ಕೊಡಗು ಗಾಜಿನ ಸೇತುವೆಗಳಿಗೆ ಎದುರಾಯ್ತು ಸಂಕಷ್ಟ; ಪ್ರವಾಸಿಗರು ಏನು ಮಾಡಬೇಕು?

Published : Oct 01, 2024, 09:25 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ದಕ್ಷಿಣ ಕಾಶ್ಮೀರ ಎಂದೇ ಪ್ರಸಿದ್ಧಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಕೊಡಗಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಗಾಜಿನ ಸೇತುವೆಗಳು ಸುರಕ್ಷತೆ ಇಲ್ಲದೆಯೇ ನಿರ್ಮಾಣವಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಪರಿಸರಕ್ಕೆ ಹಾನಿ ಮತ್ತು ಅಕ್ರಮ ನಿರ್ಮಾಣದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಹಾಗಾದರೆ ಪ್ರವಾಸಿಗರು ಏನು ಮಾಡಬೇಕು ಎಂಬುದಕ್ಕೆ ಈ ಸ್ಟೋರಿ ನೋಡಿ..

PREV
16
ಕೊಡಗು ಗಾಜಿನ ಸೇತುವೆಗಳಿಗೆ ಎದುರಾಯ್ತು ಸಂಕಷ್ಟ; ಪ್ರವಾಸಿಗರು ಏನು ಮಾಡಬೇಕು?

ಮಡಿಕೇರಿ ನಗರದ ಸುತ್ತಮುತ್ತಲಲ್ಲೇ 2 ಗ್ಲಾಸ್ ಬ್ರಿಡ್ಜ್ ಪ್ರವಾಸಿಗರನ್ನು ಕೈಬೀಸುತ್ತಿವೆ. ನೂರಾರು ಅಡಿ ಎತ್ತರದ ಈ ಗಾಜಿನ ಸೇತುವೆ ಮೇಲೆ ಓಡಾಡಿ ಎಂಜಾಯ್ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಇದೀಗ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿರುವ ತಲಕಾವೇರಿ ಹಾಗೂ ಭಾಗಮಂಡಲ ಸೇರಿದಂತೆ ವಿವಿಧೆಡೆ ಮೂರು ಗ್ಲಾಸ್ ಬ್ರಿಡ್ಜ್ ಸಿದ್ಧಗೊಂಡಿವೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಐದು ಗಾಜಿನ ಬೃಹತ್ ಸೇತುವೆಗಳು ಸಿದ್ಧಗೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

26

ಆದರೆ, ಈ ಗಾಜಿನ ಸೇತುವೆಗಳು ಯಾವುದೇ ಸುರಕ್ಷತೆ ಇಲ್ಲದೆಯೇ ನಿರ್ಮಾಣವಾಗಿದ್ದು ಪ್ರವಾಸಿಗರಿಗೆ ಅಪಾಯ ತಂದೊಡ್ಡುತ್ತವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದಕ್ಕಿಂತ ಮುಖ್ಯವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ಈ ಗಾಜಿನ ಸೇತುವೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ. ಅಲ್ಲದೆ ವನ್ಯಜೀವಿ ಮತ್ತು ಇತರೆ ಅರಣ್ಯ ಜೀವಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇವುಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಕೊಡಗು ಏಕೀಕರಣ ರಂಗದ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

36

ಸೂಕ್ಷ್ಮ ಬೆಟ್ಟ ಪ್ರದೇಶದಲ್ಲಿ ಮಾಡಿರುವುದರಿಂದ ಈಗಾಗಲೇ ಗ್ಲಾಸ್ ಬ್ರಿಡ್ಜ್ ಸಮೀಪದಲ್ಲಿ ಭೂಕುಸಿತವಾಗಿವೆ. ಇದರಿಂದ ಸ್ಥಳೀಯ ಸಾರ್ವಜನಿಕ ಜನಜೀವನಕ್ಕೂ ತೀವ್ರ ತೊಂದರೆಯಾಗುತ್ತಿದ್ದು, ಬರುವ ಪ್ರವಾಸಿಗರಿಗೂ ಯಾವುದೇ ಸುರಕ್ಷತೆ ಎನ್ನುವುದೇ ಇಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಕೊಡಗಿನ ಪ್ರವಾಸೋದ್ಯಮವನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಗ್ಲಾಸ್ ಬ್ರಿಡ್ಜ್ ನಿರ್ಮಿಸಿರುವ ಮಾಲೀಕರು ಈಗ ಕಂಗಾಲಾಗುವಂತೆ ಆಗಿದೆ.

