ಎಲ್ಲಿ ರಸ್ತೆ ರಿಪೇರಿ ಮಾಡಲು ಮುಂದಾಗಿರುವುದು
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಕಲೆಯ ತವರೂರು. ಇಲ್ಲಿನ ಕಿನ್ನಾಳ ಕಲೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಸಹ ಪ್ರಸಿದ್ಧಿ ಪಡೆದಿದೆ. ಆದರೆ ಈ ಗ್ರಾಮಕ್ಕೆ ಕೊಪ್ಪಳದಿಂದ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ತೆಗ್ಗು ದಿನ್ನೆಗಳಿಂದ ಕೂಡಿದೆ. ಈ ಹಿನ್ನಲೆಯಲ್ಲಿ ರಸ್ತೆಯನ್ನು ಇದೀಗ ರಿಪೇರಿ ಮಾಡುವ ಕಾರ್ಯ ಆರಂಭವಾಗಿದೆ.
ರಸ್ತೆ ರಿಪೇರಿ ಮಾಡುತ್ತಿರುವವರು ಯಾರು
ಯಾವುದೇ ಒಂದು ರಸ್ತೆಯನ್ನು ಮಾಡುವುದು ಸರಕಾರದ ಕೆಲಸ. ಆದರೆ ಯಾವಾಗ ಸರಕಾರ ರಸ್ತೆ ಮಾಡಲು ಮುಂದಾಗುವುದಿಲ್ಲವೋ ಆಗ ಸಹಜವಾಗಿಯೇ ಸಂಘ ಸಂಸ್ಥೆಗಳು,ಗ್ರಾಮಸ್ಥರು,ವಾಹನ ಸವಾರರು,ಚಾಲಕರು ರಸ್ತೆ ರಿಪೇರಿ ಮಾಡುವ ಕಾರ್ಯಕ್ಕೆ ಮುಂದಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ಸರಕಾರ ಮಾಡದ ಕೆಲಸವನ್ನು ಗಣೇಶ ಕಮಿಟಿಯೊಂದು ಮಾಡಿದೆ. ಹೌದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕಾಮನಕಟ್ಟಿಯ ಹಿಂದೂ ಮಹಾಮಂಡಳ ಗಣೇಶನ ಕಮಿಟಿ ವತಿಯಿಂದ ಇದೀಗ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿದೆ.
ಯಾವ ರಸ್ತೆ ರಿಪೇರಿ ಆಗುತ್ತಿರುವುದು?
ಕೊಪ್ಪಳ ಜಿಲ್ಲಾ ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿ ಕಿನ್ನಾಳ ಗ್ರಾಮ ಇದೆ. ಕಿನ್ನಾಳ ಗ್ರಾಮದಿಂದ ಕೊಪ್ಪಳಕ್ಕೆ ಪ್ರತಿನಿತ್ಯ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಹೀಗಾಗಿ ಕಿನ್ನಾಳದಿಂದ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಇದೀಗ ಕಿನ್ನಾಳ ಗ್ರಾಮದ ಹಿಂದೂ ಮಹಾಮಂಡಳ ಕಮಿಟಿ ಅವರು ರಿಪೇರಿ ಮಾಡುತ್ತಿದ್ದಾರೆ.
ಹದಗೆಟ್ಟ ಕಿನ್ನಾಳ-ಕೊಪ್ಪಳ ರಸ್ತೆ
ಇನ್ನು ಕೊಪ್ಪಳ ತಾಲೂಕು ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿನ್ನಾಳ ಗ್ರಾಮದಿಂದ ಕೊಪ್ಪಳಕ್ಕೆ ಹೋಗುವ ರಸ್ತೆಯಲ್ಲಿ ಬರೀ ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ.ಪ್ರತಿನಿತ್ಯ ಹದಗೆಟ್ಟ ರಸ್ತೆಯಲ್ಲಿ ಗರ್ಭಿಣಿಯರು, ಮಕ್ಕಳು,ಬೈಕ್ ಸವಾರರು ಸಂಚರಿಸಿ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಜೊತೆಗೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದಾಗಿ ಈ ರಸ್ತೆಯ ರಿಪೇರಿ ಮಾಡುವ ಕಾರ್ಯಕ್ಕೆ ಇದೀಗ ಮುಂದಾಗಿದ್ದಾರೆ.
ಕ್ಯಾರೆ ಎನ್ನದ ಅಧಿಕಾರಿಗಳು- ಜನಪ್ರತಿನಿಧಿಗಳು
ಇನ್ನು ಕಿನ್ನಾಳ ಗ್ರಾಮದ ರಸ್ತೆಯನ್ನು ರಿಪೇರಿ ಮಾಡುವಂತೆ ಅನೇಕ ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ಕೊಟ್ಟಿದ್ದೆ ಬಂತು ವಿನಹಃ ಅದರಿಂದ ಕೆಲಸ ಮಾತ್ರ ಆಗಲೇ ಇಲ್ಲ. ಹೀಗಾಗಿ ಇದರಿಂದ ರೋಸಿ ಹೋಗಿದ್ದ ಜನರು, ಸ್ವತಃ ತಾವೇ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.
ಡಿಜೆ ಹಣ ರಸ್ತೆ ರಿಪೇರಿಗೆ
ಇನ್ನು ತಮ್ಮ ಗ್ರಾಮದ ಜನರು ಪ್ರತಿನಿತ್ಯ ಅನುಭವಿಸುತ್ತಿದ್ದ ಸಮಸ್ಯೆಯನ್ನು ಅರಿತ ಕಿನ್ನಾಳ ಗ್ರಾಮದ ಈ ಬಾರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ನಿರ್ಧರಿಸಿದರು. ಆ ಪ್ರಕಾರ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದರು. ಬಳಿಕ ಡಿಜೆಗೆ ಕೋಡುತ್ತಿದ್ದ ಹಣದಿಂದ ರಸ್ತೆ ಮಾಡಲು ಗ್ರಾಮಸ್ಥರು ಮುಂದಾದರು. ಅದರಂತೆ 2 ರಿಂದ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಹಿಂದೂ ಮಹಾಮಂಡಳ ಗಣೇಶನ ಕಮಿಟಿ ವತಿಯಿಂದ ಜೆಸಿಬಿ,ರೂಲರ್ ಮೂಲಕ ಮುರಮ್ ಹಾಕಿ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭ ಮಾಡಲಾಗಿದೆ.
ರಸ್ತೆ ಸುಧಾರಣೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
ಇನ್ನು ಕಿನ್ನಾಳ ಗ್ರಾಮದಿಂದ ಚಿಲವಾಡಗಿ ಗ್ರಾಮದವರೆಗೂ 10 ಕಿಲೋಮೀಟರ್ ಉದ್ದದ ರಸ್ತೆಯನ್ನು ಸುಧಾರಣೆ ಮಾಡಲು ಯುವಕರು ಮುಂದಾಗಿದ್ದಾರೆ. ಇನ್ನು ಯುವಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನಾದರೂ ರಸ್ತೆ ಸುಧಾರಣೆಗೆ ಅಧಿಕಾರಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.