ರಾಯಚೂರು ತಾಲೂಕಿನ ದೇವಸೂಗೂರಿನ ಬಳಿಯ ಸೇತುವೆ ಕಾಮಗಾರಿ ವೇಳೆ ಕೃಷ್ಣ ನದಿಯಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿದ್ದು, ಕಾಮಗಾರಿ ಮಾಡುವ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.
ರಾಯಚೂರು ತಾ. ದೇವಸೂಗೂರು ಬಳಿಯ ಕೃಷ್ಣ ನದಿಯಲ್ಲಿ ವಿಗ್ರಹಗಳು ಪತ್ತೆಯಾಗಿದ್ದು, ಇವುಗಳನ್ನು ಪುರಾತನ ವಿಗ್ರಹಗಳೆಂದು ಗುರುತಿಸಲಾಗಿದೆ. ಸೇತುವೆ ನಿರ್ಮಾಣದ ಕಾಮಗಾರಿ ಸಿಬ್ಬಂದಿಯಿಂದ ವಿಗ್ರಹಗಳನ್ನು ವಶಕ್ಕೆ ಪಡೆದ ಸ್ಥಳೀಯರು, ಅವುಗಳನ್ನು ನದಿ ನೀರಿನಲ್ಲಿ ಶುಚಿಗೊಳಿಸಿ ಪೂಜೆಯನ್ನು ಮಾಡಿದ್ದಾರೆ.
ವಿಗ್ರಹಗಳು ಸಿಕ್ಕಿದ ಜಾಗದಲ್ಲಿಯೇ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಗುತ್ತಿದೆ. ಇನ್ನು ವಿಗ್ರಹ ದರ್ಶನಕ್ಕೆ ಬರುವ ಭಕ್ತರು ಕೂಡ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡುತ್ತಿದ್ದು, ಮತ್ತಷ್ಟು ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿತ್ತು.
ಆದರೆ, ಈಗ ವಿಷ್ಣುವಿನ ದಶಾವತಾರ ಮೂರ್ತಿಗಾಗಿ ತೆಲಂಗಾಣ ಮತ್ತು ಕರ್ನಾಟಕ ಸೇರಿ ಎರಡು ರಾಜ್ಯಗಳ ಭಕ್ತರ ಮಧ್ಯೆ ಪೈಪೋಟಿ ಶುರುವಾಗಿದೆ. ಈ ಮೂರ್ತಿಗಳು ಕರ್ನಾಟಕದ ಗಡಿಯಲ್ಲಿ ಸಿಕ್ಕಿದ್ದರೂ, ಇವು ನಮ್ಮ ರಾಜ್ಯಕ್ಕೆ ಸೇರಿದ ಮೂರ್ತಿವೆಂದು ತೆಲಂಗಾಣ ಭಕ್ತರು ತಕರಾರು ತೆಗೆದಿದ್ದಾರೆ.
ವಿಗ್ರಹಗಳ ಒಡೆತನಕ್ಕಾಗಿ ಭಕ್ತರ ನಡುವೆ ವಾಗ್ವಾದ ಶುರುವಾಗಿದ್ದು, ಇದು ಅತಿರೇಕಕ್ಕೆ ಹೋಗುವ ಮುನ್ನವೇ ದೇವಸೂಗೂರು ಗ್ರಾಮಸ್ಥರು ವಿಗ್ರಹಗಳನ್ನು ತಮ್ಮ ಗ್ರಾಮಕ್ಕೆ ತಂದು ರಾಮಲಿಂಗೇಶ್ವರ ಮಂದಿರದಲ್ಲಿ ಇಟ್ಟು ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ದೋ-ಅಬ್ ಪ್ರದೇಶವಾಗಿರುವ ಕೃಷ್ಣ ನದಿ ಪ್ರದೇಶದಲ್ಲಿ ಬಿಜಾಪುರದ ಮುಸ್ಲಿಮರ ದಾಳಿಯ ವೇಳೆ ಯಾವುದೋ ದೇವಸ್ಥಾನ ನಾಶಗೊಳಿಸಿ, ಮೂರ್ತಿಗಳನ್ನು ನದಿಯಲ್ಲಿ ಬೀಸಾಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಇತಿಹಾಸ ತಜ್ಞೆ ಪದ್ಮಜಾ ದೇಸಾಯಿ ಮಾತನಾಡಿ, ರಾಯಚೂರು ಭಾಗದಲ್ಲಿ 163 ಯುದ್ಧಗಳು ನಡೆದಿವೆ. ವಿಜನಗರ ಸಾಮ್ರಾಜ್ಯದ ಮೇಲೆ ಬಹುಮನಿ ಸುಲ್ತಾನರು ಹಾಗೂ ಆದಿಲ್ ಶಾಹಿಗಳು ದಾಳಿ ಮಾಡಿದ ಅವಧಿಯಲ್ಲಿ ಕಲ್ಯಾಣದ ಚಾಲುಕ್ಯರು ನಿರ್ಮಿಸಿದ್ದ ದೇವಾಲಯದ ಗರ್ಭಗುಡಿಯ ವಿಗ್ರಹಗಳನ್ನು ನದಿಯಲ್ಲಿ ಬೀಸಾಡಿರಬಹುದು ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕೃಷ್ಣ ನದಿಯಲ್ಲಿ ಸಿಕ್ಕಿದ ವಿಗ್ರಹಗಳನ್ನು ಸ್ಥಳೀಯರು ಶುಚಿಗೊಳಿಸಿ ಪೂಜೆ ಮಾಡುತ್ತಿದ್ದು, ಪುರಾತತ್ವ ಇಲಾಖೆಯಿಂದ ಬಂದು ಪರಿಶೀಲನೆ ಮಾಡಿ ವಿಗ್ರಹಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.