ಪತ್ನಿಗೆ ಸೀರೆ ಖರೀದಿಸಿದ ಸಿಎಂ: ಸೀರೆ ಸರಿ ಇಲ್ಲ ಅಂತ ಹೆಂಡತಿ ಬೈಯದಿದ್ರೆ ಸಾಕು ಎಂದ ಬೊಮ್ಮಾಯಿ

First Published Oct 3, 2021, 7:34 AM IST

ಬೆಂಗಳೂರು(ಅ.03): ‘ಸೀರೆ ಸೆಲೆಕ್ಷನ್‌ ಮಾಡುವುದು ನಮಗೆ ಗೊತ್ತಾಗುವುದಿಲ್ಲ. ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ಸೆಲೆಕ್ಷನ್‌ ಚೆನ್ನಾಗಿಲ್ಲ ಎಂದು ಪತ್ನಿ ಬಯ್ಯದಿದ್ದರೆ ಸಾಕು.’ ನಾಡಿನ ದೊರೆ ಬಸವರಾಜ ಬೊಮ್ಮಾಯಿ ಅವರು ‘ಗೃಹ ಸಚಿವರ’ ಬಗ್ಗೆ ಭೀತಿ ವ್ಯಕ್ತಪಡಿಸಿದ ರೀತಿಯಿದು!
 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದ ಖಾದಿ ಮಾರಾಟ ಮಳಿಗೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 16 ಸಾವಿರ ರು. ಮೌಲ್ಯದ ಸೀರೆ ಹಾಗೂ ಇತರ ಉಡುಗೆ ಖರೀದಿಸಿದರು. ಅನಂತರ ಸೀರೆ ಸೆಲೆಕ್ಷನ್‌ ಸರಿ ಹೋಗದಿದ್ದರೆ ತಮ್ಮ ಗೃಹ ಸಚಿವರು ಅರ್ಥಾತ್‌ ಪತ್ನಿ ಬೈಯದಿದ್ದರೆ ಸಾಕು ಎಂದು ತಮಾಷೆಯಾಗಿ ಹೇಳಿದರು.

ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಖಾದಿ ಬಟ್ಟೆಯ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪಟ್ಟೆ ಇರುವ ಬಟ್ಟೆ ಬೇಡ, ಈ ಕಲರ್‌ ರಾಂಗ್‌ ಆಗಿದೆ ಎಂದು ಹೇಳುತ್ತಾ ಕೊನೆಗೆ ತಮಗೆ ಜುಬ್ಬಾ ಹೊಲೆಸಿಕೊಳ್ಳಲು ತಲಾ ಮೂರು ಮೀಟರ್‌ ಅಳತೆಯ ಹಲವು ಜುಬ್ಬಾ ಪೀಸ್‌ ಖರೀದಿಸಿದರು. ನಂತರ ಪತ್ನಿ ಚನ್ನಮ್ಮ ಅವರಿಗಾಗಿ ಸೀರೆ ಖರೀದಿಸಲು ಮುಂದಾದ ಬೊಮ್ಮಾಯಿ ಅವರು ಮೂರ್ನಾಲ್ಕು ಸೀರೆಗಳನ್ನು ಪರಿಶೀಲಿಸಿ ಕೊನೆಗೆ ಹಸಿರು ಬಣ್ಣದ ಸೀರೆ ಆಯ್ಕೆ ಮಾಡಿದರು. ಆಗ ತಮ್ಮ ಜೊತೆಗಿದ್ದ ಸಚಿವ ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ, ‘ಕಾರಜೋಳ ಸಾಹೇಬ್ರೇ ನೀವೂ ಸೀರೆ ಖರೀದಿಸಿ’ ಎಂದು ಹೇಳಿದರು.

