ಡಿಕೆಶಿ ಟೆಂಪಲ್ ರನ್: ಮಂತ್ರಾಲಯದಲ್ಲಿ ರಾಯರಿಗೆ ತುಲಾಭಾರ ಸೇವೆ ಮಾಡಿದ ಡಿ.ಕೆ. ಶಿವಕುಮಾರ್ ದಂಪತಿ!

Published : Oct 22, 2025, 04:20 PM IST

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಸಭೆಯಲ್ಲಿ, ಆಂಜನೇಯನ ಉದಾಹರಣೆ ನೀಡಿ ತ್ಯಾಗದ ರಾಜಕಾರಣದ ಮಹತ್ವವನ್ನು ತಿಳಿಸಿದರು.

PREV
17

ರಾಯಚೂರು (ಅ.22): ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಟೆಂಪಲ್ ರನ್ ಮುಂದುವರಿಸಿದ್ದು, ಮಂತ್ರಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ದೇವಾಲಯಗಳಿಘೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

27

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ರಾಯರ ಅನುಗ್ರಹಕ್ಕಾಗಿ ವಿಶೇಷ ಸೇವೆ ಸಲ್ಲಿಸಿದರು.

37

ಶ್ರೀಮಠದ ಅರ್ಚಕರ ನೇತೃತ್ವದಲ್ಲಿ ಅವರಿಗೆ ತುಲಾಭಾರ ಸೇವೆಯನ್ನು ನೆರವೇರಿಸಲಾಯಿತು. ಮಠದ ತುಲಾಭಾರ ಮಂಟಪದಲ್ಲಿ ಒಂದು ಕಡೆ ಡಿಕೆ ಶಿವಕುಮಾರ್ ಕುಳಿತು, ಮತ್ತೊಂದು ಕಡೆ ಬೆಲ್ಲವನ್ನು ಇಟ್ಟು ತುಲಾಭಾರ ಮಾಡಲಾಯಿತು. ಡಿಕೆಶಿ ಅವರು ಭಕ್ತಿಪೂರ್ವಕವಾಗಿ ರಾಯರ ಆಶೀರ್ವಾದ ಪಡೆದರು.

47

ಮಂತ್ರಾಲಯದ ಬಳಿಕ ಡಿ.ಕೆ. ಶಿವಕುಮಾರ್ ಅವರು ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇದರ ನಂತರ ಗಾಣದಾಳ ಗ್ರಾಮದಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಆಂಜನೇಯನ ಉದಾಹರಣೆ ನೀಡಿದ ಡಿ.ಕೆ. ಶಿವಕುಮಾರ್, ಸೇವೆ ಮತ್ತು ತ್ಯಾಗದ ರಾಜಕಾರಣದ ಮಹತ್ವವನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಕೊಟ್ಟರು.

57

'ರಾಮನ ತಂದೆ ದಶರಥ ಮಹಾರಾಜನ ದೇವಸ್ಥಾನ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಆದರೆ ರಾಮನ ಭಂಟ ಆಂಜನೇಯನ ದೇವಸ್ಥಾನ ಎಲ್ಲ ಕಡೆ ನೋಡಲು ಸಿಗುತ್ತದೆ. ಏಕೆಂದರೆ ಆಂಜನೇಯ ಸಮಾಜದ ಒಬ್ಬ ಸೇವಕ, ಒಬ್ಬ ತ್ಯಾಗಿ. ಸಮಾಜದಲ್ಲಿ ಯಾರು ತ್ಯಾಗ ಮಾಡುತ್ತಾರೆ, ಯಾರು ಸೇವೆ ಮಾಡುತ್ತಾರೆ, ಅವರಿಗೆ ಸಮಾಜ ಗುರುತಿಸುತ್ತದೆ ಎಂಬುದಕ್ಕೆ ಈ ಪಂಚಮುಖಿ ಆಂಜನೇಯನೇ ಸಾಕ್ಷಿ' ಎಂದು ಹೇಳಿದರು.

67

ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಪಕ್ಷದಲ್ಲಿನ ಗುಂಪು ರಾಜಕಾರಣದ ಬಗ್ಗೆ ಎಚ್ಚರಿಕೆ ನೀಡಿದರು. 'ಪಕ್ಷಕ್ಕಿಂತ ವ್ಯಕ್ತಿ ಯಾವ ಕಾರಣಕ್ಕೂ ದೊಡ್ಡವರಲ್ಲ. ಯಾವಾಗಲೂ ವ್ಯಕ್ತಿ ಪೂಜೆ ಮಾಡಲು ಹೋಗಬಾರದು. ನೀವೇನು ಇದ್ದರೂ ಪಕ್ಷ ಪೂಜೆ ಮಾಡಬೇಕು. ನಾವು ಈ ಗುಂಪು ರಾಜಕಾರಣ ಮಾಡಲು ಅವಕಾಶ ಕೊಟ್ಟಿಲ್ಲ. ಗುಂಪು ರಾಜಕಾರಣದಿಂದ ಏನು ಪ್ರಯೋಜನ ಆಗಿಲ್ಲ' ಎಂದು ಗುಡುಗಿದರು.

77

ಶಾಸಕರಾಗಿಲ್ಲದಿದ್ದರೂ ಬೋಸರಾಜು ಅವರನ್ನು ಮಂತ್ರಿ ಮಾಡಿದ್ದೇಕೆ ಎಂಬುದನ್ನು ವಿವರಿಸಿದ ಡಿಕೆಶಿ 'ಬೋಸರಾಜು ಕಳೆದ 45 ವರ್ಷಗಳಿಂದ ಸೇವೆ ಮಾಡಿದ್ದಾರೆ. ತೆಲಂಗಾಣಕ್ಕೆ ಹೋಗಿ ದುಡಿದಿದ್ದಾರೆ. ಹೀಗಾಗಿ ಈತ ಪಕ್ಷಕ್ಕಾಗಿ ದುಡಿದಿದ್ದಾರೆ, ಅದಕ್ಕಾಗಿ ಪಕ್ಷ ಗುರುತಿಸಿ ಮಂತ್ರಿ ಮಾಡಿದ್ದಾರೆ. ರಾಜಕಾರಣದಲ್ಲಿ ಯಾರು ಬೇಕಾದರೂ ಎಷ್ಟರ ಮಟ್ಟಿಗೆಯಾದರೂ ಬೆಳೆಯಬಹುದು. ಪಕ್ಷದಲ್ಲಿ ಸಣ್ಣ-ದೊಡ್ಡ ಹುದ್ದೆ ಎಂದು ಭಾವಿಸಬೇಡಿ. 'ಬೂತ್‌ಗಳ ನಾಯಕತ್ವ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಬೂತಿನಲ್ಲಿ ಬಹುಮತ ನೀಡುವವನೇ ನಿಜವಾದ ನಾಯಕ. ವೇದಿಕೆ ಮೇಲೆ ಕುಳಿತುಕೊಳ್ಳುವವರು ನಾಯಕರಲ್ಲ' ಎಂದು ಸ್ಪಷ್ಟಪಡಿಸಿದರು.

Read more Photos on
click me!

Recommended Stories