ಉಡುಪಿ ಶ್ರೀಕೃಷ್ಣನ ನೈವೇದ್ಯಕ್ಕೆ ಶುದ್ಧ ಸಾವಯವ ಭತ್ತ ಅಭಿಯಾನ!

First Published | Dec 11, 2023, 8:14 PM IST

ಅನ್ನಬ್ರಹ್ಮನೆಂದೇ ಕರೆಯಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಸೋದೆ ಮಠದ ಮುಂದಿನ ಪರ್ಯಾಯೋತ್ಸವ ಸಂದರ್ಭದಲ್ಲಿ ಪ್ರತಿನಿತ್ಯ ವರ್ಷದ 365 ದಿನವೂ ಸಾವಯವ ರೀತಿಯಲ್ಲಿ ಬೆಳೆದ ಬೇರೆ ಬೇರೆ ತಳಿಯ ಅನ್ನ ನೈವೇದ್ಯ ಮಾಡುವ ಉದ್ದೇಶದಿಂದ ಈ ‘ಶುದ್ಧ ನೈವೇದ್ಯ ಸಮರ್ಪಣಂ ಅಭಿಯಾನ’ ಯೋಜನೆ ರೂಪಿಸಲಾಗಿದೆ. 

ರಾಘವೇಂದ್ರ ಅಗ್ನಿಹೋತ್ರಿ

ಮಂಗಳೂರು (ಡಿ.11): ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ರಾಸಾಯನಿಕ ಬಳಕೆಯಿಲ್ಲದ ಶುದ್ಧ ಸಾವಯವ ಹಸಿರು ಕ್ರಾಂತಿಯಿದು. ಕಣ್ಮರೆಯಾಗಿರುವ ನಾಡಿನ ವೈವಿಧ್ಯಮಯ ಭತ್ತದ ತಳಿಗಳನ್ನು ಉಳಿಸುವುದರೊಂದಿಗೆ ಸಮಾಜಕ್ಕೆ ಅನ್ನ ಕೊಡಬೇಕೆಂಬ ಉದ್ದೇಶದೊಂದಿಗೆ ಸರ್ಕಾರದ ನೆರವಿನ ಹಂಗಿಲ್ಲದೇ ಭತ್ತ ಉಳಿಸಿ, ಬೆಳೆಸುವ ಈ ಮಹಾಯಜ್ಞಕ್ಕೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಈಗಾಗಲೇ ಚಾಲನೆ ದೊರೆತಿದೆ.

ಅನ್ನಬ್ರಹ್ಮನೆಂದೇ ಕರೆಯಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಸೋದೆ ಮಠದ ಮುಂದಿನ ಪರ್ಯಾಯೋತ್ಸವ ಸಂದರ್ಭದಲ್ಲಿ ಪ್ರತಿನಿತ್ಯ ವರ್ಷದ 365 ದಿನವೂ ಸಾವಯವ ರೀತಿಯಲ್ಲಿ ಬೆಳೆದ ಬೇರೆ ಬೇರೆ ತಳಿಯ ಅನ್ನ ನೈವೇದ್ಯ ಮಾಡುವ ಉದ್ದೇಶದಿಂದ ಈ ‘ಶುದ್ಧ ನೈವೇದ್ಯ ಸಮರ್ಪಣಂ ಅಭಿಯಾನ’ ಯೋಜನೆ ರೂಪಿಸಲಾಗಿದೆ. 

Tap to resize

ಜೊತೆಯಲ್ಲಿ ಕಾರಣಾಂತರಗಳಿಂದ ನಮ್ಮ ನೆಲದಿಂದಲೆ ಕಾಣೆಯಾಗಿರುವ ಭತ್ತದ ತಳಿ ವೈವಿಧ್ಯತೆ ಕಾಪಿಟ್ಟುಕೊಳ್ಳುವದು ಯೋಜನೆಯ ಇನ್ನೊಂದು ಉದ್ದೇಶ. ಕಾರ್ಮಿಕರ ಅಭಾವ, ಹಕ್ಕಿ, ಕಾಡು ಪ್ರಾಣಿಗಳ ಕಾಟದ ನಡುವೆಯೂ ಭತ್ತ ಬೆಳೆದರೆ ಆದಾಯವಿಲ್ಲವೆಂದು ಕೃಷಿಯಿಂದಲೇ ರೈತರು ಹಿಮ್ಮುಖವಾಗುತ್ತಿರುವಾಗ ಈ ಅಭಿಯಾನದ ಮೂಲಕ ಭತ್ತವನ್ನು ಬೆಳೆಯಲು ಸಾಕಷ್ಟು ರೈತರು ಮುಂದೆ ಬಂದಿದ್ದಾರೆ. 

