ಚಿಕ್ಕಮಗಳೂರು (ಏ.01): ಕಾಫಿನಾಡಿನಲ್ಲಿ ಮಾನವ , ವನ್ಯಜೀವಿಗಳ ಸಂಘರ್ಷ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.ಕಾಫಿನಾಡಲ್ಲಿ ಒಂದೆಡೆ ನಾನಾ ಕಾರಣಗಳಿಂದ ಆನೆಗಳು ಸಾವನ್ನಪ್ಪುತ್ತಿದ್ರೆ ಮತ್ತೊಂದೆಡೆ ಆನೆಗಳಿಂದ ಜನರೂ ಸಾವನ್ನಪ್ಪುತ್ತಿದ್ದಾರೆ. ಇಂದು ಕೂಡ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೇಬೈಲು ಅರಣ್ಯ ವ್ಯಾಪ್ತಿಯ ದೂಪದಖಾನ್ ಸಮೀಪದ ಲಾಲ್ಬಾಗ್ ರಸ್ತೆಯಲ್ಲಿ ಹಲಸಿನ ಹಣ್ಣೊಂದು ತಿನ್ನಲು ಹೋದ 35 ವರ್ಷದ ದೈತ್ಯ ಗಂಡು ಕಾಡಾನೆ ಸಾವನ್ನಪ್ಪಿದೆ.ಮೊನ್ನೆ ಕಾಡಾನೆ ದಾಳಿಗೆ ರೈತ ಬಲಿಯಾದ್ರೆ ಇಂದು ವಿದ್ಯುತ್ ಶಾಕ್ ಗೆ ಕಾಡಾನೆ ಮೃತಪಟ್ಟಿದೆ.
ಸರ್ಕಾರದ ವಿರುದ್ದ ಆಕ್ರೋಶ: ತರೀಕೆರೆ ತಾಲೂಕಿನ ಲಾಲ್ಬಾಗ್ ರಸ್ತೆ ಬದಿ ಇದ್ದ ಹಲಸಿನ ಮರದಲ್ಲಿ ಹಲಸಿನ ಹಣ್ಣನ್ನ ಕೀಳಲು ಹೋದಾಗ ಕಾಡಾನೆ ವಿದ್ಯುತ್ ಶಾಕ್ನಿಂದ ಸ್ಥಳದಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆನೆಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಒಂದೆಡೆ ಆಗಾಗ್ಗೆ ಆನೆಗಳು ಸಾವನ್ನಪ್ಪುತ್ತಿವೆ. ಮತ್ತೊದೆಡೆ ಕಾಡಾನೆಗಳ ದಾಳಿಯಿಂದ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದು ಸಾರ್ವಜನಿಕರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನಾನಾ ಕಾರಣಗಳಿಂದ ಕಾಡಾನೆಗಳು ಸಾವನ್ನಪ್ಪುತ್ತಿವೆ.
ಈಗಾಗಲೇ ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಕಾಡು-ನಾಡು ಸೇರಿ ಸುಮಾರು 5 ಕಾಡಾನೆಗಳು ಸಾವನ್ನಪ್ಪಿವೆ. ಭದ್ರಾ ಅರಣ್ಯದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಆನೆ ಕರಗಿಯೇ ಹೋಗಿತ್ತು. ಇತ್ತೀಚೆಗಷ್ಟೆ ಭದ್ರಾ ಅರಣ್ಯ ವ್ಯಾಪ್ತಿಯಲ್ಲೇ ಕುಂಟು ಕಾಡಾನೆಯೊಂದು ಸಮರ್ಪಕವಾಗಿ ಆಹಾರ ಸಿಗದೇ ಸಾವನ್ನಪ್ಪಿತ್ತು. ಮೃತ ಆನೆಯ ಮರಣೋತ್ತರ ಪರೀಕ್ಷೆ ವೇಳೆ ಆನೆ ಹೊಟ್ಟೆಯಲ್ಲಿ ಆಹಾರವೇ ಇಲ್ಲದ್ದ ಕಂಡುಬಂದಿತ್ತು. ಕಳೆದ ಎರಡ್ಮೂರು ತಿಂಗಳ ಹಿಂದೆ ಬಂಡೆಗಳ ಮಧ್ಯೆ ಸಿಲುಕಿಯೂ ಕಾಡಾನೆಯೊಂದು ಸಾವನ್ನಪ್ಪಿತ್ತು. ಇನ್ನೂ ಆಲ್ದೂರು ಸಮೀಪ ಕಾಡಾನೆಯೊಂದು ವಿದ್ಯುತ್ ಶಾಕ್‌ಗೆ ಬಲಿಯಾಗಿತ್ತು. ಇಂದು ತಣಿಗೇಬೈಲು ಅರಣ್ಯ ವ್ಯಾಪ್ತಿಯಲ್ಲೂ ಕಾಡಾನೆಯೊಂದು ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದೆ.
ಮೊನ್ನೆ ರೈತ ಬಲಿ, ಇಂದು ಕಾಡಾನೆ ಸಾವು: ಕಾಡಾನೆಗಳ ದಾಳಿಯಿಂದ ಕಾಫಿನಾಡ ಮಲೆನಾಡು ಭಾಗದಲ್ಲೂ ಜನಸಾಮಾನ್ಯರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಯುಗಾದಿ ಹಬ್ಬದಂದೇ ಮನೆ ಪಕ್ಕ ಹಸು ಕಟ್ಟುವಾಗ ಆನೆ ದಾಳಿಯಿಂದ ರೈತ ಸಾವನ್ನಪ್ಪಿದ್ದನು. ತೋಟದಲ್ಲೇ ನಿಂತಿದ್ದ ಆನೆ ರೈತ ಆನೆ ಉಸಿರಾಟದ ಶಬ್ಧ ಕೇಳಿ ಬ್ಯಾಟರಿ ಬಿಡುತ್ತಿದ್ದಂತೆ ಸೊಂಡಿಲಿನಿಂದ ಸುತ್ತಿ ಮರಕ್ಕೆ ಹೊಡೆದು ಸಾಯಿಸಿತ್ತು. ಇತ್ತೀಚೆಗೆ ಎನ್.ಆರ್.ಪುರ ತಾಲೂಕಿನಲ್ಲೂ ತಿಂಗಳಿಗೆ ಒಂದರಂತೆ ಎರಡು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ಸಾವನ್ನಪ್ಪಿದ್ದರು. ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲೂ ಇಬ್ಬರು ಸಾವನ್ನಪ್ಪಿದ್ದರು.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್