Koh-i-Noor: ಕೋಹಿನೂರ್ ವಾಪಸ್‌ ಕೊಡಿ: ಬ್ರಿಟನ್‌ ರಾಜನಿಗೆ ನ್ಯೂಯಾರ್ಕ್‌ ಮೇಯರ್‌ ಕೋರಿಕೆ

Kannadaprabha News   | Kannada Prabha
Published : May 08, 2026, 11:59 AM IST

ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್‌ ಕುರಿತು, ಅಮೆರಿಕದ ನ್ಯೂಯಾರ್ಕ್‌ನ ಮೇಯರ್‌, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್‌ ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ

PREV
110
ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ

ಯಾದಗಿರಿ : ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಬೇಕೆಂಬ ಒತ್ತಾಸೆಯ ದನಿ ಇದೀಗ ವಿಶ್ವದೆಲ್ಲೆಡೆ ಪ್ರತಿಧ್ವನಿಸುತ್ತಿದೆ. ಕೋಹಿನೂರ್‌ ಕುರಿತು, ಅಮೆರಿಕದ ನ್ಯೂಯಾರ್ಕ್‌ನ ಮೇಯರ್‌, ಪ್ರಭಾವಿ ಯುವ ರಾಜಕಾರಣಿ ಜೋಹ್ರನ್‌ ಮಮ್ದಾನಿಯ ಇತ್ತೀಚಿನ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂಬೈ ಮೂಲದ ಮೊಹ್ಮದ್‌ ಮಮ್ದಾನಿ ಹಾಗೂ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಮೀರಾ ನಾಯರ್‌ ಪುತ್ರ ಜೋಹ್ರನ್‌ ಮಮ್ದಾನಿ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

210
ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ ಬ್ರಿಟನ್‌ ರಾಜ ಚಾರ್ಲ್ಸ್ ಮನವಿ

9/11 ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲು ನ್ಯೂಯಾರ್ಕ್‌ಗೆ ಬುಧವಾರ ಬ್ರಿಟನ್‌ ರಾಜ ಚಾರ್ಲ್ಸ್ ಆಗಮಿಸಿದ್ದರು. ಈ ವೇಳೆ, ಅಲ್ಲಿನ ಮೇಯರ್‌ ಜೋಹ್ರನ್‌ ಮಮ್ದಾನಿ ಭೇಟಿ ನಿಗದಿಯಾಗಿತ್ತು. ಭೇಟಿಗೂ ಮುನ್ನ, ಮಾಧ್ಯಗಳೊಂದಿಗೆ ಮಾತನಾಡಿದ ಮಮ್ದಾನಿ, "ನಾನು ರಾಜನೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಸಿಕ್ಕರೆ, ಕೋಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ." ಎಂದು ಹೇಳಿದ್ದರು

310
ಕೋಹಿನೂರ್ ವಜ್ರ ಜಾಗತಿಕ ಮಟ್ಟದಲ್ಲಿ ಚರ್ಚೆ

ನಂತರದಲ್ಲಿ ಅವರಿಬ್ಬರು ಈ ವಿಷಯದ ಬಗ್ಗೆ ಚರ್ಚೆ ನಡೆಸಿದರೋ ಅಥವಾ ಇಲ್ಲವೋ ಸ್ಪಷ್ಟವಾಗಿಲ್ಲವಾದರೂ, ಆದರೆ, ವಜ್ರ ಹಿಂತಿರುಗಿಸುವ ಕುರಿತು ಮಮ್ದಾನಿ ಹೇಳಿಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

410
ಯಾದಗಿರಿಯ ಕೊಳ್ಳೂರಿನಲ್ಲಿ ಕೋಹಿನೂರ್‌ ಉಗಮ !

ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿಯಲ್ಲಿ ಕೋಹಿನೂರ್‌ ವಜ್ರ ಸಿಕ್ಕ ಐತಿಹ್ಯದ ದಾಖಲೆಗಳಿವೆ. ಬ್ರಿಟಿಷ್‌ ಪ್ರವಾಸಿಗ, ಲೇಖಕ ರಾಬರ್ಟ್‌ ಸೀವೆಲ್‌ ಬರೆದ "ಎ ಫಾರಗಟನ್‌ ಎಂಪಾಯರ್‌- ವಿಜಯನಗರ" ಹಾಗೂ ವಿಲಿಯಂ ಡೇಲಿಂಪ್ಲ್‌ ಮತ್ತು ಅನಿತಾ ಆನಂದ್‌ ಅವರ 2017ರಲ್ಲಿ ಪ್ರಕಟವಾದ " ಕೋಹಿನೂರ್‌ : ದ ಹಿಸ್ಟರಿ ಆಫ್‌ ವರ್ಲ್ಡ್‌ ಮೋಸ್ಟ್‌ ಇನ್‌ಫೇಮಸ್ ಡೈಮಂಡ್‌" ಪುಸ್ತಕದಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

510
ಯಾದಗಿರಿಯ ಕೊಳ್ಳೂರಿನಲ್ಲಿ ಕೋಹಿನೂರ್‌ ಉಗಮ !

ಇತಿಹಾಸ ಸಂಶೋಧಕರಾಗಿದ್ದ ಶಹಾಪುರದ ದಿ. ಭಾಸ್ಕರರಾವ್‌ ಮುಡಬೂಳ್‌ ಅವರು ಈ ಬಗ್ಗೆ ದಾಖಲೆಗಳ ಸಂಗ್ರಹಕ್ಕೆ ಪ್ರಯತ್ನಿಸಿದ್ದರು. ರಾಜ್ಯ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಗೋಯಲ್‌ ಅವರು, ಅಂದಿನ ಎಚ್ಕೆಡಿಬಿ ಕಾರ್ಯದರ್ಶಿಯಾಗಿದ್ದ ವೇಳೆ ಇಲ್ಲಿನ ಸರ್ವೆ ನಂ.337 ಹಾಗೂ 342ರಲ್ಲಿನ ಒಟ್ಟು 8 ಎಕರೆ 19 ಗುಂಟೆ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಗುರುತಿಸಿದ್ದರಲ್ಲದೆ, ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿದ್ದರು. ಇಲ್ಲಿನ ಉತ್ಕೃಷ್ಟ ಮರಳಿಗೆ ಕನ್ನ ಹಾಕುತ್ತಿದ್ದವರ ತಡೆದು, ಇಲ್ಲಿ ಮರಳು ಗಣಿಗಾರಿಕೆ ನಿಷೇಧ ಹೇರಿ ಆದೇಶಿಸಲಾಗಿದೆ

610
ಏನಿದು ಕೋಹಿನೂರ್‌ ವಜ್ರ !

ಕೋಹ್‌-ಎ-ನೂರ್‌", ಪರ್ಷಿಯನ್‌ ಭಾಷೆಯಲ್ಲಿನ ಈ ಪದದ ಅರ್ಥ ಬೆಳಕಿನ ಪರ್ವತ (ಕೋಹ್‌ ಅಂದರೆ ಪರ್ವತ, ನೂರ್‌ ಅಂದರೆ ಬೆಳಕು). ವಿಶ್ವದಲ್ಲಿನ ಅತಿ ದೊಡ್ಡ ಕತ್ತರಿಸಿದ ವಜ್ರಗಳಲ್ಲೊಂದು.

