ಲಾಲ್‌ಬಾಗ್ ಮಾವು ಮೇಳಕ್ಕೆ ಬಂತು ವಿಶ್ವದ ಅತ್ಯಂತ ದುಬಾರಿ ‘ಮಿಯಾಜಾಕಿ’; ಇದರ ಬೆಲೆ ₹3 ಲಕ್ಷ ಅಲ್ಲ, ಬರೀ 2000 ರೂ.!

Published : Jun 07, 2026, 07:21 PM IST

ಬೆಂಗಳೂರಿನ ಲಾಲ್‌ಬಾಗ್‌ ಮಾವು ಮೇಳದಲ್ಲಿ, ವಿಶ್ವದ ಅತ್ಯಂತ ದುಬಾರಿ 'ಮಿಯಾಜಾಕಿ' ಮಾವು ಮಾರಾಟಕ್ಕೆ ಲಭ್ಯವಿದೆ. ಕರ್ನಾಟಕದ ರೈತರೇ ಬೆಳೆದ ಈ ಮಿಯಾಜಾಜಿ (Miyazaki Mango)  ಹಣ್ಣು, 2 ಲಕ್ಷ ರೂ. ಬದಲು ಕೇವಲ 2,000 ರೂ.ಗೆ ಮಾರಾಟ ಮಾಡಲಾಗುತ್ತಿದೆ.  ಹಣ್ಣಿನ ವಿಶೇಷತೆ ತಿಳಿಯಲು ಓದಿ.

PREV
16
ಜಪಾನ್ ಮಿಯಾಜಾಕಿ ಲಾಲ್‌ ಬಾಗ್ ಮಾವು ಮೇಳದಲ್ಲಿ ಶೋಕಿ

ಬೆಂಗಳೂರಿನ ಮಾವು ಪ್ರಿಯರ ನೆಚ್ಚಿನ ತಾಣವಾಗಿರುವ ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ವಾರ್ಷಿಕ 'ಮಾವು ಮತ್ತು ಹಲಸು ಮೇಳ' ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ. ಜೂನ್ 5 ರಿಂದ ಜೂನ್ 30 ರವರೆಗೆ ಒಟ್ಟು 26 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಬರೋಬ್ಬರಿ 2.50 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಮಾರಾಟವಾಗುವ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು 'ಮಿಯಾಜಾಕಿ' (Miyazaki Mango) ಈ ಬಾರಿಯ ಮೇಳದ ಪ್ರಮುಖ ಶೋಕಿ ಎನಿಸಿಕೊಂಡಿದೆ. ಆದರೆ ಆಶ್ಚರ್ಯ ಎಂದರೆ, ಲಾಲ್‌ಬಾಗ್‌ನಲ್ಲಿ ಈ ಹಣ್ಣು ಲಕ್ಷಗಳಲ್ಲಲ್ಲ, ಕೇವಲ 2,000 ರೂಪಾಯಿಗೆ ಲಭ್ಯವಿದೆ!

26
ಕರ್ನಾಟಕದಲ್ಲೇ ಬೆಳೆದ ಮಿಯಾಜಾಕಿ ಹಣ್ಣು

ಜಪಾನ್ ಮೂಲದ ತಳಿಯಾಗಿರುವ ಈ ಮಿಯಾಜಾಕಿಯನ್ನು ನಮ್ಮ ಹೆಮ್ಮೆಯ ಕರ್ನಾಟಕದ ರೈತರೇ ಸ್ಥಳೀಯವಾಗಿ ಬೆಳೆದು ಮೇಳಕ್ಕೆ ತಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ 'ಅನ್ನಪೂರ್ಣೇಶ್ವರ ಫಾರ್ಮ್'ನಲ್ಲಿ ಬೆಳೆದ ಮಿಯಾಜಾಕಿ ಮಾವಿನ ಹಣ್ಣುಗಳನ್ನು ಇಲ್ಲಿ ಮಾರಾಟಕ್ಕಿಡಲಾಗಿದೆ.

36
ಹಣ್ಣಿನ ರುಚಿ ನೋಡಲು ಮುಂದಾದ ಮಾವು ಪ್ರಿಯರು

ಇಲ್ಲಿನ ಪ್ರತಿಯೊಂದು ಹಣ್ಣು ಕೂಡ ಸುಮಾರು 1 ಕೆಜಿಯಿಂದ ಹಿಡಿದು 1,200 ಗ್ರಾಂ ವರೆಗೆ ತೂಕ ಬರುತ್ತದೆ. ಹಾಗಾಗಿ, ರೈತರು ಇದನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡದೆ, ಕೇವಲ ಒಂದು ಹಣ್ಣಿಗೆ 2,000 ರೂಪಾಯಿ ಬೆಲೆ ನಿಗದಿಪಡಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಹಣ್ಣಿನ ರುಚಿ ಹೇಗಿರುತ್ತದೆ ಎಂದು ನೋಡಲು ಮಾವು ಪ್ರಿಯರು ಮುಂದಾಗಿದ್ದು, ಕಳೆದೆರಡು ಮೂರು ದಿನಗಳಲ್ಲೇ 150ಕ್ಕೂ ಅಧಿಕ ಮಿಯಾಜಾಕಿ ಹಣ್ಣುಗಳು ಮಾರಾಟವಾಗಿರಬಹುದು ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