ಈ ಅಭಿಯಾನದಲ್ಲಿ ಬೆಳೆಗೆ ಹಾನಿಯಾದರೆ ರೈತರಿಗೆ ಯಾವ ಪರಿಹಾರವನ್ನೂ ನೀಡಲಾಗುವುದಿಲ್ಲ, ಆಸಕ್ತಿಯೇ ಇಲ್ಲಿ ಮುಖ್ಯ, ಭತ್ತ ಬೆಳೆಯುವುದು ತಮ್ಮ ಕರ್ತವ್ಯವೆಂದೆ ತಿಳಿದು ರಾಜ್ಯದ 6 ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ.

ಏನಿದು ಯೋಜನೆ?: ಉಡುಪಿ ಶ್ರೀಕೃಷ್ಣನಿಗೆ ಅನುದಿನವೂ ಬೇರೆಬೇರೆ ತಳಿಯ ಅನ್ನ ನೈವೇಧ್ಯ ಮಾಡುವ ಉದ್ದೇಶದಿಂದ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಹಾಗೂ ಪುರುಷೋತ್ತಮ ರಾವ್‌ ಕೃಷಿ ಸಂಶೋಧನಾ ಪ್ರತಿಷ್ಠಾನ ಶುದ್ಧ ನೈವೇದ್ಯ ಸಮರ್ಪಣಾ ಅಭಿಯಾನ ಯೋಜನೆ ಕೈಗೆತ್ತಿಕೊಂಡಿದೆ. 

ಶುದ್ಧ ಸಾವಯವ ರೀತಿಯಲ್ಲೇ ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ನಶಿಸುತ್ತಿರುವ ಹಾಗೂ ಅಪರೂಪದ ಭತ್ತದ ತಳಿಗಳನ್ನು ನೀಡಿ ಅವರ ಗದ್ದೆಗಳಲ್ಲಿ ಬೆಳೆಸಲಾಗುತ್ತಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಯ 226 ರೈತರು ಈ ಯೋಜನೆಯಲ್ಲಿ ಕೈಜೋಡಿಸಿದ್ದು, 206 ತಳಿಗಳ ಭತ್ತ ಬೆಳೆದಿದ್ದಾರೆ. 2025 ರ ವೇಳೆಗೆ 400 ತಳಿಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ.

ರಾಜ್ಯದ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ರೈತರು ಈ ಅಭಿಯಾನದಡಿ ಈಗಾಗಲೇ ಭತ್ತ ಬೆಳೆದಿದ್ದಾರೆ. ಇನ್ನೂ ಬೇರೆ ಜಿಲ್ಲೆಗಳಿಗೂ ವಿಸ್ತರಿಸುವ ಉದ್ದೇಶವಿದೆ ಎನ್ನುತ್ತಾರೆ ಈ ಯೋಜನೆಯ ನಿರ್ದೇಶಕ ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರದ ವಿ.ಕೆ. ಅರುಣಕುಮಾರ್‌.

ಯಾವುದೆಲ್ಲ ಭತ್ತ?: ತಳಿ ವೈವಿಧ್ಯ ಉಳಿಯಬೇಕು, ವೈವಿಧ್ಯತೆ ಉಳಿದರೆ ಮನಕುಲದ ಉಳಿವು ಸಾಧ್ಯ ಎಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದ್ದು, ಆಸಕ್ತ ರೈತರನ್ನು ಗುರುತಿಸಿ ಅವರಿಗೆ ಭತ್ತ ನೀಡಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.

ಕಾಯಮೆ, ಕುಟ್ಟಿಕಾಯಮೆ, ರಾಜಕಾಯಮೆ, ರಾಜಮುಡಿ, ರತ್ನಚೂಡಿ, ಜೋಳಗ, ಹೊನಸು, ಹೆಗ್ಗೆ, ಪುಟ್ನಹೆಗ್ಗೆ, ಮಂಜುಗುಣಿ ಸಣ್ಣ, ನಜರಾಬಾದ್‌. ಪುಟ್ಟಭತ್ತ, ಪರ್ಲಾನ್‌, ಜೋಣ್ಯ, ಮುತ್ತು, ಏಡಿಕುಣಿ, ಗಮನಾದ, ಕರಿಗಜೀವಿಲ, ಗುಜಗುಂಡ, ಬೆಟ್ಸಣ್ಣ, ಕೋದಂಡನ್‌, ಮೇಘಾಲಯ, ಹಳಗ, ಕಜೆ ಹೀಗೇ 205 ಬಗೆಯ ಭತ್ತದ ತಳಿಗಳನ್ನು ಸಂಗ್ರಹಿಸಿ ರೈತರಿಗೆ ನೀಡಲಾಗಿದೆ. 

ರೈತರು ಉತ್ಸಾಹದಿಂದ ಭತ್ತ ಬೆಳೆದಿದ್ದು, ಈ ಸಲದ ಬೆಳೆ ಕಟಾವು ಮಾಡಲಾಗಿದೆ. ಇದರಲ್ಲಿ 30ಕ್ಕೂ ಹೆಚ್ಚು ಕೆಂಪಕ್ಕಿ ತಳಿಗಳು, ಆರಕ್ಕೂ ಹೆಚ್ಚು ಕಪ್ಪಕ್ಕಿ ತಳಿಗಳೂ ಇವೆ. ಈ ಅಭಿಯಾನದಡಿ ಅನ್ನದ ಭತ್ತವಷ್ಟೇ ಅಲ್ಲ, ಇಡ್ಲಿ, ದೋಸೆ, ಮಂಡಕ್ಕಿ ಮಾಡಲು ಬಳಸಬಹುದಾದ ತಳಿಯ ಭತ್ತಗ‍ಳನ್ನೂ ಬೆಳೆಯಲಾಗುತ್ತಿದೆ.

ಸೋದೆಶ್ರೀಗಳ ಮುಂದಿನ ಪರ್ಯಾಯಕ್ಕಾಗಿ ಹೊಸದೇನಾದರೂ ಯೋಜನೆ ಮಾಡಲು ಉದ್ದೇಶಿಸಲಾಗಿತ್ತು. ಪ್ರಥಮ ಹಂತದಲ್ಲಿ 87 ಜನ ರೈತರಿಗೆ ಮಠದ ವತಿಯಿಂದ ಬೋಗಸೆ ಬೀಜ ಪ್ರದಾನ ಮಾಡಿ ಯೋಜನೆಗೆ ಚಾಲನೆ ನೀಡಲಾಯಿತು. ಸೋದೆ ಶ್ರೀಗಳು ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ನೀವು ಬೆಳೆಯಿರಿ ನಾವು ಕೊಳ್ಳುತ್ತೇವೆ ಎಂದು ರೈತರಿಗೆ ಮಠದಿಂದ ತಿಳಿಸಿದ್ದೆವು, ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದವರು ಈಗ ಭತ್ತ ಬೆಳೆಯುತ್ತಿದ್ದಾರೆ.  -ಹಾದಿಗಲ್ಲು ಲಕ್ಷ್ಮೀನಾರಾಯಣ, ಸೋದೆ ಮಠದ ಆಪ್ತ ಶಿಷ್ಯರು

ಭತ್ತ ಬೆಳೆಯುವುದರಿಂದ ಲಾಭವಿಲ್ಲವೆಂಬ ಪ್ರಶ್ನೆಯೇ ಇಲ್ಲ. ಆದಾಯದ ಯಾವ ನೀರೀಕ್ಷೆಯನ್ನೂ ನಾವು ಇಟ್ಟುಕೊಂಡಿಲ್ಲ. ಆಹಾರ ಬೆಳೆಯಾದ್ದರಿಂದ ಆದಾಯ ಮುಖ್ಯವಲ್ಲ, ಸಮಾಜಕ್ಕೆ ಅನ್ನ ನೀಡುವ ಉದ್ದೇಶವಿದ್ದು, ಕರ್ತವ್ಯವೆಂಬ ಶ್ರದ್ಧೆಯಿಂದ ಈ ಅಭಿಯಾನ ನಡೆಸುತ್ತಿದ್ದೇವೆ. ಈಗ ರಾಜ್ಯದ ಐದು ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಮುಂದೆ ಇನ್ನೂ ಹೆಚ್ಚಿನ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು  -ವಿ.ಕೆ. ಅರುಣಕುಮಾರ್‌, ನಿರ್ದೇಶಕರು ಕೃಷಿ ಪ್ರಯೋಗ ಪರಿವಾರ, ತೀರ್ಥಹಳ್ಳಿ

Latest Videos

click me!