Published : Jun 10, 2025, 01:46 PM ISTUpdated : Jun 10, 2025, 01:48 PM IST
ಕರ್ನಾಟಕದಲ್ಲಿ ಸೋಮವಾರದಿಂದ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ 7 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಿರಲಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೆಲ ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಮಳೆ ಸೋಮವಾರದಿಂದ ರಾಜ್ಯಾದ್ಯಂತ ಆರಂಭವಾಗಿದೆ. ಮಂಗಳವಾರದಿಂದ ಮುಂದಿನ 7 ದಿನ ಕಾಲ ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
26
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಜೂ.15ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ.
36
ಅದೇ ರೀತಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ ಸೇರಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಬಳ್ಳಾರಿ, ಚಾಮರಾಜನಗರ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದೆ.
ಬುಧವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಹಾವೇರಿ, ಕೊಪ್ಪಳ, ಗದಗ, ಧಾರವಾಡ, ರಾಯಚೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
56
ಮಳೆಗೆ ಇಬ್ಬರು ಬಲಿ
ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೃಗಶಿರಾ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿವಿಧೆಡೆ ಮಳೆಗೆ ಮನೆಗಳು ಕುಸಿದಿವೆ. ಬಿರುಗಾಳಿಗೆ 30 ಎಕರೆ ದಾಳಿಂಬೆ ತೋಟ ನಾಶವಾಗಿದೆ. ವಿದ್ಯುತ್ ಕಂಬಗಳು ಬಿದ್ದು, ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿಜಯನಗರ, ರಾಯಚೂರು, ವಿಜಯಪುರದಲ್ಲಿ ಹೆಚ್ಚಿನ ಮಳೆ ಸುರಿದಿದೆ.
66
ಧಾರವಾಡ ಜಿಲ್ಲೆ ನವಲಗುಂದದಲ್ಲಿನ ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳು ನೀರಲ್ಲಿ ಮುಳುಗಿ ಜನ ಪರದಾಡುವಂತಾಗಿದೆ. ಪಟ್ಟಣದ ಹೊರವಲಯದಲ್ಲಿರುವ ಅಂಬಲಿ ಹಳ್ಳವು ತುಂಬಿ ಹರಿಯುತ್ತಿದ್ದು, ರೋಣ ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.