ಕರ್ನಾಟಕದ ಮುಕುಟ 'ಎತ್ತಿನಭುಜ'ದಲ್ಲಿ ಯುವಕರ ಮೋಜು ಮಸ್ತಿ ಚಿನ್ನಾಟ; ಸಸ್ಯರಾಶಿ, ಸರೀಸೃಪಗಳಿಗೆ ಮಾರಕ!

First Published Jun 19, 2024, 5:40 PM IST

 ರಸ್ತೆಯ ಅಕ್ಕಪಕ್ಕದಲ್ಲಿ ದಟ್ಟ ಕಾನನ. ಆ ಕಡು ಕಾಡಿನ ಮಧ್ಯೆ ರೋಚಕ ಪಯಣ. ಅಲ್ಲಿಂದ ಸಾಗ್ತಿದ್ದಂತೆ ಸಿಗೋದೇ ಮುಗಿಲೆತ್ತರದ ಶಿಖರ. ದೂರದಿಂದ ನೋಡಿದ್ರೆ ಎತ್ತಿನ ಭುಜದಂತೆ ಕಾಣೋ ಆ ಗುಡ್ಡ ಎತ್ತಿನಭುಜ ಎಂದೇ ಖ್ಯಾತಿ. ಚಾರಣಕ್ಕಾಗಿಯೇ ಅಲ್ಲಿಗೆ ನಿತ್ಯ ನೂರಾರು ಪ್ರವಾಸಿಗರ ದಂಡೇ ಹರಿದು ಬರುತ್ತೆ. ಅದರಲ್ಲೂ ವಿಕ್ ಎಂಡ್ ಬಂದ್ರಂತೂ ಸಾವಿರಾರು ಜನಜಂಗುಳಿ. ಆದ್ರೆ, ಇದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಯಾಕಂದ್ರೆ, ಎತ್ತಿನಭುಜ ಅಂದ್ರೆ ಸೂಕ್ಷ್ಮ ಪ್ರದೇಶ. ಅಲ್ಲಿನ ಚಾರಣ ಸಸ್ಯರಾಶಿಗೂ ಮಾರಕ. ಸರಿಸೃಪಗಳಿಗೂ ಕಂಟಕ ಎದುರಾಗಿದೆ. 
 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರಕೃತಿ ರಮಣೀಯ ದೃಶ್ಯವಂತೂ ನೋಡೋ ಕಣ್ಣಿಗೆ ಒಮ್ಮೆ ಹೋಗ್ಲೇಬೇಕು ಅನ್ನಿಸದೆ ಇರದು. ಅಲ್ಲಿನ ಸ್ವಚ್ಚಂದ ಪರಿಸರದಲ್ಲಿ ರೌಂಡ್ಸ್ ಹಾಕಬೇಕು ಅನಿಸೋದ್ರಲ್ಲಿ ಡೌಟೇ ಇಲ್ಲ. ಕಾಫಿನಾಡ ಪಶ್ಚಿಮ ಘಟ್ಟಗಳ ಸಾಲಿನಲ್ಲಿರೋ ಎತ್ತಿನಭುಜ ಸುತ್ತಮುತ್ತಲಿನ ಪ್ರಕೃತಿಯ ದೃಶ್ಯಗಳು ಪ್ರವಾಸಿಪ್ರಿಯರ ಕಣ್ಣಿಗೆ ಹೊಸ ಲೋಕವನ್ನೇ ಸೃಷ್ಟಿಸುತ್ತೆ.  

ಮೂಡಿಗೆರೆ ತಾಲೂಕಿನ ಬೈರಾಪುರ, ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದಿಂದ ಕಾಲ್ನಡಿಗೆಯಲ್ಲಿ ಹೋದ್ರಷ್ಟೆ ಈ ಗುಡ್ಡಗಳ ಸಾಲಿನಲ್ಲಿ ಸಾಗೋಕೆ ಇಲ್ಲಿನ ಸೌಂದರ್ಯ ಸವಿಯೋಕೆ ಸಾಧ್ಯ. ಈ ಸೌಂದರ್ಯದ ನಡುವೆ ಪಯಣಕ್ಕಾಗಿ ಸಾವಿರಾರು ಪ್ರವಾಸಿಗರು ಬರ್ತಾರೆ. ಅದರಲ್ಲೂ ವಿಕ್ ಎಂಡ್‍ನಲ್ಲಂತೂ ಜನಸಾಗರ. ಎಲ್ಲಿ ನೋಡಿದ್ರು ಗುಡ್ಡದ ತುದಿಯಲ್ಲೊಂದು ಗುಂಪು ಚಾರಣ ಮಾಡುತ್ತೆ. ಆದ್ರೀಗ, ಪ್ರವಾಸಿಗರ ಈ ಮೋಜು-ಮಸ್ತಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
 

