ಗದಗ: ಜೋಳಿಗೆಯೊಡ್ಡಿ ಗುಟ್ಕಾ, ತಂಬಾಕು ಬೇಡಿದ ಸ್ವಾಮಿಗಳು!

First Published | Sep 24, 2024, 9:15 PM IST

ಸದ್ಗುಣಗಳ ದೀಕ್ಷೆ.. ದುಶ್ಚಟಗಳ ಭಿಕ್ಷೆ ಹೆಸರಿನಲ್ಲಿ ವ್ಯಸನಮುಕ್ತ ಸಮಾಜಕ್ಕಾಗಿ ಮುಂಡರಗಿ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗಳು ಜೋಳಿಗೆ ಅಭಿಯಾನ ನಡೆಸಿದ್ರು.. ಜೋಳಿಗೆಯಲ್ಲಿ ತಂಬಾಕು, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳನ್ನ ಹಾಕಿ ವ್ಯಸನ ಮುಕ್ತ ಜೀವನ ನಡೆಸಿ ಅಂತಾ ಭಕ್ತರಿಗೆ ಪ್ರೇರಣೆ ನೀಡಲಾಯ್ತು.

ಗಿರೀಶ್ ಕಮ್ಮಾರ, ಸುವರ್ಣ ನ್ಯೂಸ್ ಗದಗ

ಕಾರಣಿಕ ಯುಗಪುರುಷ ಹಾನಗಲ್ಲ ಗುರು ಕುಮಾರ ಮಹಾಸ್ವಾಮಿಗಳ 157 ನೇ ಜಯಂತ್ಯೋತ್ಸವ ಅಂಗವಾಡಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದ ಜೋಳಿಗೆ ಅಭಿಮಾನ ಗಮನ ಸೆಳೆಯಿತು. ಹಾನಗಲ್ಲ ಕುಮಾರಸ್ವಾಮಿಗಳ ಜಯಂತಿ ಅಂಗವಾಗಿ ಕಳೆದ 10 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅದ್ರಲ್ಲಿ ವ್ಯಸನಮುಕ್ತ ಸಮಾಜಕ್ಕಾಗಿ ಸ್ವಾಮಿಗಳಿಂದ ಜೋಳಿಗೆ ಅಭಿಯಾನ ಕೈಗೊಂಡಿದ್ದು ಗಮನ ಸೆಳೆಯಿತು. 'ಸದ್ಗುಣಗಳ ದೀಕ್ಷೆ. ದುಶ್ಚಟಗಳ ಭಿಕ್ಷೆ' ಹೆಸರಲ್ಲಿ  ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಯಾತ್ರೆ‌‌ ನಡೆಸಲಾಯ್ತು. ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿ ಸ್ವಾಮಿಗಳು ಜೋಳಿಗೆ ಒಡ್ಡಿ ದುಶ್ಚಟಗಳನ್ನ ತೆಜಿಸುವಂತೆ ಕೇಳಿಕೊಂಡ್ರು.. ಸ್ವಾಮಿಗಳ ಅಭಿಯಾನಕ್ಕೆ ಸ್ಪಂದಿಸಿದ ಕೆಲವರು ಗುಟ್ಕಾ, ತಂಬಾಕು ಚೀಟಿಗಳನ್ನ ಜೋಳಿಗೆಗೆ ಹಾಕಿ ದುಶ್ಚಟ ಬಿಡುವ ಸಂಕಲ್ಪ ಮಾಡಿದ್ರು. ಭಕ್ತರಿಗೆ ರುದ್ರಾಕ್ಷಿ ನೀಡುವ ಮೂಲಕ ಸ್ವಾಮಿಗಳು ವ್ಯಸನ ಮುಕ್ತ ಜೀವನಕ್ಕೆ ಶುಭಕೋರಿದ್ರು..

ಕಳೆದ ಹತ್ತು ದಿನಗಳಿಂದ ನಾಡಿನ ನೂರಾರು‌ ಮಠಾಧೀಶರು ಪ್ರತಿದಿನ ಮುಂಡರಗಿಯ ವಿವಿಧ ವಾರ್ಡ್ ಗಳಲ್ಲಿ ಮತ್ತು ತಾಲೂಕಿನ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಕೈಗೊಂಡರು. ಅಲ್ಲಿಯೂ ದುಶ್ಚಟಗಳಿಗೆ‌ ದಾಸರಾದವರಿಗೆ, ಸದ್ಗುಣಗಳ ದೀಕ್ಷೆ, ದುಷ್ಚಟಗಳ ಭಿಕ್ಷೆ ಅನ್ನೋ ಜೋಳಿಗೆ ಹಿಡಿದು ವ್ಯಸನಮುಕ್ತ ಸಮಾಜದ ಜಾಗೃತಿ ಮೂಡಿಸಲಾಗ್ತಿತ್ತು.. ಜೊತೆಗೆ ಶ್ರೀಮಠದಲ್ಲಿ ಪ್ರತಿದಿನ‌ ರಾತ್ರಿ ವೇಳೆ ಕುಮಾರೇಶ್ವರರ ಜೀವನ ದರ್ಶನ ಪ್ರವಚನದ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶಿವಯೋಗಮಂದಿರ ಸಂಸ್ಥೆ ಬೆಳೆದು‌ ಬಂದ ಹಾದಿಯನ್ನ,‌ ಪ್ರವಚನದ‌ ಮೂಲಕ ಜನರಲ್ಲಿ ತಿಳಿಸಲಾಯ್ತು.

