ಇದಕ್ಕೆ ಉತ್ತಮ ನಿದರ್ಶನ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ರೈತ ಅಮೈ ಬಿ.ಕೆ. ದೇವ ರಾವ್. ಭತ್ತ ಹಾಗೂ ಇತರ ಹಲವಾರು ಕೃಷಿ ಸಂಬಂಧಿ ಸಸ್ಯಗಳ ನೂರಾರು ತಳಿಗಳನ್ನು ಸಂಗ್ರಹಿಸಿ, ಬೆಳೆಸಿರುವ ಇವರಿಗೆ ‘ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ 2020- 21’ ಒಲಿದು ಬಂದಿದೆ.
ಮಂಗಳವಾರ, ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರೈತ ಅಮೈ ಬಿ.ಕೆ. ದೇವ ರಾವ್ ಅವರಿಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ 2020- 21’ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕ ಧೋತಿ, ಮುಠಾಳೆ ಹಾಗು ಹಸಿರು ಶಾಲು ಧರಿಸಿ ಪ್ರಶಸ್ತಿ ಸ್ವೀಕರಿಸಿದ ದೇವ ರಾವ್ ಅವರು ಗಮನ ಸೆಳೆದಿದ್ದಾರೆ. ದೇಶದ 10 ಮಂದಿ, ರಾಜ್ಯದ ಇಬ್ಬರಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಪ್ರಶಸ್ತಿಯು ಒಂದೂವರೆ ಲಕ್ಷ ರು. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕ ಹೊಂದಿದೆ.
ನೂರಾರು ತಳಿಗಳ ನಂಟು:
ದೇಶದ ಹಲವಾರು ಜಾತಿಯ ಭತ್ತದ ತಳಿಗಳು ಇವರಲ್ಲಿದ್ದು ಕರ್ನಾಟಕದ 117, ಕೇರಳದ 25, ತಮಿಳುನಾಡಿನ 10, ಪಶ್ಚಿಮ ಬಂಗಾಳದ 5 ಮಹಾರಾಷ್ಟ್ರದ 2, ಆಂಧ್ರ, ಉತ್ತರ ಪ್ರದೇಶ, ಗುಜರಾತ್, ಛತ್ತಿಸ್ ಗಡ, ಮಣಿಪುರ, ದೆಹಲಿ,ಜಾರ್ಖಂಡ್, ಅಸ್ಸಾಂ,ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಹಲವಾರು ಭತ್ತದ ತಳಿಗಳು ಇವರ ಸಂಗ್ರಹದಲ್ಲಿವೆ.
ಇವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ತಂದೆಯ ಸಾಧನೆಗೆ ಬೆನ್ನೆಲುಬಾಗಿದ್ದು ಬೀಜ ಬ್ಯಾಂಕ್ ಸ್ಥಾಪಿಸಿ, ಬೇಡಿಕೆ ಇಡುವ ರೈತರಿಗೆ ತಮ್ಮ ತಂದೆಯ ಸಂಗ್ರಹದಲ್ಲಿರುವ ಭತ್ತದ ತಳಿಯ ಒಂದು ಮುಷ್ಟಿ ಭತ್ತ ನೀಡುವ ಯೋಜನೆ ಕೈಗೊಂಡಿದ್ದಾರೆ. ಒಂದು ಮುಷ್ಟಿ ಭತ್ತ ಒಯ್ಯುವ ರೈತ ಇದರ ಬೆಳೆ ಬೆಳೆದ ಬಳಿಕ ಎರಡು ಮುಷ್ಟಿ ಭತ್ತವನ್ನು ಇವರಿಗೆ ನೀಡಬೇಕು. ಇದರಿಂದ ಭತ್ತದ ತಳಿಗಳು ಹೆಚ್ಚು ಕಡೆ ಬೆಳೆಯಲು ಹಾಗೂ ಬೇಡಿಕೆ ಸಲ್ಲಿಸುವವರಿಗೆಲ್ಲ ನೀಡಲು ಸಹಕಾರಿಯಾಗುತ್ತದೆ.