Latest Videos


ಇನ್ನು ಶನಿವಾರ-ಭಾನುವಾರ ಬಂತೆಂದ್ರೆ ಟ್ರಾಫಿಕ್ ಜಾಮ್ ಈ ಭಾಗದಲ್ಲಿ ಟ್ರಾಫಿಕ್ ಜಾಮ್. ಬೈರಾಪುರದಲ್ಲಿ ಸಾಲು-ಸಾಲು ಜನರ ಚಾರಣ. ಎತ್ತಿನ ಭುಜವನ್ನೇರಿ ಸೆಲ್ಫಿ ಮೋಜು-ಮಸ್ತಿ. ಅಲ್ಲಿಯೇ ಕೆಲ ಹೊತ್ತು ಕಾಲ ಕಳೆದು ಹೋಗ್ತಿದ್ದಾರೆ. ಪ್ರವಾಸಿಗರ ಈ ವರ್ತನೆಗೆ ಪರಿಸರ ಪ್ರೇಮಿಗಳೀಗ ಅಸಮಾಧಾನ ಹೊರಹಾಕಿದ್ದಾರೆ. ಚಾರಣಕ್ಕಾಗಿಯೇ ಹೋಗೋದ್ರಿಂದ ಮೊದ್ಲೇ ಸೂಕ್ಷ್ಮ ಪ್ರದೇಶವದು.ಶೋಲಾರಣ್ಯ. ಅಸಂಖ್ಯಾತ ಪ್ರವಾಸಿಗರಿಂದ ಇಲ್ಲಿನ ಸಸ್ಯರಾಶಿಗಳಿಗೆ ಮಾರಕವಾಗ್ತಿದೆ. ಸರಿಸೃಪಗಳು ವಾಸಿಸೋದಕ್ಕೂ ತೊಂದರೆಯಾಗ್ತಿದೆ. ಈ ಸೂಕ್ಷ್ಮ ಪ್ರದೇಶದ ಪರಿಸರ ಉಳಿವಿಗಾಗಿ ನಿಯಮ ಜಾರಿಗೊಳಿಸಿ ಅಂತಿದ್ದಾರೆ.

ಆನ್ಲೈನ್ ಬುಕ್ಕಿಂಗ್. ನಿತ್ಯ ಇಂತಿಷ್ಟೆ ಪ್ರವಾಸಿಗರಿಗೆ ಮಾತ್ರ ಅವಕಾಶ. ಜೊತೆಗೆ ಕಾಲಮಿತಿ ಕೂಡ. ಯಾವುದೇ ಪ್ಲಾಸ್ಟಿಕ್ಗೆ ಅವಕಾಶ ನೀಡಬಾರದು. ಸಿಬ್ಬಂದಿಗಳನ್ನ ನಿಯೋಜಿಸೋದ್ರ ಜೊತೆ ಚೆಕ್ ಪೋಸ್ಟ್ ಕೂಡ ನಿರ್ಮಿಸಬೇಕು. ಆಗ ಮಾತ್ರ ಈ ಸೂಕ್ಷ್ಮ ಹಾಗೂ ಸುಂದರ ಪ್ರದೇಶದ ಉಳಿವಿಗೆ ಸಾಧ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಸೂಕ್ಷ್ಮ ಪ್ರದೇಶವೂ ಅವನತಿಯ ಹಾದಿ ಹಿಡಿಯುತ್ತೆ ಅನ್ನೋದು ಪರಿಸರಪ್ರೇಮಿಗಳ ಆತಂಕ.

ಒಟ್ಟಾರೆ, ಪ್ರವಾಸಿಗರಿಗೆ ಎಲ್ಲಿಂದಲೋ ಬಂದು ಇಲ್ಲಿನ ಪ್ರಕೃತಿಯ ನಡುವೇ ಖುಷಿ-ಖುಷಿಯ ಚಾರಣ ಮನೋರಂಜನೆ. ಆದ್ರೆ, ಸೂಕ್ಷ್ಮ ಪ್ರದೇಶಕ್ಕೆ ಹಾನಿಯಾಗ್ತಿದೆ ಅನ್ನೋದು ಪರಿಸರಪ್ರೇಮಿಗಳ ಆತಂಕ. ಅದೇನೆ ಇದ್ರು, ಈ ಪ್ರದೇಶ ವನ್ಯಜೀವಿಗಳ ತಾಣ. ಅಪರೂಪದ ಶೋಲಾರಣ್ಯ. ಇದರ ರಕ್ಷಣೇ ಕೇವಲ ಪರಿಸರವಾದಿಗಳದ್ದಷ್ಟೆ ಅಲ್ಲ. ಪ್ರತಿಯೊಬ್ಬರ ಕರ್ತವ್ಯ. ಈ ಸುಂದರ ಹಾಗೂ ಸ್ವಚ್ಛಂದದ ತಾಣ ಕೇವಲ ಮೋಜು-ಮಸ್ತಿಗೆ ಮಾತ್ರವಲ್ಲದೇ ಉಳಿಸೋದು ಎಲ್ಲರ ಆದ್ಯ ಕರ್ತವ್ಯ. ಇರೋದನ್ನ ಕಳೆದುಕೊಳ್ಳುವುದು ಸುಲಭ. ಆದ್ರೆ, ಮತ್ತೆ ನಿರ್ಮಾನ ಅಸಾಧ್ಯ ಅನ್ನೋದು ಪರಿಸರವಾದಿಗಳ ಮಾತು.

- ವರದಿ : ಆಲ್ದೂರು ಕಿರಣ್ 

click me!