'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!

Published : Dec 08, 2025, 03:59 PM IST

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, 'ಏನು ಅಶೋಕ್, ಸಣ್ಣಗಾಗಿದ್ಯಾ?' ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, 'ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್' ಎಂದು ಹೇಳಿದ್ದಾರೆ.

PREV
15
ನಾಟಿ ಕೋಳಿ ಬಿಡಬೇಡ ಕಣಯ್ಯಾ

ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸದನದ ಒಳಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದ್ದರೂ, ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವೆ ನಡೆದ ಹಗುರವಾದ ಮತ್ತು ತಮಾಷೆಯ ಮಾತುಕತೆ ಗಮನ ಸೆಳೆದಿದೆ.

25
ಸಿಎಂ ಮತ್ತು ಅಶೋಕ್ ಅವರು ಉಭಯ ಕುಶಲೋಪರಿ

ಸೋಮವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಸುವರ್ಣಸೌಧದ ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಇತರ ಶಾಸಕರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೌಪಚಾರಿಕ ಮಾತುಕತೆಯಲ್ಲಿ ನಿರತರಾಗಿದ್ದರು. ಅಧಿವೇಶನದ ಅಜೆಂಡಾ ಮತ್ತು ಸದನ ಸಲಹಾ ಸಮಿತಿ ಸಭೆ ನಡೆಸುವ ಕುರಿತು ಸ್ಪೀಕರ್ ಅವರ ಜೊತೆ ಚರ್ಚೆ ನಡೆಸಿದ ನಂತರ, ಸಿಎಂ ಮತ್ತು ಅಶೋಕ್ ಅವರು ಉಭಯ ಕುಶಲೋಪರಿ ವಿಚಾರ ವಿನಿಮಯ ಮಾಡಿಕೊಂಡರು.

35
'ನಾಟಿ ಕೋಳಿ' ಬಿಡಬೇಡ ಎಂದ ಸಿಎಂ!

ಕುಶಲೋಪರಿ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, 'ಏನು ಅಶೋಕ್, ಸಣ್ಣಗಾಗಿದ್ಯಾ?' ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, 'ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್' ಎಂದು ಹೇಳಿದ್ದಾರೆ. 

ಇದಕ್ಕೆ ತಕ್ಷಣವೇ ಹಾಸ್ಯಮಿಶ್ರಿತ ಧ್ವನಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಏಯ್, ಅದೆಲ್ಲಾ ಬಿಡಬಾರದು. ನೀನು ತಿನ್ನಬೇಕು, ಏನೂ ಆಗಲ್ಲ' ಎಂದು ಸಲಹೆ ನೀಡಿದ್ದಾರೆ. ಆಡಳಿತ ಮತ್ತು ವಿಪಕ್ಷ ನಾಯಕರು ಈ ರೀತಿ ಪರಸ್ಪರ ಹಗುರವಾಗಿ ಮಾತುಕತೆ ನಡೆಸಿ ನಕ್ಕಿದ್ದು, ಅಲ್ಲಿನ ವಾತಾವರಣವನ್ನು ನಗೆಗಡಲಲ್ಲಿ ತೇಲಿಸಿತು. ನಾಟಿ ಕೋಳಿ ತಿನ್ನುವ ಕುರಿತು ಸಿಎಂ ನೀಡಿದ ಸಲಹೆ ಅಲ್ಲಿ ನೆರೆದಿದ್ದ ಎಲ್ಲರ ಮುಖದಲ್ಲಿ ನಗು ತರಿಸಿತ್ತು.

45
ಇದೇ ಅಧಿವೇಶನ ಸಿಎಂ ಆಗಿ ನಿಮಗೆ ಕೊನೆಯದಾ?

ಈ ಮಾತುಕತೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಜೊತೆ 'ಬಾ ಒಂದು ಫೋಟೋ ತೆಗೆದುಕೊಳ್ಳೋಣ' ಎಂದು ಹೇಳಿ ಜೊತೆಯಾಗಿ ಪೋಟೋ ತೆಗೆಸಿಕೊಂಡರು. ಇವರಿಬ್ಬರ ಫೋಟೋ ಸೆಷನ್ ನಡೆಯುತ್ತಿದ್ದಾಗಲೇ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ತಕ್ಷಣ ಮಧ್ಯಪ್ರವೇಶಿಸಿ, 'ಸಾರ್, ಇದೇ ಅಧಿವೇಶನ ಸಿಎಂ ಆಗಿ ನಿಮಗೆ ಕೊನೆಯದಾ?' ಎಂದು ಕಾಲೆಳೆದರು.

55
ಸಿಎಂ ಸಿದ್ದರಾಮಯ್ಯ ಮೌನ

ಆದರೆ, ಸುನೀಲ್ ಕುಮಾರ್ ಅವರ ಈ ರಾಜಕೀಯ ವ್ಯಂಗ್ಯದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನೂ ಮಾತನಾಡದೇ ಸುಮ್ಮನಾದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೌನ ವಹಿಸಿದ್ದು, ಚಳಿಗಾಲದ ಅಧಿವೇಶನದ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ರಾಜಕೀಯ ಸ್ಪರ್ಧೆಯನ್ನು ಸೂಚಿಸುತ್ತದೆ. ಸದನದ ಒಳಗೆ ರಾಜಕೀಯ ಜಟಾಪಟಿ ನಡೆಯುತ್ತಿದ್ದರೂ, ಮೊಗಸಾಲೆಯಲ್ಲಿ ನಾಯಕರು ಪರಸ್ಪರ ಗೌರವ ಮತ್ತು ಸ್ನೇಹಪರ ವಾತಾವರಣ ಕಾಯ್ದುಕೊಂಡಿರುವುದು ಕಂಡುಬಂದಿದೆ.

Read more Photos on
click me!

Recommended Stories