ಇಂದಿನಿಂದ ರಾಜ್ಯ ಯುವ ಕಾಂಗ್ರೆಸ್‌ಗೆ ಹಾಗೂ ರಕ್ಷಾ ರಾಮಯ್ಯ ಅವರಿಗೂ ನಾನೇ ಅಧ್ಯಕ್ಷ. ನಾನು ಈ ಹಿಂದೆ ತಪ್ಪು ಮಾಡಿರುವುದು ನಿಜ. ಇನ್ನು ಮುಂದೆ ಹಾಗೆ ಆಗುವುದಿಲ್ಲ. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡುತ್ತೇನೆ ಎಂದು ಹೇಳಿದ ಮೊಹಮ್ಮದ್ ನಲಪಾಡ್
ಮಂಗಳವಾರ ಅಮಾವಾಸ್ಯೆ ಇದೆ. ಹಾಗಾಗಿ ಇಂದೇ ಕಚೇರಿ ಪೂಜೆ ನೆರವೇರಿಸಿದ್ದೇನೆ. ಫೆ.10 ರಂದು ಅಧಿಕಾರ ಹಸ್ತಾಂತರವಿದ್ದು, ಕೆಪಿಸಿಸಿ ಕಚೇರಿಯಲ್ಲೇ ಕಾರ್ಯಕ್ರಮ ನಡೆಯಲಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜವಾಬ್ದಾರಿ ನನಗೆ ವಹಿಸಿದ್ದಾರೆ. ಈ ಸ್ಥಾನಕ್ಕಾಗಿ ನಾನು ಒಂದು ವರ್ಷ ಕಾಯಬೇಕಾಯಿತು. ನಮ್ಮಲ್ಲಿ ರಕ್ಷಾ ರಾಮಯ್ಯ, ನಲಪಾಡ್ ಎಂಬ ಗುಂಪುಗಾರಿಕೆ ಇಲ್ಲ. ರಕ್ಷಾ ರಾಮಯ್ಯ ಅವರಿಗೂ ನಾನೇ ಅಧ್ಯಕ್ಷ. ಹಿಂದೆ ಒಂದು ವರ್ಷ ನನಗೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿದ್ದರು. ಇದರಲ್ಲಿ ಭಿನ್ನಾಭಿಪ್ರಾಯದ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ ನಲಪಾಡ್
ಕಚೇರಿ ಪೂಜೆ ಬಳಿಕ ಯುವ ಕಾಂಗ್ರೆಸ್ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರು ಮಾತುಕತೆ ನಡೆಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ನಲಪಾಡ್ ಅತ್ಯಧಿಕ ಮತಗಳನ್ನು ಗಳಿಸಿದರೂ ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. ಇದೀಗ ಒಪ್ಪಂದದಂತೆ ಅಧಿಕಾರ ಹಸ್ತಾಂತರ ನಡೆಯುತ್ತಿದೆ.
ಮೊಹಮ್ಮದ್ ನಲಪಾಡ್ ಅವರು ಕಾಂಗ್ರೆಸ್‌ಭವನದಲ್ಲಿನ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸ್ವತಃ ಹೋಮ ಕುಂಡದ ಮುಂದೆ ಕುಳಿತು ಹಿಂದೂ ಸಂಪ್ರದಾಯದಂತೆ(Hindu Tradition) ಹೋಮ-ಹವನ ನಡೆಸಿದರು. ಬಳಿಕ ಮುಸ್ಲಿಂ(Mulsim) ಧಾರ್ಮಿಕ ಮುಖಂಡರು, ತಂದೆ ಎನ್.ಎ. ಹ್ಯಾರಿಸ್ ಜತೆಗೂಡಿ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆಯನ್ನೂ ಸಲ್ಲಿಸಿದರು.