Tap to resize

ಕೊನೆಯ ದಿನ ಅಂದ್ರೆ 24 ನೇ ತಾರೀಕು ಮಂಗಳವಾರ ಅದ್ಧೂರಿ‌ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕುಮಾರೇಶ್ವರರ ಜ್ಯೋತಿರಥಯಾತ್ರೆ ಹಾಗೂ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಗೆ ಶ್ರೀ ಜಗದ್ಗುರು ನಾಡೋಜ‌ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಚಾಲನೆ ನೀಡಿದರು.‌ ಸುಮಂಗಲೆಯರ ಪೂರ್ಣಕುಂಭ, ಶರಣರ ವಚನ ಕಟ್ಟುಗಳ ಮೆರವಣಿಗೆ, ಕರಡಿ ಮಜಲು, ಚಂಡಿ ವಾದ್ಯ, ಸಮ್ಮೇಳ, ವೀರಗಾಸೆ, ಜಾಂಜ್ ಮೇಳ, ಭಜನಾ ಸಂಘಗಳು, ಗೊಂಬೆ ಕುಣಿತ ಮೆರವಣಿಗೆಗೆ ಸಾಕಷ್ಟು ಮೆರಗು ನೀಡಿದವು.‌ 

ಮೆರವಣಿಗೆಯಲ್ಲಿ ನಾಡಿನ ನೂರಾರು‌ ಮಠಾಧೀಶರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.‌ ಮುಸ್ಲೀಂ ಸಮುದಾಯ ಸೇರಿದಂತೆ ಸರ್ವ ಧರ್ಮದವರೂ ಮೆರವಣಿಗೆಯಲ್ಲಿ‌ ಪಾಲ್ಗೊಂಡು ಭಾವೈಕ್ಯತೆಯ ಸಂದೇಶ‌ ಸಾರಿದರು.‌ ನಂತರ ನಡೆದ ವೇದಿಕೆ ಸಮಾರಂಭದಲ್ಲಿ, ಮುಂಡರಗಿ ಅನ್ನದಾನ ಶ್ರೀಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗಳು, ಗದಗನ ತೋಂಟದಾರ್ಯ ಮಠದ ಶ್ರೀ ಗಳು ಸೇರಿದಂತೆ ಅನೇಕ‌ ಪೂಜ್ಯರು ಮತ್ತು ಗಣ್ಯರು‌ ಭಾಗವಹಿಸಿದ್ದರು. ಇನ್ನು ಮುಂಡರಗಿ ತಾಲೂಕಿನ ಜನತೆಗೆ ಕುಮಾರೇಶ್ವರರ ಜಯಂತ್ಯೋತ್ಸವವು ನಾಡಹಬ್ಬವಾಗಿ, ಧಾರ್ಮಿಕ‌,‌ಸಾಂಸ್ಕೃತಿಕ ನೆಲೆಗಟ್ಟನ್ನ ಹೆಚ್ಚಿಸಿತು. 

ನಾಡಿನ ಮಠಗಳಿಗೆ ಸ್ವಾಮಿಜಿಗಳನ್ನ ನೀಡಿದ ಕೀರ್ತಿ ಹಾನಗಲ್ಲ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ.‌ ಅಂಥಹ ಯೋಗಿಯ ನೆನಪಿನಲ್ಲಿ, ಯುವ ಮಠಾಧೀಶರನ್ನೊಳಗೊಂಡ ಕುಮಾರೇಶ್ವರ ಜಯಂತಿ‌ ಸಮಿತಿ, ಪ್ರತಿವರುಷ ಒಂದೊಂದು ಜಿಲ್ಲೆಯಲ್ಲಿ ಜನರಲ್ಲಿ ಧಾರ್ಮಿಕತೆ, ಹಾಗೂ ನಾಡಿನ ಸಂಸ್ಕೃತಿ ಅರಿವನ್ನ ಮೂಡಿಸುತ್ತಿದೆ. ವಿಶೇಷವಾಗಿ ಇಂದಿನ ಯುವಕರಲ್ಲಿ ವ್ಯಸನಮುಕ್ತ‌ ಸಮಾಜ‌ ಕಟ್ಟುವ ಸಂಕಲ್ಪದೊಂದಿಗೆ ಸಧೃಡ ಸಮಾಜ ನಿರ್ಮಿಸಲು ಹೊರಟಿದ್ದು, ನಿಜಕ್ಕೂ   ಶ್ಲಾಘನೀಯ.

Latest Videos

click me!