ಚಿತ್ರದುರ್ಗದ ಹೆಗ್ಗೆರೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಇನ್ಸ್‌ಪೆಕ್ಟರ್‌ಗಳು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮೃತರು ರಜೆಯಲ್ಲಿದ್ದ ಕಾರಣ ಪರಿಹಾರ ನೀಡಲು ಇರುವ ಕಾನೂನು ತೊಡಕುಗಳ ಬಗ್ಗೆ ಪರಿಶೀಲಿಸಿ ನೆರವು ನಿಡುವುದಾಗಿ ಭರವಸೆ ನೀಡಿದ್ದಾರೆ.
ಚಿತ್ರದುರ್ಗ (ಮಾ.15): ಚಿತ್ರದುರ್ಗದ ಹೆಗ್ಗೆರೆ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಸಾವನ್ನಪ್ಪಿದ್ದಾರೆ. ಇವರು ಮೂವರೂ ಯುವಕರು, ಇತ್ತೀಚಿಗಷ್ಟೇ ಕೆಲಸಕ್ಕೆ ನೇಮಕವಾಗಿದ್ದರು. ಇದೀಗ ಮದುವೆಗೆ ಬಳ್ಳಾರಿಗೆ ಹೊರಟಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಇವರು ರಜೆಯ ಮೇಲಿದ್ದ ಕಾರಣ, ಮೃತರ ಕುಟುಂಬಕ್ಕೆ ಯಾವ ರೀತಿಯ ಪರಿಹಾರ ನೀಡಬೇಕಾಗುತ್ತದೆ ಎಂಬುದನ್ನು ಪರಿಶೀಲಿಸಿ ನರವು ನೋಡುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
26
ಪರಿಹಾರಕ್ಕೆ ಕಾನೂನು ತೊಡಕು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಬಳಿ ನಡೆದ ಭೀಕರ ರಸ್ತೆ ಅಪಘಾತದ ಸ್ಥಳಕ್ಕೆ ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಮೃತಪಟ್ಟ ಮೂವರು ಯುವ ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳ (RSI) ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ನೆರವು ನೀಡುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ದುರಂತ ಸಂಭವಿಸಿದ ಹೆಗ್ಗೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಭೇಟಿ ನೀಡಿದ ಗೃಹ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಐಜಿಪಿ ಲಾಭೂರಾಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ಅವರು ಘಟನೆಯ ವಿವರಗಳನ್ನು ನೀಡಿದರು. ಕಾರು ಲಾರಿಗೆ ಡಿಕ್ಕಿ ಹೊಡೆದ ಭೀಕರತೆಯನ್ನು ಕಂಡು ಸಚಿವರು ವಿಷಾದ ವ್ಯಕ್ತಪಡಿಸಿದರು.
36
ಯುವ ಅಧಿಕಾರಿಗಳ ಅಕಾಲಿಕ ಸಾವು
ಅಪಘಾತದಲ್ಲಿ ಮೃತಪಟ್ಟ ಮಂಜುನಾಥ್ (31), ಅಮರೇಶ್ (25) ಮತ್ತು ಸಚಿನ್ (32) ಅವರು ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ನೇಮಕಗೊಂಡು ಸೇವೆಯಲ್ಲಿದ್ದರು. ಗೆಳೆಯನ ಮದುವೆ ಸಮಾರಂಭಕ್ಕಾಗಿ ರಜೆ ಪಡೆದು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 'ಮದುವೆಯ ಸಂಭ್ರಮಕ್ಕೆ ಹೋಗುತ್ತಿದ್ದ ಯುವ ಅಧಿಕಾರಿಗಳು ಹೀಗೆ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ' ಎಂದು ಪರಮೇಶ್ವರ್ ತಿಳಿಸಿದರು.
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, 'ಅಪಘಾತ ನಡೆದಾಗ ಅಧಿಕಾರಿಗಳು ರಜೆಯಲ್ಲಿದ್ದರು. ಸಾಮಾನ್ಯವಾಗಿ ಇಲಾಖೆಯ ನಿಯಮಗಳ ಪ್ರಕಾರ ಕರ್ತವ್ಯದ ಅವಧಿಯಲ್ಲಿ ಮೃತಪಟ್ಟರೆ ಸಿಗುವ ಸೌಲಭ್ಯಗಳು ಬೇರೆ ಇರುತ್ತವೆ. ಆದರೆ, ಮೃತಪಟ್ಟವರು ನಮ್ಮ ಇಲಾಖೆಯ ಯುವ ಅಧಿಕಾರಿಗಳಾದ ಕಾರಣ, ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಯಾವ ರೀತಿ ಗರಿಷ್ಠ ನೆರವು ನೀಡಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ನಿಯಮಾನುಸಾರ ಮೃತರ ಕುಟುಂಬಕ್ಕೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ.
56
ತಪ್ಪು ಯಾರದ್ದೆಂದು ಹೇಳಲು ಕಷ್ಟ
ಇನ್ನು 'ಹೆದ್ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಯಾರದ್ದು ತಪ್ಪು ಎಂದು ಹೇಳುವುದು ಕಷ್ಟಸಾಧ್ಯ. ಆದರೆ ಘಟನೆ ಮಾತ್ರ ತುಂಬ ದೊಡ್ಡ ನಷ್ಟವನ್ನುಂಟು ಮಾಡಿದೆ' ಎಂದು ಗೃಹ ಸಚಿವ ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.
66
ಗಾಯಾಳುಗಳ ಆರೋಗ್ಯ ವಿಚಾರಣೆ
ಇದೇ ವೇಳೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್ಐ ಈಶ್ವರ್ ಮತ್ತು ಆರ್‌ಎಸ್‌ಐ ಮಹಾಂತೇಶ್ ಅವರ ಆರೋಗ್ಯದ ಬಗ್ಗೆಯೂ ಸಚಿವರು ಮಾಹಿತಿ ಪಡೆದರು. ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವರು ಪ್ರಾರ್ಥಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