ಸಾವು ಗೆದ್ದ 'ವಿಜಯ'ಪುರದ ಸಾತ್ವಿಕ್, ಜೀವ ಉಳಿಸಿದವರಿಗೆ ಕೋಟಿ ನಮನ

First Published | Apr 4, 2024, 2:16 PM IST

ಬರೋಬ್ಬರಿ 20 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ವಿಜಯಪುರದ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
 

ಬುಧವಾರ ಸಂಜೆಯ ವೇಳೆ ವಿಜಯಪುರದ ಇಂಡಿಯಲ್ಲಿ ತಲೆಕೆಳಗಾಗಿ ಬಿದ್ದಿದ್ದ 2 ವರ್ಷದ ಬಾಲಕನನ್ನು ಗುರುವಾರ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
 

ಬುಧವಾರ ಸಂಜೆ 5-6 ಗಂಟೆಯ ಸುಮಾರಿಗೆ ಹೊಲದಲ್ಲಿ ಹೊಸದಾಗಿ ತೆಗೆಸಲಾಗಿದ್ದ ಬೋರ್‌ವೆಲ್‌ನಲ್ಲಿ ಸಾತ್ವಿಕ್‌ ತಲೆಕೆಳಗಾಗಿ ಬಿದ್ದಿದ್ದ.

Latest Videos


ಅಂದಾಜು 20 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಗುರುವಾರ ಮಧ್ಯಾಹ್ನ ಅಂದಾಜು 2 ಗಂಟೆಯ ವೇಳೆಗೆ 3 ವರ್ಷದ ಬಾಲಕ ಸಾತ್ವಿಕ್‌ನನ್ನು ರಕ್ಷಣೆ ಮಾಡಲಾಗಿದೆ.
 

ಎಸ್‌ಡಿಎಆರ್‌ಎಫ್‌, ಅಗ್ನಿಶಾಮಕ ಸೇರಿದಂತೆ ವಿವಿಧ ರಕ್ಷಣಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕೊಳವೆ ಬಾವಿಯಿಂದ ಮಗು ಹೊರಬಂದ ಬೆನ್ನಲ್ಲಿಯೇ ಸ್ಥಳದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಹೊರಗೆ ಬಂದ ಮಗುವನ್ನು ತಕ್ಷಣವೇ ಆಂಬುಲೆನ್ಸ್‌ನಲ್ಲಿ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಲಾಗಿದೆ.
 

ಅಹೋರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಸಿಬ್ಬಂದಿಗೆ ಇಂದು ಬೆಳಗ್ಗೆಯ ವೇಳೆ ಬೋರ್‌ವೆಲ್‌ನ ಒಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿತ್ತು.

ಕೊಳವೆ ಬಾವಿಯಿಂದ ಮಗುವನ್ನು ರಕ್ಷಿಸಿ ಸ್ಟ್ರೆಚರ್‌ನಲ್ಲಿ ಹಾಕುವ ವೇಳೆ ಲಚ್ಯಾಣ ಗ್ರಾಮದ ಗ್ರಾಮಸ್ಥರು ರಕ್ಷಣಾ ಸಿಬ್ಬಂದಿಗೆ ಜೈಕಾರ ಕೂಗಿದರು.

2 ವರ್ಷದ ಮಗು ಸಾತ್ವಿಕ್‌  ಕೊಳವೆ  ಬಾವಿಯಿಂದ ಜೀವಂತವಾಗಿ ಹೊರಬರಲಿ ಎಂದು ಹಾರೈಸಿ ಲಚ್ಯಾಣ ಗ್ರಾಮದ ಜನರು, ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನೂ ಮಾಡಿದ್ದರು. 

ಹೊಲದಲ್ಲಿ ನಿಂಬೆ ಬೆಳೆ ಬೆಳೆದಿದ್ದ ಸತೀಶ್‌ ಮುಜುಗೊಂಡ, ನೀರಿನ ಸಲುವಾಗಿ ಏಪ್ರಿಲ್‌ 2 ರಂದು ಬೋರ್‌ವೆಲ್‌ ಕೊರೆಸಿದ್ದರು. ಆದರೆ, ನೀರು ಸಿಕ್ಕಿರಲಿಲ್ಲ.

ಬುಧವಾರ ಬೋರ್‌ವೆಲ್‌ ಬಳಿ ಅಟವಾಡುತ್ತಿದ್ದ ಸಾತ್ವಿಕ್‌ ಇದರ ಒಳಗೆ ತಲೆಕೆಳಗಾಗಿ ಬಿದ್ದಿದ್ದ. ಮಗುವನ್ನು ಹುಡುಕುತ್ತಾ ಬಂದ ತಾಯಿ ಪೂಜಾಗೆ ಮಗು ಬೋರ್‌ವೆಲ್‌ ಒಳಗೆ ಬಿದ್ದಿದ್ದು ಕಂಡಿದೆ. 

ಕಳೆದ 20 ಗಂಟೆಗಳಿಂದ ಮಗು ಕೊಳವೆ ಬಾವಿಯಲ್ಲಿ ಅನ್ನ-ನೀರು ಇಲ್ಲದೇ ಅಳುತ್ತಾ ಇತ್ತು.  ಆದರೆ, ಮಗುವಿನ ಆರೋಗ್ಯ ಸ್ಥಿರವಾಗಿತ್ತು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದರು.

ರಕ್ಷಣಾ ಕಾರ್ಯಾಚರಣೆಯ ವೇಳೆ ಕಲ್ಲು ಬಂಡೆಗಳು ಅಡ್ಡಿಯಾಗಿದ್ದರಿಂದ ಕಾರ್ಯಾಚರಣೆಗೆ 20 ಗಂಟೆ ಆಯಿತು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

click me!