ಹುಬ್ಬಳ್ಳಿ (ಮಾ.31): ದಿಂಗಾಲೇಶ್ವರ ಸ್ವಾಮೀಜಿ ನಡೆ ವಿಚಾರವಾಗಿ ನಾನು ಮುರುಘಾಮಠವಾಗಲಿ, ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಮಾತ್ರವಲ್ಲ, ಯಾರ ಮೊರೆಯೂ ಹೋಗಿಲ್ಲ, ಮಾತನಾಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ತಮಗೆ ಕ್ಷೇತ್ರ ಬದಲಾವಣೆ ಬಗ್ಗೆ ಕೊಟ್ಟ ಗಡುವು ಭಾನುವಾರಕ್ಕೆ ಮುಗಿಯುತ್ತದೆಯಲ್ಲ? ಎಂಬ ಪ್ರಶ್ನೆಗೆ, ನೋಡೋಣವಂತೆ ಗಡುವು ಮುಗಿದ ಮೇಲೆ ಎಂದಷ್ಟೇ ಪ್ರತಿಕ್ರಿಯಿಸಿದರು. ಧಾರವಾಡ ಮುರುಘಾ ಮಠದ ಶ್ರೀಗಳು ಕೊಟ್ಟ ಎರಡು ದಿನದ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನಷ್ಟೇ. ಆ ಬಗ್ಗೆ ತಮಗೆ ಹೆಚ್ಚಿನದೇನು ಗೊತ್ತಿಲ್ಲ ಎಂದರು.
ಅತೃಪ್ತಿ ಸರಿಪಡಿಸುತ್ತೇವೆ: ಚಿತ್ರದುರ್ಗ ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ ಇರುವ ಎಲ್ಲೆಡೆಯೂ ವಿಶೇಷ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಗೆಲ್ಲುವ ಪಕ್ಷದೊಳಗೆ ಸಣ್ಣ ಪುಟ್ಟ ಗೊಂದಲ ಸಹಜ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲೂ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಸಮಸ್ಯೆ ಇರುವೆಡೆ ವಿಶೇಷ ಗಮನಹರಿಸಿ ಬಗೆಹರಿಸುತ್ತೇವೆ ಎಂದು ಹೇಳಿದರು.
ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಅಲ್ಲಿನ ಎಲ್ಲ ಪ್ರಮುಖರನ್ನು ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸುತ್ತೇವೆ ಎಂದರು.
ಶ್ರೀಗಳ ಹೇಳಿಕೆ ನನಗೆ ಆಶೀರ್ವಾದ: ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ. ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳಲ್ಲ ಎಂದು ಹೇಳಿದರು.