ನಗರದ ಬೇಲೂರು–ಹಿರೇಮಗಳೂರು ರಸ್ತೆ, ಕೆ.ಎಂ. ರಸ್ತೆ, ಎಂ.ಜಿ ರಸ್ತೆ ಒಳಗೊಂಡಂತೆ ನಗರ ವ್ಯಾಪ್ತಿಯಲ್ಲಿ ವರ್ಷದ ಈವರೆಗೂ ಒಟ್ಟು 200ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿವೆ. ಈ ಪೈಕಿ ಕೆ.ಎಂ. ರಸ್ತೆಯಲ್ಲಿಯೇ (ದಂಟರಮಕ್ಕಿ) 25ಪ್ರಕರಣಗಳು ದಾಖಲಾಗಿದ್ದು ಬಹುತೇಕ ಮೋಟಾರ್ ಬೈಕ್ ಪಾದಾಚಾರಿಗೆ ಡಿಕ್ಕಿ ಹಾಗೂ ಕಾರು ಅಪಘಾತಗಳೇ ಹೆಚ್ಚಾಗಿದೆ. ಸುಮಾರು ಎರಡುವರೆ ವರ್ಷದ ಹಿಂದೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಚಿಕ್ಕಮಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಅಂದು ರಸ್ತೆ ವಿಸ್ತರಣೆ ನೆಪದಲ್ಲಿ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿತ್ತು. ಈಗ ಹೊಸದಾಗಿ ಕಂಬಗಳನ್ನು ಅಳವಡಿಸಿದ್ದರೂ ನಗರವ್ಯಾಪ್ತಿಯ ಕತ್ರಿಮಾರಮ್ಮ ದೇವಾಲಯದ ಮಾರ್ಗದಿಂದ ಎಪಿಎಂಸಿ, ಹೌಸಿಂಗ್ ಬೋರ್ಡ್, ಕಣಿವೆ ರುದ್ರೇಶ್ವರ ದೇವಾಲಯದವರೆಗೂ ರಸ್ತೆಬದಿಯಲ್ಲಿ ದೀಪಗಳಿಲ್ಲದೇ ನಗರವನ್ನು ಕತ್ತಲೆಯಲ್ಲಿಡಲಾಗಿದೆ.