ರಾಜ್ಯದ ಧಾರವಾಡ, ಗದಗ, ರಾಯಚೂರು, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಈ ಭಾರಿ ಮಳೆಯಿಂದಾಗಿ ಹಲವೆಡೆ ಬೆಳೆ ನಾಶವಾಗಿದ್ದು, ವಿಶೇಷವಾಗಿ ಬಾಳೆ ಬೆಳೆಗಾರರಿಗೆ ಅಪಾರ ನಷ್ಟವಾಗಿದೆ ಮತ್ತು ಸಿಡಿಲು, ಬಿರುಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಗದಗ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಜೆಯ ವೇಳೆ ಸುಮಾರು ಅರ್ಧ ಗಂಟೆ ಆಲಿಕಲ್ಲು ಮಳೆ ಸುರಿಯಿತು.
ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿಗಳಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ಬಾಳೆ ಬೆಳೆ ನಾಶವಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನಮರವೊಂದು ಸುಟ್ಟು ಭಸ್ಮವಾಗಿದೆ.
25
ಮಳೆಗೆ 13 ಎಕರೆ ಬಾಳೆ ನಾಶ
ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆಗೆ ಬಸವನಗೌಡ ದೇಸಾಯಿ ಎಂಬುವವರ 7 ಎಕರೆ ಹಾಗೂ ನಿರಂಜನಗೌಡ ಕೊಟ್ರುಗೌಡ್ರು ಎಂಬುವವರ 6 ಎಕರೆ ಬಾಳೆ ಹಾಗೂ 4 ಎಕರೆ ಪಪ್ಪಾಯಿ ತೋಟ ಸಂಪೂರ್ಣವಾಗಿ ನೆಲಸಮವಾಗಿದ್ದು, ಬೆಳೆಗಾರರಿಗೆ ಭಾರಿ ನಷ್ಟವಾಗಿದೆ.
ಇನ್ನೇನು ಕಟಾವಿಗೆ ಬಂದಿದ್ದು, ಬಾಳೆ ಫಸಲು ಸಂಪೂರ್ಣ ನೆಲಕಚ್ಚಿದ್ದು, ರೈತರಿಂದ ನೋಡಲು ಸಾಧ್ಯವಾಗದಂತಾಗಿದೆ. ಈಗಾಗಲೇ ತೋಟಗಾರಿಕಾ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೆಳೆಹಾನಿ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
35
ಸಂಡೂರು ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆ
ಸಂಡೂರು ಸೇರಿದಂತೆ ತಾಲೂಕಿನ ಸುಲ್ತಾನಾಪುರ, ಕೃಷ್ಣಾನಗರ, ಚಿಕ್ಕಂತಾಪುರ, ತಾರಾನಗರ ಮುಂತಾದೆಡೆ ಮಂಗಳವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ. ಮಳೆ ಸುರಿದಿದ್ದರಿಂದ ವಾತಾವರಣ ತಂಪಾಯಿತು. ಗಾಳಿ, ಮಳೆಗೆ ಸಂಡೂರು-ಹೊಸಪೇಟೆ ರಸ್ತೆಯಲ್ಲಿ ಹಾಗೂ ಸುಲ್ತಾನಾಪುರದ ಬಳಿಯಲ್ಲಿ ಮರಗಳು ನೆಲಕ್ಕುರಳಿದ್ದು ಕಂಡು ಬಂತು.
ಜಿಲ್ಲೆಯ ಹಲವೆಡೆ ಮಂಗಳವಾರ ಸಾಯಂಕಾಲ ಗುಡುಗು, ಸಿಡಿಲು ಸಹಿತ ರಭಸದ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಮುಂಡರಗಿ ತಾಲೂಕಿನಲ್ಲಿ ಸಂಜೆಯಿಂದಲೇ ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದು, ಬಳಿಕ ಮಳೆ ಪ್ರಾರಂಭವಾಗಿದೆ.
ಇತ್ತ ಡಂಬಳ ಗ್ರಾಮದಲ್ಲಿಯೂ ರಭಸದ ಮಳೆ ಸುರಿದಿದೆ. ರೋಣ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತು ನಿಮಿಷ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಗಜೇಂದ್ರಗಡದಲ್ಲೂ ರಭಸದ ಮಳೆ ಬಿದ್ದಿದೆ.
ಗುಡುಗು- ಸಿಡಿಲಿನ ಅರ್ಭಟದೊಂದಿಗೆ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿಯಿತು. ಈ ಮೂಲಕ ನಗರದಲ್ಲಿ ಕೊಂಚ ತಂಪನ್ನೆರೆಯಿತು. ಆದರೆ, ಹಲವೆಡೆ ಈ ಮಳೆ ಅವಾಂತರ ಸೃಷ್ಟಿಸಿತು. ನಗರದ ಕೋಯಿನ್ ರಸ್ತೆ, ಮಹಾವೀರ ಗಲ್ಲಿ, ದಾಜೀಬಾನಪೇಟೆ, ಕಮರಿಪೇಟೆ, ಗಣೇಶ ನಗರ ಸೇರಿದಂತೆ ನಗರದ ಬಹುತೇಕ ಪ್ರದೇಶದ ಮುಖ್ಯರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿತು. ಶ್ರೀಸಿದ್ಧಾರೂಢ ಸ್ವಾಮಿ ಮಠದ ಹಿಂಭಾಗ ಸೇರಿದಂತೆ ಆನಂದ ನಗರ, ಹಳೇ ಹುಬ್ಬಳ್ಳಿಯ ಹಲವೆಡೆ 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