ದಾರೆ. ಗಿಣಿರಾಮದ (Ginirama serial) ಮಹತಿ ಶಿವರಾಮ್ ದೇಶಪಾಂಡೆಯಾಗಿಯೇ ನಯನ ಎಂಟ್ರಿ ಕೊಡ್ತಿದ್ದಾರೆ.
ಗೆಸ್ಟ್ ಟ್ವಿಸ್ಟ್ ಎಲ್ಲಾ ಒಟ್ಟಾಗಿ ಸೇರಲಿರುವ ಅಂತರಪಟ ಒಂದು ಗಂಟೆಯ ಮಹಾಸಂಚಿಕೆ ಇಂದು ಪ್ರಸಾರವಾಗಲಿದೆ. ಮಹತಿಯ ಆಗಮನದ ಮೂಲಕ ಧಾರಾವಾಹಿಯಲ್ಲಿ ಯಾವೆಲ್ಲಾ ಟ್ವಿಸ್ಟ್ ಬರಲಿದೆ ಅನ್ನೋದನ್ನು ನೋಡಬೇಕು.
ಅತ್ತೆ ಮನೆಯಲ್ಲಿದ್ದರೂ ನೆಮ್ಮದಿ ಇಲ್ಲದ ಜೀವನ ಆರಾಧನಾಳದ್ದು, ಗಂಡನ ಪ್ರೀತಿ, ಮಾವನ ಪ್ರೀತಿ ಇದೆ, ಆದರೆ ಅತ್ತೆಯ ದ್ವೇಷ ಮತ್ತು ಅತ್ತಿಗೆಯ ಕುತಂತ್ರಕ್ಕೆ ಆರಾಧನಾಳ ಬಾಳು ಏಳು, ಬೀಳುಗಳಿಂದ ಕೂಡಿದೆ. ಇದಿಗ ಮಹತಿ ಪಾತ್ರದ ಎಂಟ್ರಿಯಾಗೋ ಮೂಲಕ ಆ ಎಲ್ಲಾ ಸಮಸ್ಯೆ ಸರಿಯಾಗುತ್ತಾ ಕಾದು ನೋಡಬೇಕು.
ಇನ್ನು ವರ್ಷಗಳ ಬಳಿಕ ಗಿಣಿರಾಮ ಸಿರಿಯಲ್ ನ ಮಹತಿಯನ್ನು ಮತ್ತೆ ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ಮೆಚ್ಚಿನ ನಟಿಯನ್ನು ಸೀರಿಯಲ್ ನಲ್ಲಿ ನೋಡೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ ವೀಕ್ಷಕರು.
ಮಹತಿ ಪಾತ್ರದಲ್ಲಿ ಕಾಣಿಸಿಕೊಂಡ ನಯನ ನಾಗರಾಜ್ (Nayana Nagraj), ಬಳಿಕ ಕಿರುತೆರೆಯಿಂದ ಕೊಂಚ ದೂರವೇ ಇದ್ದರು. ತಮ್ಮ ಹಾಡು, ಟ್ರಾವೆಲ್ ಗಳಲ್ಲೇ ಬ್ಯುಸಿಯಾಗಿದ್ದರು, ಜೊತೆಗೆ ನಿರೂಪಣೆ ಮಾಡುತ್ತಾ, ಕೆಲವೊಂದು ಶಾರ್ಟ್ ಫಿಲಂಗಳಲ್ಲಿ ನಟಿಸುತ್ತಿದ್ದರು. ಇದೀಗ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಇತ್ತೀಚೆಗಷ್ಟೇ ನಯನ ತಮ್ಮ ಗೆಳೆಯ ಸುಹಾಸ್ ಶಿವಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ನಯನ ಮದುವೆ ಯಾವಾಗ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.