ಬೆಂಗಾಳ್ ವಾರಿಯರ್ಸ್ ಕಬ್ಬಡಿ ತಂಡದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯುವಕ!

First Published | Aug 17, 2024, 11:44 PM IST

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗಾಡ್ಗೀರಾ ಎಂಬ ಕುಗ್ರಾಮದ ಈ ಕಟ್ಟುಮಸ್ತಾದ ಯುವಕ ಇದೀಗ ಬೆಂಗಾಳ ವಾರಿಯರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.. 

ಹೌದು, ಪ್ರೋ ಕಬ್ಬಡಿ ಲೀಗ್ ನ ಬೆಂಗಾಳ್ ಟೀಂ ಗೆ ಈ ಯುವಕ ಸೆಲೆಕ್ಟ್ ಆಗಿದ್ದು, ಇನ್ನು ಮುಂದೆ ಈ ತಂಡದ ಪರವಾಗಿ ಎದುರಾಳಿ ತಂಡಗಳ ವಿರುದ್ಧ ತೊಡೆತಟ್ಟಲಿದ್ದಾನೆ. ಅಂದಹಾಗೆ, ಈತನ ಹೆಸರು ಸುಶೀಲ್ ಕುಮಾರ್ ಕಾಂಬ್ರೇಕರ್., ಪ್ರಾಯ 19 ವರ್ಷ. ಈತನಿರುವ ಊರಲ್ಲಿ ಕರೆಂಟ್, ನೆಟ್ವರ್ಕ್, ಬಸ್ ಏನೂ ಇಲ್ಲ‌. ತುರ್ತಾಗಿ ಏನು ಬೇಕೆಂದರೂ 15 ಕಿ.ಮೀ.ದೂರದ ಹಳಿಯಾಳಕ್ಕೆ ಹೋಗಲೇಬೇಕಾದ ಅನಿವಾರ್ಯತೆ. 40 ಮನೆಗಳಿರುವ ಈ ಗಾಡ್ಗೀರಾ ಗ್ರಾಮದ ತುಂಬಾ ಸಿದ್ಧಿಗಳೇ ಇದ್ದು, ಅವರ ಪಾಲಿಗೆ ಇನ್ನೂ ಮೂಲ ಸೌಕರ್ಯಗಳಿಲ್ಲ. ಇಂತಹ ಊರಿನಲ್ಲಿ ಹುಟ್ಟಿ ಕಬ್ಬಡ್ಡಿಯಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಈತ ಇದೀಗ ತನ್ನ ಊರಿನ ಲ್ಯಾಂಡ್ ಮಾರ್ಕ್ ಆಗಿದ್ದಾನೆ. 

ಸುಶೀಲ್ ಕುಮಾರನ ತಂದೆ ಮೋಟೇಶ್ ಕಾಂಬ್ರೇಕರ್ ಒಬ್ಬ ಬಡ ರೈತನಾಗಿದ್ದು, 5 ಎಕರೆ ಹೊಲದಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಬೆಳೆದು ಮಾರಾಟ ಮಾಡುತ್ತಾರೆ. ತಾಯಿ ರೇಷ್ಮಾ ಕಾಂಬ್ರೇಕರ್ ಗೃಹಿಣಿ. ಈತನಿಗೆ ಓರ್ವ ಸಹೋದರಿ ಹಾಗೂ  ಓರ್ವ ಸಹೋದರನಿದ್ದಾನೆ.  ಈ ಸುಶೀಲ್, ಮೊದಲು ಯಲ್ಲಾಪುರದಲ್ಲಿ ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ, ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದ್ವಿತೀಯ‌ ಪಿಯುಸಿ ಮುಗಿಸಿದ್ದಾನೆ. ಈ ವರ್ಷ ಪದವಿ ಕಾಲೇಜಿನ ಮೆಟ್ಟಿಲೇರುವ ಮುನ್ನವೇ ಪ್ರೋ ಕಬ್ಬಡ್ಡಿ ಲೀಗ್‌ನಲ್ಲಿ ತೊಡೆ ತಟ್ಟಲಾರಂಭಿಸಿದ್ದಾನೆ. ಅತ್ಯುತ್ತಮ ರೈಡರ್ ಆಗಿರುವ ಈ ಯುವಕ ಎದುರಾಳಿ ತಂಡದ ಮೇಲೆ‌ ದಾಳಿ ನಡೆಸಿದನಂದ್ರೆ ಪಾಯಿಂಟ್‌ನೊಂದಿಗೇ ತನ್ನ‌ ಕೋರ್ಟ್‌ಗೆ ವಾಪಾಸ್ ಬರೋದು ಪಕ್ಕಾ. ಈಗಾಗಲೇ ಉತ್ತರಕನ್ನಡ, ಧಾರವಾಡ, ಮಂಗಳೂರು, ಉಡುಪಿ ಮುಂತಾದೆಡೆ ತನ್ನ ತಂಡವನ್ನು ಮುನ್ನಡೆಸಿ ನೂರಾರು ಕಪ್‌ಗಳನ್ನು ಈತ ಗೆದ್ದಿದ್ದು, ಈತನ ಮನೆಯ ಟಿವಿ ಶೋಕೇಸ್‌ಗಳಲ್ಲಿ ಕಬ್ಬಡ್ಡಿಯಲ್ಲಿ ಗೆದ್ದ ಕಪ್‌ಗಳು ಬಿಟ್ರೆ ಬೇರೇನಿಲ್ಲ. ಬೆಂಗಾಳ್ ಟೀಂಗೆ ಆಯ್ಕೆಯಾಗಿರುವ ಈತ ಸದ್ಯ ಪುಣೆಯಲ್ಲಿ 2 ತಿಂಗಳ ಕಾಲ ಟ್ರೈನಿಂಗ್ ಪಡೆಯುತ್ತಿದ್ದಾನೆ.‌
 

Latest Videos


ಪ್ರಸ್ತುತ, 10,00,000 ರೂ. ನೀಡಿ ಬೆಂಗಾಳ್ ವಾರಿಯರ್ಸ್ ತಂಡ ಈತನನ್ನು ಖರೀದಿಸಿದ್ದು, ಇನ್ ಸ್ಟಾ ಗ್ರಾಂನಲ್ಲಿ ಈತನ ಪಟ್ಟುಗಳನ್ನು ನೋಡಿ ಬೆಂಗಾಳ್ ವಾರಿಯರ್ಸ್ ತಂಡದ ಮ್ಯಾನೇಜ್ ಮೆಂಟ್ ಈತನ್ನು ಆಯ್ಕೆ ಮಾಡಿದೆ.  ಉತ್ತರಕನ್ನಡದ ಜಿಲ್ಲೆಯ ಬಡ ರೈತನ ಮಗನಾದ ಸುಶೀಲ್ ಕುಮಾರ್, ತನ್ನ ಪ್ರತಿಭೆಯ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಇನ್ನಷ್ಟು ಹಾರೈಸಲಿ ಅನ್ನೋದು ನಮ್ಮ‌ ಹಾರೈಕೆ.

click me!