ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಎನ್ನುವ ಹೆಸರಿನಲ್ಲಿ 1904ರಲ್ಲಿ ಆರಂಭವಾಗಿದ್ದ ಮುಡಾ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕದ ಮೊಟ್ಟಮೊದಲ ನಗರ ಪ್ಲ್ಯಾನಿಂಗ್ ಹಾಗೂ ಅಭಿವೃದ್ದಿ ಸಂಸ್ಥೆ.
ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನ ಕೆಸರೆ ಗ್ರಾಮದಲ್ಲಿ 3.16 ಎಕರೆ ಸೈಟ್‌ಗೆ ಪ್ರತಿಯಾಗಿ 50:50 ಅನುಪಾತದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಪ್ರಖ್ಯಾತ ವಿಜಯನಗರದಲ್ಲಿ 14 ಸೈಟ್ ನೀಡಿರುವುದು ಇದು ಸ್ಕ್ಯಾಮ್ ಎನ್ನಲು ಕಾರಣವಾಗಿದೆ.
ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್‌ನ ನಾಯಕರು ಪಾರ್ವತಿ ಅವರಿಗೆ ನೀಡಿರುವ ಸೈಟ್ ನ್ಯಾಯಸಮ್ಮತವಾಗಿದೆ ಎಂದು ಹೇಳಿರುವುದಲ್ಲದೆ, ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿಯೇ 50:50 ಅನುಪಾತದಲ್ಲಿ ಸೈಟ್ ನೀಡಲಾಗಿದೆ ಎಂದು ಹೇಳಿವೆ.
50:50 ಅನುಪಾತದ ಸೈಟ್ ಹಂಚಿಕೆ ಅನ್ವಯ, ಭೂಮಿಯ ಮಾಲೀಕರು ಸೈಟ್‌ಗಾಗಿ ಒಂದು ಎಕರೆ ಭೂಮಿ ನೀಡಿದ್ದರೆ, ಅಭಿವೃದ್ಧಿ ಅದೇ ಭೂಮಿಯಲ್ಲಿ ನಿರ್ಮಿಸಲಾದ ಸೈಟ್‌ಗಳಲ್ಲಿ ಅರ್ಧದಷ್ಟು ಸೈಟ್ ಪಡಡೆದುಕೊಳ್ಳುತ್ತಾರೆ. ಅದರರ್ಥ ಒಂದು ಎಕರೆಯಲ್ಲಿ 30/40ಯ 9 ಸೈಟ್‌ಗಳು ಸಿಗುತ್ತವೆ. ಇದನ್ನು ಭೂಮಿಯ ಮಾಲೀಕರು ಮಾರುಕಟ್ಟೆ ಬೆಲೆಯಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿರುತ್ತದೆ.
ಈ ಯೋಜನೆಯನ್ನು ಮೊದಲು 2009 ರಲ್ಲಿ ಪರಿಚಯಿಸಲಾಗಿತ್ತು. ಆದರೆ 2020 ರಲ್ಲಿ ಬಿಜೆಪಿ ಸರ್ಕಾರ ಇದನ್ನು ರದ್ದು ಮಾಡಿತ್ತು. ಆದರೆ ಆಗಿನ ಬಿಜೆಪಿ ಸರ್ಕಾರದಿಂದ ಅನುಮತಿ ಪಡೆಯದೆ ಮುಡಾ ಈ ಯೋಜನೆಯನ್ನ ಮುಂದುವರಿಸಿತ್ತು.
ಜಮೀನು ಕಳೆದುಕೊಂಡವರಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಗರಣದಲ್ಲಿ ಮಧ್ಯವರ್ತಿಗಳ ಪಾತ್ರವಲ್ಲದೆ, ಮುಡಾ ಅಧಿಕಾರಿಗಳ ಸಕ್ರಿಯ ಸಹಕಾರದ ಶಂಕೆ ವ್ಯಕ್ತವಾಗಿದೆ.
ಜೂನ್ 15ರ ಆದೇಶದ ಪ್ರಕಾರ, ಇಬ್ಬರು ಭೂಮಿ ಕಳೆದುಕೊಂಡವರಿಗೆ ನಿವೇಶನಗಳನ್ನು ಮಂಜೂರು ಮಾಡಿ, ಆಗಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರು ಮುಡಾ ಸ್ವಾಧೀನಪಡಿಸಿಕೊಂಡ 8.14 ಎಕರೆ ಜಮೀನಿನ ಮೂಲ ಮಾಲೀಕರಿಗೆ 98,206 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಿದರು.