46

ಈ ಕುರಿತು ಮಾತನಾಡಿರುವ ಕೊಡಗು ಏಕೀಕರಣ ರಂಗದ ಮುಖಂಡ ಹಾಗೂ ಪರಿಸರವಾದಿ ತಮ್ಮುಪೂವಯ್ಯ ಅವರು ಗ್ಲಾಸ್ ಬ್ರಿಡ್ಜ್ ಮಾಡುತ್ತಿರುವವರು ಕೇರಳದ ಮೂಲದವರು. ಅವರು ಇಲ್ಲಿನ ಜನರ ಮೂಲಕ ಬಂಡವಾಳ ಹೂಡಿ ಕೊಡಗಿನ ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡಗಿನ ಪ್ರವಾಸೋದ್ಯಮವನ್ನು ಸಾಕಷ್ಟು ಬೆಳವಣಿಗೆ ಕಾಣುತ್ತಿರುವುದರಿಂದ ಇದನ್ನೇ ಬಳಸಿಕೊಂಡು ಇಲ್ಲಿ ಬಂಡವಾಳ ಹೂಡಿ ಲಾಭ ಪಡೆಯಲು ಹೊರಟಿದ್ದಾರೆ. ಇದಕ್ಕೆ ಮುಖ್ಯವಾಗಿ ಇಲ್ಲಿನ ಸ್ಥಳೀಯ ರಾಜಕೀಯ ಪುಡಾರಿಗಳು ಇಂತಹ ಕೆಲಸಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

56

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಯಾವುದೇ ಒಪ್ಪಿಗೆ ನೀಡಿಲ್ಲ, ಒಪ್ಪಿಗೆ ನೀಡಲು ಬರುವುದಿಲ್ಲ. ಇದಕ್ಕೆ ಕೇಂದ್ರ ಸಮಿತಿಯೊಂದು ಇದ್ದು ಅಲ್ಲಿಂದಲೇ ಒಪ್ಪಿಗೆ ಪಡೆಯಬೇಕಾಗುತ್ತದೆ. ಆ ಸಮಿತಿಯೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಇದಕ್ಕೆ ಒಪ್ಪಿಗೆ ನೀಡುತ್ತದೆ. ಆದರೆ, ಇದಕ್ಕೆ ಯಾವುದೇ ಒಪ್ಪಿಗೆ ಪಡೆಯದೇ ನಿರ್ಮಿಸಲಾಗಿದೆ ಎನ್ನುವುದು ಗೊತ್ತಾಗಿದೆ.  ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆಯೋ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

66

ಈ ಬಗ್ಗೆ ಪ್ರವಾಸಿಗರು ಏನೂ ಆತಂಕಪಡಬೇಕಿಲ್ಲ. ಆದರೆ, ತೀರಾ ಹೆಚ್ಚು ಮಳೆಯ ಮುನ್ಸೂಚನೆ ಇದ್ದಾಗ ಮಾತ್ರ ಗಾಜಿನ ಸೇತುವೆಯ ಸಹವಾಸಕ್ಕೆ ಮಾತ್ರ ಹೋಗಬೇಡಿ. ಕಾರಣ ಗಾಜು ಜಾರುತ್ತದೆ ಎನ್ನುವುದು ಒಂದೆಡೆಯಾದರೆ, ಇಲ್ಲಿನ ಪರಿಸರವಾದಿಗಳು ಭೂ ಕುಸಿತ ಮತ್ತು ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಉಳಿದಂತೆ ಮಳೆ ಇಲ್ಲದ ದಿನಗಳಲ್ಲಿ ಇಲ್ಲಿ ಪ್ರವಾಸ ಮಾಡಿಕೊಂಡು ರಮಣೀಯ ತಾಣವನ್ನು ಎಂಜಾಯ್ ಮಾಡುವುದಕ್ಕೆ ಯಾವುದೇ ಅಡೆತಡೆಗಳಿಲ್ಲ.

Read more Photos on
click me!

Recommended Stories