ಅಮೃತವರ್ಷಿಣಿ (Amruthavarshini) ಸೀರಿಯಲ್ ನ ವರ್ಷಾ ಪಾತ್ರ ಯಾರ್ ತಾನೆ ಮರಿಬೋದು? ಅಮೃತಾಳಿಗೆ ಕಾಟ ಕೊಡುವ ತಂಗಿಯಾಗಿ ಸ್ವಾತಿ ಅದ್ಭುತ ಅಭಿನಯ ನೀಡಿದ್ದರು. ಅದಾಗಿ ಎಷ್ಟೊಂದು ವರ್ಷಗಳೇ ಕಳೆದರೂ ಇಂದಿಗೂ ಜನ ಸ್ವಾತಿಯವರನ್ನು ವರ್ಷಾ ಅಂತಲೇ ಗುರುತಿಸುತ್ತಾರೆ.
ಇದೀಗ ಸ್ವಾತಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ (Amruthadhare) ಆನಂದ್ ಪತ್ನಿ ಅಪರ್ಣಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆನಂದ್ ಮತ್ತು ಅಪರ್ಣ ಜೋಡಿ ಸಹ ವೀಕ್ಷಕರನ್ನು ಮೋಡಿ ಮಾಡುತ್ತಿದೆ.
ಸದಾ ಗಂಡನ ಕಾಲೆಳೆಯುತ್ತಾ, ಗಂಡನನ್ನು ಸಂಶಯದಿಂದ ನೋಡುವ, ಆದರೆ ಗಂಡನ ಎಲ್ಲಾ ಕೆಲಸದಲ್ಲಿ ಸಾಥ್ ನೀಡುವ ಹೆಂಡತಿಯಾಗಿ ಸ್ವಾತಿ ನಟಿಸುತ್ತಿದ್ದಾರೆ. ರಿಯಲ್ ಲೈಫಲ್ಲೂ ಸ್ವಾತಿ ತಮ್ಮ ಗಂಡನ ಜೊತೆ ಸಿಕ್ಕಾಪಟ್ಟೆ ಜಗಳ ಮಾಡುತ್ತಲೇ ಇರುತ್ತಾರಂತೆ. ಆದರೆ ಲವ್ ಮಾತ್ರ ಕಡಿಮೆಯಾಗಿಲ್ಲ ಅಂತಾರೆ ಸ್ವಾತಿ.
ತಮ್ಮ ಪಕ್ಕದ ಮನೆಯಲ್ಲಿದ್ದ ಹುಡುಗ ಅನಿಲ್ ರನ್ನು ಲವ್ ಮಾಡಿ ಮದುವೆಯಾಗಿರುವ ಸ್ವಾತಿ. ಇವರಿಬ್ಬರ ಪ್ರೀತಿಗೆ ಸುಮಾರು 24-25 ವರ್ಷಗಳೇ ತುಂಬಿದೆಯಂತೆ. ಈವಾಗಲೂ ಕಾಲೆಳೆಯುವ, ಕೀಟಲೆ ಮಾಡುವ ಕೆಲಸ ಮಾಡೋದು ಬಲು ಪ್ರೀತಿ. ಸ್ವಾತಿಯವರನ್ನೇ ಮದುವೆಯಾಗಲು ಅನಿಲ್ ಒದೆ ಕೂಡ ತಿಂದಿದ್ದಾರಂತೆ, ಅಷ್ಟೇ ಅಲ್ಲ ಸ್ವಾತಿ ಮನೆಯಲ್ಲಿ ಫೈಟ್ ಕೂಡ ಮಾಡಿದ್ದಾರಂತೆ.
ಅನಿಲ್ ಸಹ ನಟರಾಗಿದ್ದು, ಮೊದಲೇ ನಟನೆಯತ್ತ ಒಲವಿದ್ದ ಅನಿಲ್ ಅವರಿಗೆ ಈ ಕ್ಷೇತ್ರದಲ್ಲಿ ಕಾಲಿಡುವಂತೆ ಮಾಡಿದ್ದೆ ಪತ್ನಿ ಸ್ವಾತಿ. ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಸೂಪರ್ ಜೋಡಿ (Super Jodi) ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ವಿನ್ನರ್ ಆಗಿದ್ದರು. ಇದಾದ ನಂತರ ಅನಿಲ್ ಕೂಡ ನಟನೆಯಲ್ಲಿ ಬ್ಯುಸಿಯಾದ್ರಂತೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಈ ಜೋಡಿ ಪ್ರೀತಿಯಲ್ಲಿ ಜಗಳ ಇರೋದು ಸಾಮಾನ್ಯ ಎನ್ನುವ ಅನಿಲ್ (Anil) ಅದು ಇದ್ರೇನೆ ಪ್ರೀತಿ ಮತ್ತಷ್ಟು ಹೆಚ್ಚೋದಕ್ಕೆ ಸಾಧ್ಯವಾಗುತ್ತೆ ಎನ್ನುತ್ತಾರೆ. ಇಬ್ಬರಲ್ಲಿ ಜಗಳ ಆದಾಗ ಇಬ್ಬರು ಮಾತನಾಡೋದಕ್ಕೆ ಹೋಗಲ್ಲ, ಆಮೇಲೆ ಅದು ತಣ್ಣಗಾಗುತ್ತೆ, ನಾವು ಜಗಳವನ್ನೇ ಮರೆತು ಬಿಡ್ತೀವಿ, ಪ್ರೀತಿ ಚೆನ್ನಾಗಿರಬೇಕು ಅಂದ್ರೆ, ಅದರಲ್ಲಿ ಈಗೋ ಅನ್ನೋದು ಇರಬಾರದು ಎನ್ನುತ್ತಾರೆ ಅನಿಲ್.