ವರದಿ ಪ್ರಕಾರ ಗೋಕುಲಂ ಲೇಔಟ್‌ನ ಅಭಿವೃದ್ಧಿ. ಮೈಸೂರಿನ ಗೋಕುಲಂ ಲೇಔಟ್‌ಗಾಗಿ ಸ್ವಾಧೀನ ಪ್ರಕ್ರಿಯೆ 1968 ರಲ್ಲಿ ಪ್ರಾರಂಭವಾಯಿತು. ಕೆಲವು ನಿದರ್ಶನಗಳಲ್ಲಿ, ಭೂಮಿ ಕಳೆದುಕೊಳ್ಳುವವರಿಗೆ ಅವರ ಅರ್ಹತೆಗಿಂತ ಹೆಚ್ಚಿನ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಪ್ರಕಾರ, ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಭೂಮಿಯಲ್ಲಿ ಮುಡಾ ದೇವನೂರು ಬಡಾವಣೆಯನ್ನು ಅಭಿವೃದ್ಧಿಪಡಿಸಿದ ನಂತರ, ಅವರು ಭೂಮಿಯ ಬೆಲೆ ಹೆಚ್ಚಿರುವ ನೆರೆಹೊರೆಗಳಲ್ಲಿ ಒಂದಾದ ವಿಜಯನಗರದಲ್ಲಿ ಪರ್ಯಾಯ ಸೈಟ್ ಪಡೆದಿದ್ದಾರೆ. ಮುಡಾ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಪಾರ್ವತಿಗೆ ಮಂಜೂರು ಮಾಡಬಹುದಾದ ನಿವೇಶನಗಳನ್ನು ಹೊಂದಿದ್ದರೂ ಅಕ್ರಮವಾಗಿ ವಿಜಯನಗರದಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ ಎಂದಿದ್ದರು.
ದೇವನೂರು 3ನೇ ಹಂತದ ಬಡಾವಣೆಯಲ್ಲಿ ನಿವೇಶನ ಸಿಗದ ಕಾರಣ ಮುಡಾ ವಿಜಯನಗರದಲ್ಲಿ ನಿವೇಶನ ಮಂಜೂರು ಮಾಡಿದೆ ಎಂದು ಸಿದ್ಧರಾಮಯ್ಯ ಸೈಟ್ ಪಡೆದುಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು.
ಭಾಮೈದ ಮಲ್ಲಿಕಾರ್ಜುನ ಅವರು 1996ರಲ್ಲಿ ಮೂರು ಎಕರೆ 36 ಗುಂಟೆ ಜಮೀನು ಖರೀದಿಸಿ ತಮ್ಮ ಸಹೋದರಿ ಪಾರ್ವತಿಗೆ ಉಡುಗೊರೆ ನೀಡಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಮುಡಾ ಮೂರು ಎಕರೆ 36 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ನಿವೇಶನಗಳನ್ನು ಸೃಷ್ಟಿಸಿ ಮಾರಾಟ ಮಾಡಿದೆ ಎಂದಿದ್ದರು. ಮುಡಾದಿಂದ ಪ್ಲಾಟ್‌ಗಳನ್ನು ಮಾರಾಟ ಮಾಡಿದ ನಂತರ, ಆಕೆ ತನ್ನ ಆಸ್ತಿಯಿಂದ ವಂಚಿತಳಾಗಿದ್ದಾಳೆ ಎಂದು ತಿಳಿಸಿದ್ದರು.
ಇದರಲ್ಲಿ ಬಿಜೆಪಿಯ ಆರೋಪ ಏನೆಂದರೆ, ಕೆಸರೆ ಗ್ರಾಮದಲ್ಲಿ ಚದರ ಅಡಿಗೆ 2 ರಿಂದ 3 ಸಾವಿರ ಬೆಲೆ ಇದೆ. ಅದೇ ವಿಜಯನಗರದಲ್ಲಿ ಪ್ರತಿ ಚದರ ಅಡಿಗೆ 10-12 ಸಾವಿರ ರೂಪಾಯಿ ಬೆಲೆ ಇದೆ. ಯಾವ ಲೆಕ್ಕಾಚಾರದಲ್ಲಿ ಸಿದ್ಧರಾಮಯ್ಯ ಅವರಿಗೆ ವಿಜನಯಗರಲ್ಲಿ ಸೈಟ್ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಅದಲ್ಲದೆ, ಭೂಮಿ ಕಳೆದುಕೊಂಡ ಎಲ್ಲಾ ರೈತರಿಗೂ ಪರಿಹಾರವಾಗಿ ಪ್ರೈಮ್ ಲೇಔಟ್‌ಗಳಲ್ಲಿ ಇಷ್ಟು ಸೈಟ್‌ಗಳನ್ನು ನೀಡಲಾಗುತ್ತದೆಯೇ ಎಂದು ಕೇಳಿತ್ತು.
ಸೈಟ್ ಹಂಚಿಕೆ ಮಾಡಿದ್ದು ಒಂದು ಆರೋಪವಾದರೆ, ಸಿದ್ಧರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ್ ಈ ಸೈಟ್ ಖರೀದಿ ಮಾಡಿದ್ದೇ ಅಕ್ರಮ ಎಂದೂ ಆರೋಪ ಮಾಡಲಾಗುತ್ತದೆ. ಇದನ್ನು ಡಿನೋಟಿಫಿಕೇಶನ್ ಮಾಡಿದ ರೀತಿಯೇ ಅಕ್ರಮ. ಇದು ದಲಿತನೊಬ್ಬನ ಜಮೀನು ಎನ್ನುವ ಆರೋಪಗಳೂ ಇದೆ.