ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಡಿಕೆಶಿ ಸಂಘಟನಾ ಚತುರತೆ ಶ್ಲಾಘಿಸಿ, ರಾಜ್ಯದ ಅಭಿವೃದ್ಧಿ ಜವಾಬ್ದಾರಿ ನೆನಪಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಇಂದು ಅಧಿಕಾರ ಹಸ್ತಾಂತರದ ಮಹತ್ವದ ಘಟ್ಟ ನಡೆದಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಭಾವುಕವಾಗಿ ಮತ್ತು ಸೈದ್ಧಾಂತಿಕ ಬದ್ಧತೆಯಿಂದ ಕೂಡಿದ ಅಭಿನಂದನಾ ಸಂದೇಶವನ್ನು ರವಾನಿಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಚತುರತೆಯನ್ನು ಶ್ಲಾಘಿಸುವುದರ ಜೊತೆಗೆ, ಮುಂಬರುವ ದಿನಗಳಲ್ಲಿ ದೇಶ ಎದುರಿಸುತ್ತಿರುವ ಸವಾಲುಗಳ ಕುರಿತು ಎಚ್ಚರಿಸಿದ್ದಾರೆ.
26
ಶಿವಕುಮಾರ್ ಸಂಘಟನಾ ಚತುರತೆಗೆ ಶ್ಲಾಘನೆ
ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳನ್ನು ಸಲ್ಲಿಸಿರುವ ಸಿದ್ದರಾಮಯ್ಯ, "ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹೋದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ" ಎಂದು ಬೆನ್ನುತಟ್ಟಿದ್ದಾರೆ.
36
ಅಭಿವೃದ್ಧಿಯ ಬಂಡಿ ಎಳೆದೊಯ್ಯುವ ಜವಾಬ್ದಾರಿ
ಕರ್ನಾಟಕದ ಆರ್ಥಿಕ ಪ್ರಗತಿಯ ಬಗ್ಗೆ ಉಲ್ಲೇಖಿಸಿರುವ ಅವರು, 'ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ' ಎಂದಿದ್ದಾರೆ.
ತಮ್ಮ ಎಂಟು ವರ್ಷಗಳ ಆಡಳಿತವನ್ನು ಸ್ಮರಿಸಿದ ಸಿದ್ದರಾಮಯ್ಯ, ‘ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ’ ಎಂದು ಡಿ.ಕೆ. ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ.
56
ಸೈದ್ಧಾಂತಿಕ ಸೋಲಿಗೆ ಎಂದೂ ಒಪ್ಪಬಾರದು:
ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು’ ಎಂದು ಅತ್ಯಂತ ಮಹತ್ವದ ಕಿವಿಮಾತು ಹೇಳಿದ್ದಾರೆ.
66
ಎರಡನೇ ಸ್ವಾತಂತ್ರ್ಯ ಹೋರಾಟದ ಕರೆ:
ಸಂವಿಧಾನದ ರಕ್ಷಣೆಯ ಬಗ್ಗೆ ಮಾತನಾಡುತ್ತಾ, ‘ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಕರೆ ನೀಡಿದ್ದಾರೆ.
ಅಂತಿಮವಾಗಿ, ‘ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ. ನಿಮಗೆ ಸದಾ ಯಶಸ್ಸು ಸಿಗಲಿ’ ಎಂದು ಹಾರೈಸುವ ಮೂಲಕ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