710
ಕೋಹಿನೂರ್ ವಜ್ರದ ಇತಿಹಾಸ

105.6 ಕ್ಯಾರೆಟ್ ತೂಕದ, ಒಂದು ಕೋಳಿ ಮೊಟ್ಟೆಯಷ್ಟು ಗಾತ್ರದ ಕೋಹಿನೂರ್‌ ವಜ್ರವನ್ನು 1849ರಲ್ಲಿ ಬ್ರಿಟಿಷರು ಸಿಖ್ ಸಾಮ್ರಾಜ್ಯದ 10 ವರ್ಷದ ಮಹಾರಾಜ ದುಲೀಪ್‌ ಸಿಂಗ್‌ ಅವರಿಂದ ಪಡೆಯಲಾಗಿತ್ತು. ಕಾಕತೀಯರು ಹಾಗೂ ಮೊಗಲರ ನಂತರ ಸಿಖ್‌ ದೊರೆಗಳ ವಶದಲ್ಲಿತ್ತು. ಒಪ್ಪಂದವೊಂದಕ್ಕೆ ಸಹಿ ಹಾಕುವ ವೇಳೆ ದುಲೀಪ್‌ ಸಿಂಗ್‌ರಿಂದ ಪಡೆದು, ವಿಕ್ಟೋರಿಯಾ ರಾಣಿಗೆ ಒಪ್ಪಿಸಲಾಗಿತ್ತು.

810
ರಾಜಮನೆತನದ ಎಲಿಜೆಬೆತ್‌ ರಾಣಿ ಕಿರೀಟದಲ್ಲಿದೆ ಕೋಹಿನೂರ್

ಸದ್ಯ, ಕೋಹಿನೂರ್‌ ವಜ್ರ ಬ್ರಿಟನ್‌ ರಾಜಮನೆತನದ ಎಲಿಜೆಬೆತ್‌ ರಾಣಿ ಕಿರೀಟದಲ್ಲಿ ಅಳವಡಿಸಲಾಗಿದ್ದು, ಲಂಡನ್ ಟವರ್‌ನಲ್ಲಿರುವ ಕ್ರೌನ್ ಜುವೆಲ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನದಲ್ಲಿದೆ. 2002ರಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ವಜ್ರ ಕೊನೆಯ ಬಾರಿ ಕಂಡುಬಂದಿತ್ತು.

910
ಮಮ್ದಾನಿ ಹೇಳಿಕೆ : ಗರಿಗೆದರಿದ ಚರ್ಚೆ

ಬ್ರಿಟನ್ ಪ್ರಧಾನಿಯಾಗಿದ್ದ ಡೇವಿಡ್‌ ಕೆಮರೂನ್‌ 2010ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ, ಇದಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದ ಡೇವಿಡ್‌, ಬ್ರಿಟನ್‌ನಲ್ಲಿ ಗ್ರೀಸ್, ಈಜಿಪ್ಟ್ ಮುಂತಾದವು ಸೇರಿದಂತೆ ವಿವಿಧ ರಾಷ್ಟ್ರಗಳ ಅನೇಕ ವಸ್ತುಗಳನ್ನು ಸಂಗ್ರಹಿಸಲ್ಪಟ್ಟಿವೆ. ಒಂದು ವಸ್ತುವನ್ನು ಹಿಂದಿರುಗಿಸಿದರೆ, ಭಾರತ ಮಾತ್ರವಲ್ಲ ಇತರ ದೇಶಗಳೂ ಅದೇ ಬೇಡಿಕೆಯನ್ನು ಮುಂದಿಡುತ್ತವೆ ಎಂದಿದ್ದರು.

1010
ವಿಶ್ವಪ್ರಸಿದ್ಧ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ

ಇನ್ನು, 2016ರಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಸ್ನೇಹಪೂರ್ವಕವಾಗಿ ಕೋಹಿನೂರ್‌ ವಜ್ರ ವಾಪಸ್‌ ಪಡೆಯಲಾಗುವುದು ಎಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟಿಗೆ ತಿಳಿಸಿದ್ದರು. ಆದರೆ, ಮ್ಯೂಸಿಯಂ ಕಾಯ್ದೆ ಪ್ರಕಾರ ವಸ್ತುಗಳನ್ನು ಹಿಂತಿರುಗಿಸುವುದು ಕಷ್ಟಕರ ಎಂದು ಬ್ರಿಟನ್‌ ಸ್ಪಷ್ಟಪಡಿಸಿತ್ತು. ಸದ್ಯ, ಮಮ್ದಾನಿ ಅವರ ಹೇಳಿಕೆ ಮತ್ತೇ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಮುಂದಿಟ್ಟಂತಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories