ಕೇವಲ ಒಂದು ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯ ಸುತ್ತಮುತ್ತಲೂ ಹಸಿರ ಕಾನನದ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಪರಿಸರದ ನಡುವೆ ಇರುವ ಜಲಾಶಯವನ್ನು ನೋಡುವುದಕ್ಕೆ ಈಗ ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಜಲಾಶಯದ ಸುತ್ತಲೂ ಇರುವ ಹಸಿರ ಕಾನನದ ಬಣ್ಣ ಜಲಾಶಯದಲ್ಲಿ ಬೆರೆತು ಇಡೀ ನೀರೇ ಹಚ್ಚ ಹಸಿರಿನಂತೆ ಭಾಸವಾಗುತ್ತಿದೆ. ಒಂದೆಡೆ ಹಸಿರ ಕಾನನವಿದ್ದರೆ ಮಗದೊಂದೆಡೆ ಪ್ರಶಾಂತವಾಗಿರುವ ಜಲಾಶಯ ತುಂಬಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಕೊಡಗು ಜಿಲ್ಲೆಯೆಂದರೆ ಪ್ರಕೃತಿಯ ತಾಣ. ದಕ್ಷಿಣ ಕಾಶ್ಮೀರ, ಕರ್ನಾಟಕದ ಸ್ವಿಡ್ಜರ್ಲ್ಯಾಂಡ್ ಎಂದೆಲ್ಲಾ ಖ್ಯಾತಿ ಪಡೆದುಕೊಂಡಿದೆ. ಅದರಲ್ಲೂ ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆ ಅಕ್ಷರಷಃ ಸ್ವಿಡ್ಜರ್ಲ್ಯಾಂಡಿನಂತೆ ಆಗಿ ಬಿಡುತ್ತದೆ. ಮಗದೊಂದೆಡೆ ಮಳೆಗಾಲ ಆರಂಭವಾಯಿತ್ತೆಂದರೆ ಇನ್ನಿಲ್ಲದ ಕಡೆಗಳೆಲ್ಲಾ ಜಲಕನ್ಯೆಯರು ಹುಟ್ಟಿ, ನಲಿದು ಹರಿಯಲಾರಂಭಿಸುತ್ತಾರೆ. ಆದ್ದರಿಂದಲೇ ಮಳೆಗಾಲದ ಕೊಡಗು ಜಿಲ್ಲೆಯ ಪ್ರಾಕೃತಿಕ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಾರೆ. ಕೊಡಗಿನ ಪ್ರವಾಸಿ ತಾಣಗಳು ಕಣ್ಮನ ಸೆಳೆಯುತ್ತಿದ್ದು ಅದರಲ್ಲೂ ಸುಂದರ ಪ್ರಕೃತಿಯ ತಾಣದಲ್ಲಿ ತುಂಬಿ ಹರಿಯುತ್ತಿರುವುದು ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದ ಸಮೀಪ ಇರುವ ಮಿನಿ ನಯಾಗರ ಎಂದೇ ಕರೆಸಿಕೊಳ್ಳುವ ಚಿಕ್ಲಿಹೊಳೆ ಜಲಾಶಯ ಪ್ರವಾಸಿಗರನ್ನು ಮತ್ತಷ್ಟು ಮನಸೂರೆಗೊಳ್ಳುತ್ತಿದೆ.
ಜಲಾಶಯ ತುಂಬಿದರೆ ಸಾಕು ಸ್ವಾಭಾವಿಕವಾಗಿಯೇ ಹರಿಯುವ ಜಲಧಾರೆ ಎಂತಹ ಅರಸಿಕರನ್ನಾದರೂ ಸೆಳೆದುಬಿಡುತ್ತದೆ. ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ಜಲಾಶಯವನ್ನು ನೋಡಿ ಮೈಮರೆಯದವರಿಲ್ಲ. ಹೀಗಾಗಿಯೇ ಜಲಾಶಯ ನೋಡಲು ಬರುವ ಪ್ರವಾಸಿಗರು ಜಲಾಶಯ ಅಣೆಕಟ್ಟೆ ಮೇಲೆ ನಿಂತು ಪೋಟೋ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾದರೂ ಕೆಲವೇ ದಿನಗಳಲ್ಲಿ ಮತ್ತೆ ಖಾಲಿಯಾಗಿತ್ತು. ಬರೋಬರಿ 40 ವರ್ಷಗಳ ಬಳಿಕ ಇಡೀ ಜಲಾಶಯದಲ್ಲಿ ಒಂದು ಹನಿಯೂ ನೀರಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜಲಾಶಯದ ಮಧ್ಯಭಾಗದಲ್ಲಿ ಇದ್ದ ಶಿವನ ದೇವಾಲಯೂ ಪೂರ್ಣ ತೆರವಾಗಿತ್ತು. ಆ ಸಮಯದಲ್ಲಿ ಜಲಾಶಯವನ್ನು ನೋಡಲು ಬರುತ್ತಿದ್ದ ಪ್ರವಾಸಿಗರು ಬೇಸರದಿಂದ ವಾಪಸ್ ಹೋಗುತ್ತಿದ್ದರು. ಇಷ್ಟೊಂದು ಬರಗಾಲ ಎದುರಿಸಿದ್ದ ಜಲಾಶಯ ಇದೀಗ ಭರ್ತಿಯಾಗಿದೆ. ಇದೇ ಜಲಾಶಯವನ್ನು ಆಶ್ರಯಿಸಿದ್ದ ನೂರಾರು ರೈತರು ಕಳೆದ ವರ್ಷ ತಮ್ಮ ಬೆಳೆಗಳಿಗೆ ನೀರಿಲ್ಲದೆ ಪರದಾಡುವಂತೆ ಆಗಿತ್ತು.
ಈ ಬಾರಿ ಜುಲೈ ತಿಂಗಳಿನಲ್ಲಿಯೇ ಜಲಾಶಯ ತುಂಬಿದ್ದು, ಇನ್ನೂ ಎರಡು ತಿಂಗಳ ಕಾಲ ಸಾಕಷ್ಟು ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿಕೆಯಂತೆ ನಿರೀಕ್ಷೆಯೂ ಇದೆ. ಇದರಿಂದ ಗುಡ್ಡೆಹೊಸೂರು, ಬೆಟ್ಟಗೇರಿ, ಬೆಂಡೆಬೆಟ್ಟ, ರಂಗಸಮುದ್ರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಭತ್ತ ಬೆಳೆಯುವ ರೈತರು ಈ ಬಾರಿಯಾದರೂ ಭತ್ತ ಬೆಳೆಯಬಹುದು ಎನ್ನುವ ಸಂತಸದಲ್ಲಿ ಇದ್ದಾರೆ. ಇದೊಂದೇ ಅಲ್ಲ, ಜಿಲ್ಲೆಯ ಅಬ್ಬಿಫಾಲ್ಸ್, ಕೋಟೆ ಅಬ್ಬಿಫಾಲ್ಸ್, ಚೇಲಾವರ ಫಾಲ್ಸ್, ಇರ್ಫು ಜಲಪಾತ ಹಾಗೂ ಮಲ್ಲಹಳ್ಳಿ ಜಲಪಾತಗಳು ಸೇರಿದಂತೆ ಎಲ್ಲಾ ಜಲಪಾತಗಳು, ನದಿ ತೊರೆಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಇಡೀ ಕೊಡಗು ಜಿಲ್ಲೆ ಕೂಲ್ ಕೂಲ್ ಆಗಿ ಎಲ್ಲಾ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.