ಗೃಹ ಸಚಿವ ಜಿ. ಪರಮೇಶ್ವರ್ ಮೇಲೆ ಆರೋಪ; FIR ದಾಖಲಿಸಲು ಕೋರ್ಟ್ ಆದೇಶ, ಪೊಲೀಸ್ ಠಾಣೆಯಲ್ಲಿ ಮೀನಾಮೇಷ!

Published : Apr 22, 2026, 06:25 PM IST

ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ಆದರೆ, ಆದೇಶ ಪಾಲಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರುದಾರ ನಾಗಭೂಷಣ್ ಅವರು ತುಮಕೂರಿನ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ.

PREV
16
ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ (FIR)

ತುಮಕೂರು (ಏ.22): ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ 'ಬೆಟ್ಟಿಂಗ್' ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಸ್ವತಃ ಗೃಹ ಸಚಿವ ಜಿ. ಪರಮೇಶ್ವರ್ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ನ್ಯಾಯಾಲಯದ ಆದೇಶವಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ದೂರುದಾರರು ಪೊಲೀಸ್ ಠಾಣೆಯ ಮುಂದೆಯೇ ಧರಣಿ ಕುಳಿತಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.

26
ಘಟನೆಯ ಹಿನ್ನೆಲೆ: ಏನಿದು ಬೆಟ್ಟಿಂಗ್ ಪ್ರಕರಣ?

ಗೃಹ ಸಚಿವ ಜಿ. ಪರಮೇಶ್ವರ್ ಅವರು ಜಿಲ್ಲಾಧಿಕಾರಿಯೊಬ್ಬರ ಜೊತೆಗೆ ಕಬಡ್ಡಿ ಆಟಕ್ಕೆ ಸಂಬಂಧಿಸಿಂತೆ ಬೆಟ್ಟಿಂಗ್ ಕಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಧುಗಿರಿ ತಾಲೂಕಿನ ಹಂದ್ರಾಳು ಗ್ರಾಮದ ನಾಗಭೂಷಣ್ ಎಂಬುವವರು ಈ ಹಿಂದೆ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ರಾಜ್ಯದ ಗೃಹ ಸಚಿವರ ವಿರುದ್ಧ ದೂರು ನೀಡಲು ಹಿಂಜರಿದ್ದ ಪೊಲೀಸರು, ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.

36
ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ:

ಪೊಲೀಸರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ದೂರುದಾರ ಹಂದ್ರಾಳು ನಾಗಭೂಷಣ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೊಡಗೇನಹಳ್ಳಿ ಪೊಲೀಸರಿಗೆ ಖಡಕ್ ಆದೇಶ ನೀಡಿತ್ತು.

46
ಪೊಲೀಸ್ ಠಾಣೆ ಎದುರು ಹೈಡ್ರಾಮಾ:

ನ್ಯಾಯಾಲಯದ ಆದೇಶದ ಪ್ರತಿ ಹಿಡಿದು ಹಂದ್ರಾಳು ನಾಗಭೂಷಣ್ ಅವರು ಇಂದು ತಮ್ಮ ವಕೀಲರ ತಂಡದೊಂದಿಗೆ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದೇಶದ ಪ್ರತಿಯನ್ನು ನೀಡಿ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಆದರೆ, ಈ ವೇಳೆ ಪೊಲೀಸರು ಮತ್ತು ದೂರುದಾರರ ನಡುವೆ ಮಾತಿನ ಚಕಮಕಿ ನಡೆದಿದೆ. ನ್ಯಾಯಾಲಯದ ಆದೇಶವಿದ್ದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡುತ್ತಿರುವುದು ದೂರುದಾರರ ಆಕ್ರೋಶಕ್ಕೆ ಕಾರಣವಾಯಿತು.

56
ಪೊಲೀಸರ ವಾದವೇನು?

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗೇನಹಳ್ಳಿ ಪಿಎಸ್‌ಐ ರಾಜೇಶ್, 'ನಮಗೆ ನ್ಯಾಯಾಲಯದಿಂದ ಅಧಿಕೃತವಾಗಿ ಆದೇಶದ ಪ್ರತಿ ಇನ್ನು ತಲುಪಿಲ್ಲ. ನ್ಯಾಯಾಲಯದ ಸರ್ಟಿಫೈಡ್ ಕಾಪಿ (Certified Copy) ನಮಗೆ ತಲುಪಿದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ದೂರವಾಣಿ ಮೂಲಕ ವಕೀಲರಿಗೆ ತಿಳಿಸಿದ್ದಾರೆ. ಆದರೆ, ದೂರುದಾರರ ಬಳಿ ಈಗಾಗಲೇ ನ್ಯಾಯಾಲಯದ ಆದೇಶದ ಪ್ರತಿಯಿದ್ದು, ಅದನ್ನು ಆಧರಿಸಿ ಇಂದೇ ದೂರು ದಾಖಲಿಸಬೇಕೆಂದು ಅವರು ಪಟ್ಟು ಹಿಡಿದಿದ್ದಾರೆ.

66
ಠಾಣೆ ಮುಂದೆ ಧರಣಿ:

ಪೊಲೀಸರ ಧೋರಣೆಯನ್ನು ಖಂಡಿಸಿ ಹಂದ್ರಾಳು ನಾಗಭೂಷಣ್ ಅವರು ಪೊಲೀಸ್ ಠಾಣೆಯ ಮುಂದೆಯೇ ಕುಳಿತು ಧರಣಿ ಆರಂಭಿಸಿದ್ದಾರೆ. 'ಕೋರ್ಟ್ ಆದೇಶ ನೀಡಿದ್ದರೂ ಗೃಹ ಸಚಿವರನ್ನು ರಕ್ಷಿಸಲು ಪೊಲೀಸರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಎಫ್‌ಐಆರ್ ದಾಖಲಾಗುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ತುಮಕೂರು ಜಿಲ್ಲೆಯಾದ್ಯಂತ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಗೃಹ ಸಚಿವರ ವಿರುದ್ಧದ ಪ್ರಕರಣ ಈಗ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories