ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ದೇವಾಲಯದಲ್ಲಿ ಶುರುವಾದ ವಸ್ತ್ರ ಸಂಹಿತೆ ಕಿತ್ತಾಟದ ಕಾವು ಇನ್ನೂ ತಣ್ಣಗಾಗದೆ ಬೂದಿಮುಚ್ಚಿದ ಕೆಂಡದಂತೆ ಇದೆ. ಸಮಿತಿ ಸ್ಥಾಪನೆಗಾಗಿ ಸಮಿತಿಯೊಂದನ್ನು ರಚಿಸಿ ಅದನ್ನು ಸರಿಪಡಿಸುವ ಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ. ಇದೀಗ ಕೊಡವ ಹಾಗೂ ಅರೆಭಾಷೆ ಗೌಡ ಎರಡು ಸಮುದಾಯಗಳ ನಡುವೆ ಜಾತಿ ನಿಂದನೆ, ಮಕ್ಕಳು ಮಹಿಳೆಯರ ನಿಂದನೆ ಮಾಡುವ ಹಂತಕ್ಕೆ ತಲುಪಿದ್ದು ಜಿಲ್ಲೆಯಲ್ಲಿ ಎರಡು ಸಮುದಾಯಗಳ ನಡುವಿನ ಶಾಂತಿ ಸಹಬಾಳ್ವೆ ಎನ್ನುವುದು ವೈಷಮ್ಯಕ್ಕೆ ತಿರುಗಿದೆ.
ಹೌದು ಕೊಡವ ಸಮುದಾಯದವರನ್ನು, ಅವರ ಆಚಾರ ವಿಚಾರಗಳನ್ನು ಹಾಗೂ ಅವರ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ನಿಂದಿಸಲಾಗುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಕೊಡವ ಸಮುದಾಯದ ಕೆಲ ಯುವಕರು ಅರೆಭಾಷೆ ಗೌಡ ಸಮುದಾಯದ ಜನರನ್ನು, ಅವರ ಆಚಾರ, ವಿಚಾರಗಳನ್ನು, ಅವರ ಹೆಣ್ಣುಮಕ್ಕಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀನಾಯವಾಗಿ ನಿಂದಿಸಲಾಗುತ್ತಿದೆ. ಹೀಗಾಗಿ ಪರಸ್ಪರರ ವಿರುದ್ಧ ಎರಡು ಸಮುದಾಯಗಳಿಂದಲೂ ಪೊಲೀಸರಿಗೆ ದೂರು ನೀಡಲಾಗಿದೆ. ಕಟ್ಟೆಮಾಡುವಿನ ಮಹಾಮೃತ್ಯುಂಜಯ ದೇವಾಲಯಕ್ಕೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಕುಪ್ಯೆಚಾಲೆ ತೊಟ್ಟು ಬಂದಿದ್ದನ್ನು ದೇವಾಲಯ ಸಮಿತಿಯು ತಡೆದಿತ್ತು.
ಬಳಿಕ ಅದು ಕೊಡವ ಮತ್ತು ಅರೆಭಾಷೆ ಗೌಡ ಸಮುದಾಯಗಳ ನಡುವಿನ ಗಲಾಟೆಯಾಗಿ ಬಲಾಗಿತ್ತು. ಅದಾದ ಬಳಿಕ ಕುಶಾಲನಗರದ ಅನುದೀಪ್ ಎಂಬ ಹಾಗೂ ಅಯ್ಯಪ್ಪ ಎಂಬ ವ್ಯಕ್ತಿಗಳಿಬ್ಬರೂ ಕೊಡವ ಹಾಗೂ ಅರೆಭಾಷೆ ಗೌಡ ಸಮುದಾಯಗಳ ವಿರುದ್ಧ ಪರಸ್ಪರ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ ಸಮಾಜಿಕ ಜಾಲತಾಣಗಳಲ್ಲಿ ಮೆಸೇಜ್ಗಳನ್ನು ಹರಿಬಿಟ್ಟಿದ್ದರು.