ಬಿ.ಕೆ.ದೇವರಾವ್ ಪರಿಚಯ:
79ರ ಹರೆಯದ ಬಿ.ಕೆ. ದೇವರಾಯ ಉತ್ಸಾಹದ ಚಿಲುಮೆ. 1967 ರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ಇವರು ಅಂದಿನಿಂದಲೂ ತಮ್ಮ 5 ಎಕರೆ ಜಾಗವನ್ನು ಗದ್ದೆ ಬೇಸಾಯಕ್ಕೆ ಮೀಸಲಿಟ್ಟು 170ಕ್ಕೂ ಅಧಿಕ ತಳಿಯ ಭತ್ತದ ಎರಡು ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಆರಂಭದ ಕೆಲವು ವರ್ಷಗಳಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡಿದರು. ಬಳಿಕ ರಾಸಾಯನಿಕ, ಕೀಟನಾಶಕಗಳನ್ನು ಬಳಸದೆ ಬೇಸಾಯ ಮಾಡುತ್ತಾ ಬಂದಿದ್ದಾರೆ.
ಪಶು ಸಾಕಣೆಯನ್ನು ಮಾಡುವ ಇವರು ಹಟ್ಟಿಗೊಬ್ಬರ ಹಾಗೂ ತರಗೆಲೆಗಳನ್ನು ಸಂಗ್ರಹಿಸಿ ಗದ್ದೆಗಳಿಗೆ ನೀಡುತ್ತಾರೆ. ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಇವರು ಸ್ವತಃ ಉಳುಮೆಯನ್ನು ಮಾಡಿಕೊಂಡು ಬಂದವರು. ಭತ್ತದ ತಳಿಗಳ ಸಂಗ್ರಹದ ಜತೆ 80ಕ್ಕೂ ಮಿಕ್ಕಿದ ಕಾಡುಮಾವು, ಐದರಿಂದ ಆರು ತಳಿಯ ಅಡಕೆ ಗಿಡ, 50 ತಳಿಯ ಹಲಸು, 5 ಬಗೆಯ ಜಾಯಿಕಾಯಿ, 4 ವಿಧದ ಕಾಳುಮೆಣಸು, 25 ಜಾತಿಯ ಭಾರತೀಯ ಗೆಣಸು, 6 ಬಗೆಯ ಮರಗೆಣಸು ಹಾಗೂ 100ಕ್ಕೂ ಮಿಕ್ಕಿದ ಔಷಧೀಯ ಸಸ್ಯಗಳ ತಳಿಗಳನ್ನು ಸಂಗ್ರಹಿಸಿದ್ದಾರೆ.
ಇವರ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ 2017ರಲ್ಲಿ ರಾಷ್ಟ್ರ ಪತಿ ಭವನದಲ್ಲಿ ಸೃಷ್ಟಿ ಸಮ್ಮಾನ್, 2018ರಲ್ಲಿ ಸೂಪರ್ ಸ್ಟಾರ್ ರೈತ, 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇರಳದಲ್ಲಿ ವೀಕ್ ಆಫ್ ದಿ ರೈಸ್ ಆಕ್ಷನ್ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ. 50ಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳು ಇವರ ವಿಶಿಷ್ಟ ಸಾಧನೆಯನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.
ರಾಷ್ಟ್ರಪತಿಗಳಿಂದ 150ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸುವುದು ಸಂತಸ ತಂದಿದೆ .ಈ ಪ್ರಶಸ್ತಿ ಕುರಿತು ಅಗತ್ಯ ಮಾಹಿತಿ ನೀಡಿದ ಮಂಗಳೂರು ಕೆವಿಕೆಯ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿ.ವಿ.ಯ ಅಧಿಕಾರಿ ವರ್ಗ,ಕುಂದಾಪುರ ಮೂಲದ ಬಿಹಾರದ ರಾಜ್ಯಸಭಾ ಸದಸ್ಯ ಅನಿಲ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೃಷಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬನು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಳಿಗಳ ಸಂಗ್ರಹ ಹಾಗೂ ಅವುಗಳನ್ನು ಬೆಳೆಸುವ ಕೆಲಸ ಮಾಡುವ ಉತ್ಸಾಹ ಹೊಂದಿದ್ದೇನೆ"
-ಬಿ.ಕೆ.ದೇವರಾವ್, ಸಾಧಕ ಕೃಷಿಕ.