‘ಸೀರೆ ಖರೀದಿ ಬಗ್ಗೆ ನನಗೆ ಗೊತ್ತಾಗುವುದಿಲ್ಲ’ ಎಂದು ಕಾರಜೋಳ ಅವರು ಪ್ರತಿಕ್ರಿಯಿಸಿದರು. ಆಗ ಬೊಮ್ಮಾಯಿ ಅವರು, ‘ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ನಾವೇನೋ ಖುಷಿಯಿಂದ ಮನೆಯವರಿಗೆ ಎಂದು ಸೀರೆ ಖರೀದಿ ಮಾಡಿದ್ದೇವೆ. ಆದರೆ ಸೀರೆ ಸೆಲೆಕ್ಷನ್‌ ಸರಿಯಲ್ಲ ಎಂದು ಪತ್ನಿ ಬೈಯದಿದ್ದರೆ ಸಾಕು’ ಎಂದು ಹಾಸ್ಯವಾಗಿ ಹೇಳಿ ಅಲ್ಲಿದ್ದವರು ನಗುವಂತೆ ಮಾಡಿದರು. ಒಟ್ಟು 16,031 ರುಪಾಯಿ ಮೊತ್ತದ ಬಟ್ಟೆಯನ್ನು ಮುಖ್ಯಮಂತ್ರಿಗಳು ಖರೀದಿಸಿದರು.

ಖರೀದಿ ನಡೆಯುತ್ತಿದ್ದಾಗ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗಮಿಸಿ, ‘ಏನು ಸೀರೆ ಖರೀದಿ ಜೋರಾ’ ಎಂದು ಕೇಳಿದರು. ಇದಕ್ಕೆ ಉತ್ತರ ನೀಡಿದ ಬೊಮ್ಮಾಯಿ ಅವರು, ‘ನಮ್ಮದು ಮುಗಿಯಿತು. ಈಗ ನೀವು ಖರೀದಿಸಿ’ ಎಂದು ಮಾತಿನಲ್ಲೇ ಕಾಲೆಳೆದರು. ಆಗ ವಿಜಯೇಂದ್ರ ಅವರೂ 4300 ರು. ಪಾವತಿಸಿ ಸೀರೆಯೊಂದನ್ನು ಖರೀದಿಸಿದರು. ಸಚಿವ ಎಂಟಿಬಿ ನಾಗರಾಜ್‌ ಸಹ 3 ಸಾವಿರ ರು. ಮೌಲ್ಯದ ಸೀರೆ ಖರೀದಿಸಿದರು. ಮುಖ್ಯಮಂತ್ರಿ ಮತ್ತು ಗಣ್ಯರೂ ಖಾದಿ ಬಟ್ಟೆ ಖರೀದಿಸಿದ್ದರಿಂದ ಅಲ್ಲಿದ್ದ ಇನ್ನಿತರರು ಸಹ ಖಾದಿ ಬಟ್ಟೆಕೊಂಡುಕೊಂಡರು.

ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ನಾಯಕರು ಖಾದಿ ವಸ್ತ್ರ ಅಭಿಯಾನ ನಡೆಸಿದರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ವಿಜಯೇಂದ್ರ, ಎಂಟಿಬಿ ನಾಗರಾಜ್‌ ವಸ್ತ್ರ ಖರೀದಿಸಿದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಮಂಗಳೂರಿನಲ್ಲಿ ಬಟ್ಟೆ ಖರೀದಿಸಿದರು. ಬೀದರ್‌ನಲ್ಲಿ ಸಚಿವ ಪ್ರಭು ಚವ್ಹಾಣ್‌, ಖಾದಿ ಭಂಡಾರಕ್ಕೆ ತೆರಳಿ ತಮಗಿಷ್ಟವಾದ ಬಟ್ಟೆಗಳನ್ನು ಖರೀದಿ ಮಾಡಿದರು. ಅಲ್ಲದೇ ತಮ್ಮ ಜೊತೆಗಿದ್ದ ಕಾರ್ಯಕರ್ತರು, ಅಭಿಮಾನಿಗಳಿಗೂ ತಲಾ ಒಂದು ಶರ್ಟ್‌ ಮತ್ತು ಕರವಸ್ತ್ರವನ್ನು ಖರೀದಿಸಿ ನೀಡಿದರು. ಇನ್ನು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಶಂಕರ ಪಾಟೀಲ ಮುನೇನಕೊಪ್ಪ, ಹೊಸಪೇಟೆಯಲ್ಲಿ ಸಚಿವರಾದ ಆನಂದ ಸಿಂಗ್‌, ಬಳ್ಳಾರಿಯಲ್ಲಿ ಶ್ರೀರಾಮುಲು, ಶಂಕರಪಾಟೀಲ, ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ, ಗಂಗಾವತಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಖಾದಿ ಬಟ್ಟೆಗಳನ್ನು ಖರೀದಿಸಿ ಅಭಿಯಾನವನ್ನು ಬೆಂಬಲಿಸಿದರು.

click me!