ಇನ್ನು ಅತ್ತೆಯ ಮುದ್ದಿನ ಸೊಸೆಯಾಗಿರುವ ಸ್ವಾತಿಗೆ ಅಡುಗೆ ಅಂದ್ರೆ ಆಗಿ ಬರಲ್ವಂತೆ. ಮದುವೆಯಾದ ಆರಂಭದಲ್ಲೇ ಅತ್ತೆ ಎಲ್ಲವನ್ನೂ ಸೊಸೆಗಾಗಿ ಮಾಡಿ ತಂದಿಡುತ್ತಿದ್ದರಂತೆ, ಅದರಿಂದಲೇ ತಾನು ಸೋಮಾರಿಯಾದೆ, ಆಡುಗೆ ಕಲಿಯೋದಕ್ಕೆ ಹೋಗಿಲ್ಲ ಅಂದ್ರೆ, ಅನಿಲ್ ನನ್ನ ಹೆಂಡ್ತಿ ಅಡುಗೆ ಮಾಡಲ್ಲ ಅಂತ ಯಾವಾಗ ಗೊತ್ತಾಯ್ತು ನಾನೇ ಯೂಟ್ಯೂಬ್ ನೋಡಿ ಬೇರೆ ಬೇರೆ ವೆರೈಟ್ ಅಡುಗೆ ಮಾಡೋದು ಕಲಿತೆ ಎನ್ನುತ್ತಾರೆ.
ಸ್ವಾತಿ ನನ್ನ ಜೀವನಕ್ಕೆ ಬಂದಿರೋದೆ ನನ್ನ ಅದೃಷ್ಟ ಎನ್ನುವ ಅನಿಲ್ ಜೀವನದಲ್ಲಿ ಸ್ವಾತಿ ಬಂದಿದ್ದೇ ಒಂದು ಸೋಜಿಗೆ. 9ನೇ ಕ್ಲಾಸಲ್ಲೇ ಪಕ್ಕದ ಮನೆ ಹುಡುಗನ ಮೇಲೆ ಲವ್ ಆಗಿ, ಅವನು ಪ್ರಪೋಸ್ ಮಾಡಿ, ತುಂಬಾನೆ ಸಮಯ ತೆಗೆದುಕೊಂಡು ಸ್ವಾತಿನೂ ಓಕೆ ಹೇಳಿದ್ರಂತೆ. ಆದರೆ ಅನಿಲ್ ಮನೆಯಲ್ಲಿ ಎಲ್ಲರೂ ಒಪ್ಪಿಕೊಂಡರೂ, ಅಷ್ಟು ಸಣ್ಣ ವಯಸ್ಸಲ್ಲಿ ಲವ್ ಮಾಡಿರೋ ಸ್ವಾತಿಯ ಲವ್ವನ್ನು ಅವರ ಮನೆಯಲ್ಲಿ ಒಪ್ಪಿಕೊಂಡಿಲ್ವಂತೆ.
ಕೊನೆಗೆ ತುಂಬಾನೆ ಚಾಲೆಂಜಸ್ ಎದುರಿಸಿ, ಒಂದೊಂದೇ ಸ್ಟೆಪ್ ಮೇಲೆ ಏರಿ, ಒಂದು ಕೆಲಸ ಗಿಟ್ಟಿಸಿ, ಎಲ್ಲಾ ಆಗಿ ಬಳಿಕ ಮನೆಯವರು ಒಪ್ಪಿಕೊಂಡರಂತೆ. ಇದೆಲ್ಲಾ ಆಗಿ ಈ ಜೋಡಿ ಸೂಪರ್ ಜೋಡಿಯಾಗಿ ಮಿಂಚಿದ್ದು ಆಗಿದೆ. ಸದ್ಯ ಸ್ವಾತಿ ತಮಿಳು, ತೆಲುಗು ಕನ್ನಡ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದರೆ. ಬ್ಯುಸಿನೆಸ್ ಮ್ಯಾನ್ ಆಗಿರುವ ಅನಿಲ್ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಾಂತಂಪಾಪಂ ನ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದರು.
ಇಂದಿನ ಯುವ ಜೋಡಿಗಳಿಗೆ ಲವ್ ಅಡ್ವೈಸ್ ನೀಡಿರುವ ಸ್ವಾತಿ, ಇಬ್ಬರ ನಡುವೆ ಎಷ್ಟೇ ಜಗಳ ಆದ್ರು ಅದನ್ನು ಕೂತು ಬಗೆಹರಿಸಿ, ಈಗೋ ಬೇಡವೇ ಬೇಡ. ಈವಾಗ ನಮ್ಮ ಜೀವನವೇ ಶಾರ್ಟ್ ಆಗಿದೆ. ಹಾಗಾಗೀ ಅದರಲ್ಲಿ ಈಗೋ, ದ್ವೇಷ ಎಲ್ಲ ಇಟ್ಟುಕೊಳ್ಳೋದು ಬೇಡ. ಇಬ್ಬರ ನಡುವೆ ಏನೇ ಆದರೂ ಮಾತಾನಾಡಿ ಬಗೆಹರಿಸಿ. ಕೂತು ಮಾತನಾಡಿದ್ರೆ ಸರಿ ಆಗದೇ ಇರೋದು ಯಾವುದು ಇಲ್ಲ ಎನ್ನುತ್ತಾರೆ ಸ್ವಾತಿ.