ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, 'ಎಲ್ ನೀನೋ' ಪರಿಣಾಮದಿಂದಾಗಿ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಇದು ಕೃಷಿ ಚಟುವಟಿಕೆಗಳ ಮೇಲೆ ಅಲ್ಪ ಪರಿಣಾಮ ಬೀರಬಹುದು.
ರಾಜ್ಯಕ್ಕೆ ಮುಂಗಾರು ಮಳೆಯ ಪ್ರವೇಶವಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಂಗಾರು ಮಳೆಯಾಗುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಮುಂಗಾರು ಪ್ರವೇಶಿಸಿದ್ದು, ಉತ್ತಮ ಮಳೆಯಾಗುತ್ತಿದೆ. ಇಡೀ ರಾಜ್ಯಕ್ಕೆ ಜೂ.10ರ ವೇಳೆಗೆ ಮುಂಗಾರು ವ್ಯಾಪಿಸುವ ಸಾಧ್ಯತೆ ಇದೆ. ಗಾಳಿಯ ವೇಗ ಮತ್ತು ದಿಕ್ಕು ಆಧಾರದ ಮೇಲೆ ಒಂದೆರೆಡು ದಿನ ಹೆಚ್ಚು ಕಡಿಮೆಯಾಗಬಹುದು ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿದರು.
26
ಕಾಸರಗೋಡು ವ್ಯಾಪ್ತಿಯಲ್ಲಿ ರೆಡ್ ಅಲರ್ಟ್
ಇನ್ನು ಕೇರಳದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕರ್ನಾಟಕದ ಗಡಿ ಕಾಸರಗೋಡು ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅನಾವಶ್ಯಕವಾಗಿ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಇಲ್ಲಿವರೆಗೆ ಯಾವ ಜಿಲ್ಲೆಯಲ್ಲಿಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ.
36
ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆ
ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಶೇ.10ರಿಂದ 15ರಷ್ಟು ಕಡಿಮೆ ಮಳೆಯಾಗುತ್ತದೆ. ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ. ಮುಂದಿನ ತಿಂಗಳು ‘ಎಲ್ ನೀನೋ’ ಪರಿಣಾಮ ತೀವ್ರವಾಗಿರುತ್ತದೆ. ಆದರೆ, ಅದರ ಪರಿಣಾಮ ಜೂನ್ ತಿಂಗಳಿನಲ್ಲಿಯೇ ಆರಂಭವಾಗಿದೆ. ಹೀಗಾಗಿ, ಮಳೆ ಕಡಿಮೆಯಾಗುತ್ತದೆ ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.
ಮುಂಗಾರು ಮಳೆ ಪ್ರವೇಶವಾಗುವ ಹೊತ್ತಿಗೆ ರಾಜ್ಯದ ಹಲವೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪೂರ್ವ ಮುಂಗಾರು ಮಳೆ ನೋಡಿಕೊಂಡು ಕೃಷಿಕರು ಬಿತ್ತನೆ ಕೆಲಸ ಆರಂಭಿಸಿದ್ದಾರೆ. ಮುಂಗಾರು ಮಳೆ ವಾಡಿಕೆಗಿಂತ ಶೇ.10ರಷ್ಟು ಕಡಿಮೆಯಾದರೂ ಕೃಷಿ ಚಟುವಟಿಕೆಗಳ ಮೇಲೆ ಅಂತಹ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇಲ್ಲ. ಆದರೂ, ಕೆಲವೆಡೆ ಕೃಷಿ ಚಟುವಟಿಕೆಗೆ ಅಗತ್ಯವಿರುವಷ್ಟು ಮಳೆ ನೀರು ಲಭ್ಯವಾಗದೇ ಇರಬಹುದು ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು.
56
ರಾಜ್ಯದ ವಿವಿಧೆಡೆ ಮಳೆ
ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಶುಕ್ರವಾರ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರಿಷ್ಠ 9 ಸೆಂ.ಮೀ. ಮಳೆಯಾಗಿದೆ. ಕಾರವಾರ ಮತ್ತು ಮಂಕಿಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ತಲಾ 5 ಸೆಂ.ಮೀ., ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಲಾ 4 ಸೆಂ.ಮೀ. ಮಳೆ ದಾಖಲಾಗಿದೆ.
ಕೊಡಗು ಜಿಲ್ಲೆಯ ಭಾಗಮಂಡಲ, ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ಉಡುಪಿ ಜಿಲ್ಲೆಯ ಕೋಟಾ, ಕುಂದಾಪುರ, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿನಗರ, ಸುಳ್ಯ ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