ಚಿಕ್ಕಮಗಳೂರು (ಏ.02): ಇದು ಪವಿತ್ರವಾದ ರಂಜಾನ್ ಹಬ್ಬ, ದಾನ-ಧರ್ಮ ಹಾಗೂ ಸಹಾಯಕ್ಕೂ ಅವಕಾಶವಿದೆ. ಕಳೆದ ಮೂರು ವರ್ಷದಿಂದ ನೀರಿಲ್ಲದೇ ಪರದಾಡುತ್ತಿರುವ ಮಕ್ಕಳ ಸಹಾಯ ಮಾಡಬೇಕು ಎಂದುಕೊಂಡ ಸರ್ಕಾರಿ ಶಾಲಾ ಶಿಕ್ಷಕಿಯರಾದ ಹೀನಾ ತಬ್ಸುಮ್ ಹಾಗೂ ರಜೀಯಾ ಸುಲ್ತಾನ್ ಇಬ್ಬರೂ 2.5 ಲಕ್ಷ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿ ಕುಡಿಯುವ ನೀರನ್ನು ಒದಗಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯ ಜನರು ಶಿಕ್ಷಕಿಯರ ಸಮಾಜ ಮತ್ತು ಧರ್ಮ ಮೆಚ್ಚುವ ಕಾರ್ಯಕ್ಕೆ ಅಭಿನಂದಿಸಿದ್ದಾರೆ. ಆದರೆ, ಇದಕ್ಕೂ ಶಾಲೆ ಮಕ್ಕಳು ಅನುಭವಿಸಿ ಸಂಕಷ್ಟ ಒಮ್ಮೆ ನೋಡಿ..
ಚಿಕ್ಕಮಗಳೂರು ತಾಲೂಕಿನ ಮಾಚಗೊಂಡನ ಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶಾಲ ಕ್ರೀಡಾಂಗಣವಿದೆ. ಅಗತ್ಯವಿರುವಷ್ಟು ಶಿಕ್ಷಕರು ಇಲ್ಲಿದ್ದಾರೆ. 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಮೃದ್ಧ ವಾತಾವರಣದಲ್ಲಿ ನಿಸರ್ಗದ ಮಡಿನಲ್ಲಿ ಶಾಲೆಯಿದೆ. ಆದರೆ ಕುಡಿಯೋ ನೀರಿನ ಸಮಸ್ಯೆ ಯತೇಚ್ಛವಾಗಿತ್ತು. ಮಕ್ಕಳೇ ಅಕ್ಕಪಕ್ಕದ ನೀರಿನ ಟ್ಯಾಂಕ್, ಮನೆಗಳಿಂದ ನೀರು ಹೊರುವ ಸ್ಥಿತಿ ಇಂದಿಗೂ ಜೀವಂತವಾಗಿತ್ತು. ಬಿಸಿಯೂಟ, ವಾಶ್ ರೂಮ್, ತಟ್ಟೆ-ಲೋಟ ತೊಳೆಯೋದರ ಜೊತೆ ಕುಡಿಯೋಕು ನೀರಿನ ಸಮಸ್ಯೆ ಹೆಚ್ಚಿತ್ತು.
ಇದನ್ನೂ ಓದಿ: ಹಲಸಿನ ಹಣ್ಣು ತಿನ್ನಲು ಬಂದ ಕಾಡಾನೆ ವಿದ್ಯುತ್ ಶಾಕ್ ತಗುಲಿ ಸಾವು
ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳಿಗೆ ಹೇಳಿದರೆ ತಲೆ ಅಲ್ಲಾಡಿಸಿ ಹೋದವರು ಪರಿಹಾರವನ್ನೇನೂ ಮಾಡಲಿಲ್ಲ. ಪಂಚಾಯಿತಿಗೆ ಹೇಳಿದರೆ 3 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಹಾಗಾಗಿ, ಈ ಶಾಲೆಯ ಹೀನಾ ತಬ್ಸುಮ್ ಹಾಗೂ ರಜೀಯಾ ಸುಲ್ತಾನ್ ಎಂಬ ಇಬ್ಬರು ಶಿಕ್ಷಕರು ತಾವೇ 2.5 ಲಕ್ಷ ಖರ್ಚು ಮಾಡಿ ಮಕ್ಕಳಿಗಾಗಿಯೇ ಬೋರ್‌ವೆಲ್ ಕೊರೆಸಿದ್ದಾರೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಪಾಠವನ್ನೇ ಮಾಡದ ಕೆಲ ಶಿಕ್ಷಕರ ಮಧ್ಯೆ ಮಕ್ಕಳ ಕಷ್ಟ ನೋಡಲಾಗದೆ ಶಾಲೆಗೆ ಬೋರ್ ಕೊರೆಸಿರೋ ಪ್ರಾಥಮಿಕ ಶಾಲಾ ಶಿಕ್ಷಕಿಯರ ಈ ಕಾರ್ಯಕ್ಕೆ ಇಡೀ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಎರಡು