ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ವೇಗದ ಗಾಳಿಯೊಂದಿಗೆ ಮಳೆಯಾಗುತ್ತಿದೆ.
ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯನ್ನು ನಿರೀಕ್ಷಿಸಲಾಗಿದೆ. ಕರಾವಳಿ, ದಕ್ಷಿಣಕನ್ನಡ ಹಾಗೂ ಕರಾವಳಿ ಕರ್ನಾಟಕ ಭಾಗದಲ್ಲಿ ಮಳೆ ಸಾಧ್ಯತೆಗಳಿವೆ. ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡು ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು, ನಾಳೆ ಮಳೆ ಹಗುರದಿಂದ ಸಾಧರಣ ಮಳೆ ಸಾಧ್ಯತೆಗಳಿವೆ. ಗುರುವಾರ ಬೆಳಗ್ಗೆಯಿಂದಲೇ ರಾಜಧಾನಿಯಲ್ಲಿ ಮಳೆ ಶುರುವಾಗಿತ್ತು. ಗುರುವಾರದ ಮಳೆಯಿಂದಾಗಿ ರಾಜಧಾನಿಯಲ್ಲಿ ಬಿಸಿಲಿನ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ.
ನೆಲಕಚ್ಚಿದ ಬಾಳೆ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಾಗಾಣಿ ಗ್ರಾಮದ ವ್ಯಾಪ್ತಿಯಲ್ಲಿ ತಡರಾತ್ರಿ ಸುರಿದ ಮಳೆಗೆ ಬಾಳೆ ಬೆಳೆ ನಾಶವಾಗಿದೆ. ಹೊಸೂರು ಮಗಾಣಿಯ ರಾಂಪುರ ಮಾರುತಿ ಎಂಬವರಿಗೆ ಸೇರಿದ ಸರಿ ಸುಮಾರು 3-4 ಲಕ್ಷಕ್ಕೂ ಮೌಲ್ಯದ ಬಾಳೆ ನಾಶವಾಗಿದೆ. ಕಳೆದ ಬಾರಿ ಬೆಳೆ ಹಾನಿಯಾದಾಗ ಅಧಿಕಾರಿಗಳು ಶಾಸಕರು ಬಂದ್ರು, ಆದ್ರೆ ನಮಗೆ ಒಂದು ರೂಪಾಯಿ ಪರಿಹಾರ ನೀಡಲಿಲ್ಲ. ಈ ಬಾರಿಯೂ ಪರಿಹಾರ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದು ರೈತರು ಹೇಳಿದ್ದಾರೆ.