46
ಮಾರುಕಟ್ಟೆ ಕೊರತೆಯಿಂದ ಕುಸಿದ ಬೆಲೆ

ಜಪಾನ್‌ನಲ್ಲಿ ಅತ್ಯಂತ ಐಷಾರಾಮಿ ಹಣ್ಣಾಗಿ ಗುರುತಿಸಿಕೊಂಡಿರುವ ಮಿಯಾಜಾಕಿಗೆ ನಮ್ಮ ದೇಶದಲ್ಲಿ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಭಾರತೀಯ ಗ್ರಾಹಕರು ಇಷ್ಟೊಂದು ದೊಡ್ಡ ಮೊತ್ತ ನೀಡಿ ಹಣ್ಣು ಖರೀದಿಸಲು ಮುಂದಾಗುತ್ತಿಲ್ಲ. ಅಲ್ಲದೆ, ನಮ್ಮ ದೇಶೀಯ ತಳಿಗಳಾದ ಬಾದಾಮಿ, ರಸಪುರಿಗಳ ರುಚಿಗೇ ಜನರು ಫಿದಾ ಆಗಿರುವುದರಿಂದ ಈ ದುಬಾರಿ ಹಣ್ಣಿನ ಸಹವಾಸಕ್ಕೆ ಯಾರೂ ಹೋಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಹಾಗೂ ಬ್ರ್ಯಾಂಡಿಂಗ್ ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ಇಷ್ಟು ಕಡಿಮೆ ಬೆಲೆಗೆ ಅಂದರೆ ಮಿಯಾಜಾಕಿ ಮಾವಿನ ಹಣ್ಣನ್ನು ಕೇವಲ 2 ಸಾವಿರ ರೂ.ಗೆ ಮಾರಾಟ ಮಾಡುವಂತಾಗಿದೆ.

56
20ಕ್ಕೂ ಅಧಿಕ ತಳಿಗಳ ರಾಜಮರ್ಯಾದೆ:

ಮೇಳದಲ್ಲಿ ಕೇವಲ ಮಿಯಾಜಾಕಿ ಮಾತ್ರವಲ್ಲದೆ, ರಾಜ್ಯದ ಪ್ರಮುಖ ಮಾವು ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯದ ರೈತರು ಭಾಗವಹಿಸಿದ್ದಾರೆ. ಮೇಳದಲ್ಲಿ ದಶೇರಿ, ಬಾದಾಮಿ, ಮಲ್ಲಿಕಾ, ಸಕ್ಕರೆ ಗುತ್ತಿ, ರಸಪುರಿ, ಆಮ್ರಪಾಲಿ, ಕೇಸರ್, ಹಿಮಾಮ್ ಪಸಂದ್, ಆಮ್ಲಟ್, ಕಾಲಾಪಾಡ್, ರುಮಾನಿ, ಸೇಂದೂರ, ಮರಿಗೌಡ, ತೋತಾಪುರಿ, ಲಾಂಗ್ರ ಸೇರಿದಂತೆ 20ಕ್ಕೂ ಹೆಚ್ಚು ತಳಿಯ ತಾಜಾ ಮಾವಿನ ಹಣ್ಣುಗಳು ಗ್ರಾಹಕರ ಕೈಗೆಟಕುವ ದರದಲ್ಲಿ ನೇರವಾಗಿ ರೈತರಿಂದಲೇ ಸಿಗುತ್ತಿವೆ.

66
ಪ್ರವೇಶ ಶುಲ್ಕದ ಬಗ್ಗೆ ಸಾರ್ವಜನಿಕರ ಆಕ್ರೋಶ:

ಒಂದೆಡೆ ಮಾವು ಮೇಳ ಸಾರ್ವಜನಿಕರನ್ನು ಸೆಳೆಯುತ್ತಿದ್ದರೆ, ಮತ್ತೊಂದೆಡೆ ಲಾಲ್‌ಬಾಗ್‌ನ ಪ್ರವೇಶ ಶುಲ್ಕ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಪ್ರತಿಯೊಬ್ಬರಿಗೂ 50 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದಲೇ ನಿರ್ವಹಣೆಯಾಗುವ ಇಂತಹ ಸಸ್ಯೋದ್ಯಾನಕ್ಕೆ, ಅದರಲ್ಲೂ ರೈತರಿಗಾಗಿ ಆಯೋಜಿಸುವ ಮಾವು ಮೇಳದ ಸಂದರ್ಭದಲ್ಲಿ ಇಷ್ಟು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಮಾವು ಪ್ರಿಯರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಶುಲ್ಕ ಕಡಿತಗೊಳಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories