ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಪೂಜೆ, ಹೋಮವನ್ನು ಮಾಡಲಾಗಿದೆ.
ಹುಣಸಿಕಟ್ಟಿ ಗ್ರಾಮದ ಹಿಂದೂ- ಮುಸ್ಲಿಂ ಸಮುದಾಯದ ಮುಖಂಡರು ಸೇರಿ ಕಾರ್ಯಕ್ರಮವನ್ನು ಜಂಟಿಯಾಗಿ ನೆರವೇರಿಸಿದ್ದಾರೆ. ಮಸೀದಿಯ ಸುತ್ತಲೂ ಕೇಸರಿ ಹಾಗೂ ಹಸಿರು ಧ್ವಜಗಳಿಂದ ಅಲಂಕರಿಸಲಾಗಿತ್ತು.
ಶ್ರೀರಾಮನ ಸಣ್ಣ ಮೂರ್ತಿಯನ್ನಿಟ್ಟು ರುದ್ರಾಭಿಷೇಕ ಮಾಡಿ, ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಇನ್ನು ರಂಜಾನ್ ತಿಂಗಳಲ್ಲಿಯೂ ಕೂಡ ಈ ಮಸೀದಿಯಲ್ಲಿ ಆಲಿ ದೇವರ ಸಮ್ಮುಖದಲ್ಲಿ ಭಾರತ ಮಾತೆ ಫೋಟೋವನ್ನಿಟ್ಟು ಪೂಜೆ ಮಾಡಲಾಗುತ್ತದೆ.
ಭಾರತ ಮಾತೆ ಚಿತ್ರದ ಜೊತೆಗೆ ಕಳಸವಿಟ್ಟು ರುದ್ರಾಭಿಷೇಕ, ಪೂಜೆಯನ್ನ ನೆರವೇರಿಸಲಾಯಿತು. ಇದು ಇಡೀ ದೇಶದಲ್ಲಿನ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಮಸೀದಿ ಕಮೀಟಿಯ ರಾಜು ಸಾಬ್ ಹೊಸಳ್ಳಿ, ರುತುಂ ಸಾಬ್ ಹೊಸಳ್ಳಿ ಸೇರಿದಂತೆ ಗ್ರಾಮದ ಹಲವು ಹಿಂದೂ ಮುಖಂಡರು ಕೂಡ ಶ್ರೀರಾಮ ಪೂಜೆಯಲ್ಲಿ ಭಾಗಿಯಾಗಿದ್ದರು.