ಬೋರ್ ಫೇಲ್ 3ನೇ ಪಾಯಿಂಟ್ ನಲ್ಲಿ ನೀರು : ಶಾಲೆಯ ಆವರಣ್ಲ್ಲಿ 150 ಅಡಿ ಹಾಗೂ 80 ಅಡಿ ಕೊರೆದರೂ ಬೃಹತ್ ಬಂಡೆ ಸಿಕ್ದ್ದರಿಮದಕಿ ಎರಡು ಬೋರ್‌ಗಳು ಫೇಲ್ ಆದವು. ಆದರೂ ಸುಮ್ಮನಾಗದ ಇಬ್ಬರು ಶಿಕ್ಷಕಿಯರು ಮತ್ತೆ 3ನೇ ಪಾಯಿಂಟ್ ಮಾಡಿ ಮತ್ತೊಂದು ಬೋರ್ ಕೊರೆಸಿದ್ದಾರೆ. ಅದರಲ್ಲಿ ಒಂದೂಕಾಲು ಇಂಚು ನೀರು ಸಿಕ್ಕಿದೆ. ಕಳೆದ 25 ವರ್ಷಗಳಿಂದ ಇದೇ ಶಾಲೆಯಲ್ಲಿರೋ ಶಿಕ್ಷಕಿ ತಬ್ಸುಮ್ ಸಾವಿರಾರು ಮಕ್ಕಳಿಗೆ ಓದಿನ ಜೊತೆ ಇನ್ನಿತರೇ ವಿಷಯಗಳಲ್ಲೂ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಮುಸಲ್ಮಾನರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವೆ: ಶಾಸಕ ಪ್ರದೀಪ್ ಈಶ್ವರ್
ಈ ಇಬ್ಬರು ಶಿಕ್ಷಕಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ರಂಜಾನ್ ಹಬ್ಬದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದು ಈ ರಂಜಾನ್ ವೇಳೆ ಕಷ್ಟದಲ್ಲಿದ್ದ ಮಕ್ಕಳಿಗೆ 2.5 ಲಕ್ಷ ಖರ್ಚು ಮಾಡಿ ಬೋರ್ ಕೊರಿಸಿ ಮಕ್ಕಳು ನೀರು ಹೊರದಂತೆ ಮಾಡಿದ್ದಾರೆ. ಈ ಶಿಕ್ಷಕಿಯರ ಈ ಕೆಲಸಕ್ಕೆ ಕುಟುಂಬಸ್ಥರು ಕೈಜೋಡಿಸಿದ್ದಾರೆ. ಮೂರು ವರ್ಷಗಳಿಂದ ನಿತ್ಯ ನೀರು ಹೊರುತ್ತಿದ್ದ ಮಕ್ಕಳ ಸ್ಥಿತಿ ನೋಡಿ ಬೋರ್ ಕೊರೆಸಿರೋ ಇಬ್ಬರು ಶಿಕ್ಷಕಿಯರಿಗೆ ಉಳಿದ ಶಿಕ್ಷಕ ವರ್ಗ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಮಕ್ಕಳಿಗಗಾಗಿ ಬೋರ್‌ವೆಲ್ ಕೊರೆಸಲು ಇತರ ಶಿಕ್ಷಕರು ಸಹಾಯ ಮಾಡಲು ಮುಂದಾದರೂ, ಇದು ರಂಜಾನ್ ಮಾಸವಾಗಿದ್ದರಿಂದ ಇದನ್ನು ನಮ್ಮ ಧರ್ಮದ ಪ್ರಕಾರ ಸಹಾಯ ಮಾಡುವುದಕ್ಕೆ ಬಿಡಿ ಎಂದು ಮನವಿ ಮಾಡಿಕೊಂಡಿದ್ದು, ಯಾರ ಸಹಾಯವನ್ನೂ ಪಡೆಯದೇ ಇಬ್ಬರೇ ಹಣ ಖರ್ಚು ಮಾಡಿದ್ದಾರೆ.
ಒಟ್ಟಾರೆ, ಸರ್ಕಾರ ಹಾಗೂ ಅಧಿಕಾರಿಗಳು ನೋಡ್ತೀವಿ...ಮಾಡ್ತೀವಿ... ಅಂತಾನೇ ದಿನ ಮುಂದೂಡುತ್ತಿದ್ದರು. ಗ್ರಾಮ ಪಂಚಾಯಿತಿ 3 ದಿನಕ್ಕೊಮ್ಮೆ ನೀರು ಬಿಟ್ಟು ಕೈ ತೊಳೆದುಕೊಳ್ತಿತ್ತು. ಮಕ್ಕಳು ಓದಬೇಕು ಅಂದರೆ ನೀರು ಹೊರೋದಕ್ಕೆ ಸಿದ್ಧವಿರಬೇಕಿತ್ತು. ಆದರೆ, ಮೂರು ವರ್ಷಗಳಿಂದ ನೀರು ಹೊರುತ್ತಿದ್ದ ಮಕ್ಕಳನ್ನ ನೋಡಿ ನೊಂದಿದ್ದ ಶಿಕ್ಷಕಿಯರೇ ಮಕ್ಕಳ 3 ವರ್ಷದ ಮಕ್ಕಳ ವನವಾಸಕ್ಕೆ ಮುಕ್ತಿ ಹಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್