ಇಂದು ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ ಮಳೆಯ ಸೂಚನೆಯನ್ನು ನೀಡಲಾಗಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ 20 ಮತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಶುಕ್ರವಾರವೂ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಇಂದು ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮಳೆ ಜೊತೆಯಲ್ಲಿ 40-50 kmph ವೇಗದೊಂದಿಗೆ ಗಾಳಿ ಬೀಸಲಿದೆ. ಕರ್ನಾಟಕದ ಉತ್ತರ ಒಳನಾಡಿನ ಭಾಗದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದ ರೀತಿ ಮಳೆಯಾಗುವ ಸಾಧ್ಯತೆಗಳಿವೆ.ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆ ಕಾಲ ಮಳೆ ಸುರಿದಿದೆ. ಬೆಳಗಿನಿಂದಲೇ ಮೋಡಕವಿದ ವಾತಾವರಣ ಕಂಡುಬಂದು ಮಧ್ಯಾಹ್ನ ಮೇಲೆ ಮಳೆಯಾಗಿದೆ. ಕುಶಾಲನಗರ ಪಟ್ಟಣದಲ್ಲಿ ದಿಡೀರ್ ಮಳೆ ಕಾರಣದಿಂದ ಜನಜೀವನ ಬಹುತೇಕ ಅಸ್ತವ್ಯಸ್ತ ಗೊಂಡ ದೃಶ್ಯ ಕಂಡುಬಂತು. ಗುಡ್ಡೆ ಹೊಸೂರು, ಕೂಡಿಗೆ, ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಕೂಡ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಶೃಂಗೇರಿ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ ಸುರಿಯಿತು. ಮಧ್ಯಾಹ್ನದಿಂದ ದಟ್ಟ ಮೋಡ ಕವಿದ ವಾತಾವರಣ ಉಂಟಾಗಿತ್ತು. ಸಂಜೆ ವೇಳೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು.
ಕೆರೆಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಸುರಿಯಿತು.ಕೆಲ ದಿನಗಳಹಿಂದೆ ಸತತ ಎರಡು ದಿನಗಳ ಕಾಲ ಉತ್ತಮ ಮಳೆ ಸುರಿದಿತ್ತು.ಮಂಗಳವಾರ ಬಿಸಿಲ ವಾತಾವರಣವಿತ್ತು.ಬುಧವಾರ ಮತ್ತೆ ಮಳೆ ಬಂದು ತಂಪೆರೆದು ಹೋಯಿತು.