ಶಿವಮೊಗ್ಗ, ಮಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆರಾಯ: ವಿಮಾನ ಲ್ಯಾಂಡಿಂಗ್ ಸಮಸ್ಯೆ, ಮನೆಗಳು ವಿನಾಶ!

Published : May 14, 2026, 09:03 PM IST

ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮುಂಗಾರು ಪೂರ್ವ ಮಳೆಯು ಹಾನಿ ಮಾಡಿದೆ. ಮಂಗಳೂರಿನಲ್ಲಿ ವಿಮಾನ ಸಂಚಾರ ವ್ಯತ್ಯಯ, ಯಾದಗಿರಿಯಲ್ಲಿ ಮನೆಗಳಿಗೆ ಹಾನಿ ಹಾಗೂ ಹಲವೆಡೆ ವಿದ್ಯುತ್ ಕಡಿತದಂತಹ ಅವಾಂತರ ಸೃಷ್ಟಿಸಿದೆ. ಎಲ್ಲಿ ಏನೇನು ಹಾನಿಯಾಗಿದೆ ತಿಳಿಯಲು ಓದಿ.

PREV
17
ಗುರುವಾರ ಸಂಜೆ 4 ಜಿಲ್ಲೆಗಳಲ್ಲಿ ಮಳೆ ಅಬ್ಬರ

ಬೆಂಗಳೂರು/ಮಂಗಳೂರು: ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಬೆಂದು ಹೋಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಆದರೆ, ರಾಜ್ಯದ ಹಲವೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದೆಡೆ ಮಳೆ ಖುಷಿ ನೀಡಿದರೆ, ಮತ್ತೊಂದೆಡೆ ಅಪಾರ ಹಾನಿ ಉಂಟುಮಾಡಿದೆ. ವಿಶೇಷವಾಗಿ ಮಂಗಳೂರು, ಯಾದಗಿರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ರೌದ್ರಾವತಾರ ಕಂಡುಬಂದಿದೆ.

27
ಮಂಗಳೂರು ಏರ್ ಪೋರ್ಟ್ ನಲ್ಲಿ ಆತಂಕದ ಕ್ಷಣಗಳು:

ಕರಾವಳಿ ನಗರಿ ಮಂಗಳೂರಿನಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ರನ್ ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ಇಳಿಯಲಾಗದೆ ವಿಟ್ಲ ಸಮೀಪದ ಆಕಾಶದಲ್ಲಿ ಸುದೀರ್ಘ ಕಾಲ ಸುತ್ತಾಡುತ್ತಿವೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

37
ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ತಗಡಿನ ಸೂರುಗಳು ಹಾರಾಟ!

ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ. ಯಾದಗಿರಿ ನಗರ, ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು. ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿಯ ತಗಡುಗಳು ನೂರಾರು ಅಡಿ ದೂರಕ್ಕೆ ಹಾರಿ ಹೋಗಿವೆ. 

47
ವಿದ್ಯುತ್ ಸಂಪರ್ಕ ಕಡಿತ

ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತಂಪು ನೀಡಿದೆಯಾದರೂ, ಬಡ ಕುಟುಂಬಗಳ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ನೋವು ತಂದಿದೆ.

57
ಮಲೆನಾಡಿನಲ್ಲೂ ವರುಣನ ಕೃಪೆ:

ಶಿವಮೊಗ್ಗದಲ್ಲಿ ಹಲವು ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ ಧರೆಗಿಳಿದಿದ್ದಾನೆ. ಸಂಜೆ 6 ಗಂಟೆಯ ಸುಮಾರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಆದರೆ, ದಿಢೀರ್ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು.

67
ಉತ್ತರ ಕನ್ನಡದಲ್ಲಿ ಗುಡುಗು-ಮಿಂಚಿನ ಆರ್ಭಟ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆಯಾಗುತ್ತಿದೆ. ಸಂಜೆ 7 ಗಂಟೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯ ಜನರಿಗೆ ಸೆಕೆಯಿಂದ ಮುಕ್ತಿ ಸಿಕ್ಕಿದೆ. ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲೂ ಮೋಡಕವಿದ ವಾತಾವರಣವಿದ್ದು, ರಾತ್ರಿಯ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

77
ಮುಂಗಾರು ಪೂರ್ವ ಮಳೆ ಚುರುಕು

ಒಟ್ಟಾರೆಯಾಗಿ, ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಗುಡುಗು ಸಿಡಿಲಿನ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories